‘ಆಪರೇಷನ್‌ ಬ್ಲೂ ಸ್ಟಾರ್’ : ಪಂಜಾಬನಲ್ಲಿ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರ ರಾಜಕಾರಣದ ಕಾರ್ಯಫಲ !

ಸಂಯುಕ್ತ ಪ್ರಗತಿಪರ ಒಕ್ಕೂಟ (‘ಯುಪಿಎ’ಯ) ಅವಧಿಯಲ್ಲಿ ಗೃಹ ಸಚಿವರಾಗಿದ್ದ ಕಾಂಗ್ರೆಸ್ಸಿನ ಪಿ. ಚಿದಂಬರಂ ಅವರು ಇಂದಿರಾ ಗಾಂಧಿಯವರ ಹತ್ಯೆಯ ವಿಶ್ಲೇಷಣೆ ಮಾಡುವಾಗ, ಅಂದಿನ ದಿನಗಳಲ್ಲಿ ಸ್ವರ್ಣಮಂದಿರದಲ್ಲಿ ನಡೆದ ‘ಆಪರೇಷನ್‌ ಬ್ಲೂಸ್ಟಾರ್’ ಅನ್ನು ದೂಷಿಸುವ ಮೂಲಕ ಅವರು ಒಂದು ಹೊಸ ವಿವಾದಕ್ಕೆ ನಾಂದಿ ಹಾಡಿದರು. ಅಂದಿನ ದಿನಗಳಲ್ಲಿ ಅಥವಾ ಇಂದಿಗೂ, ‘ಆಪರೇಷನ್‌ ಬ್ಲೂ ಸ್ಟಾರ್‌’ನ ನಿರ್ಧಾರವು ಪ್ರಧಾನಿ ಇಂದಿರಾ ಗಾಂಧಿಯವರು ತೆಗೆದುಕೊಂಡ ಅತ್ಯಂತ ಧೈರ್ಯಶಾಲಿ ನಿರ್ಧಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ; ಆದರೆ ಈ ಕಾರ್ಯಾಚರಣೆಯ ಇತರ ಪರಿಣಾಮಗಳು, ಒಬ್ಬ ಪ್ರಧಾನಿಯ ಹತ್ಯೆ, ಒಬ್ಬ ಸೇನಾ ಮುಖ್ಯಸ್ಥರ ಹತ್ಯೆ ಮತ್ತು ಅದರ ನಂತರ ಹಲವು ವರ್ಷಗಳ ಕಾಲ ಹೆಚ್ಚಾದ ಭಯೋತ್ಪಾದನೆ ಹಾಗೂ ಅದರಿಂದಾದ ಅನೇಕ ನಾಗರಿಕರ ಹತ್ಯೆ ಇದರಲ್ಲಿ ಸೇರಿದೆ, ಇದು ಇತಿಹಾಸವಾಗಿದೆ. ಆದರೆ, ‘ಆಪರೇಷನ್‌ ಬ್ಲೂ ಸ್ಟಾರ್’ ಸ್ವತಃ ಇಂದಿರಾ ಗಾಂಧಿಯವರ ಪಂಜಾಬ್‌ ರಾಜಕಾರಣದ ಕಾರ್ಯಫಲವಾಗಿತ್ತು. ಅದು ಹೇಗೆ ಎಂದು ನೋಡೋಣ…

೧. ಜರ್ನೈಲ್‌ ಭಿಂದ್ರನವಾಲೆಯನ್ನು ಬೆಳೆಸುವಲ್ಲಿ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿ ಅವರ ಕೈವಾಡ

ಇಂದಿರಾ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಹೇಳುವ ಕಾಂಗ್ರೆಸ್ಸಿಗರಿಗೆ ಒಂದೋ ಇಂದಿರಾ ಅವರ ವರ್ಚಸ್ವವಾದಿ ರಾಜಕಾರಣದ ಬಗ್ಗೆ ತಿಳಿದಿಲ್ಲ, ಅಥವಾ ನೆಹರು-ಗಾಂಧಿ ಕುಟುಂಬದ ಗುಲಾಮಗಿರಿಯಲ್ಲಿ ಆ ರಾಜಕೀಯವನ್ನು ನಿರ್ಲಕ್ಷಿಸಲು ಬಯಸುತ್ತಾರೆ. ಖಲಿಸ್ತಾನಿ ಭಯೋತ್ಪಾದಕರು ಇಂದಿರಾ ಗಾಂಧಿಯವರ ಪ್ರಾಣವನ್ನು ತೆಗೆದದ್ದು ಸಿಕ್ಖ್‌ರ ಪವಿತ್ರ ಸ್ಥಳವಾದ ಸ್ವರ್ಣ ಮಂದಿರದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ, ತಥಾಕಥಿತ ಸಿಖ್‌ ಜರ್ನೈಲ್‌ ಭಿಂದ್ರನವಾಲೆಯ ಹತ್ಯೆಗೆ ಸೇಡು ತೀರಿಸಿಕೊಳ್ಳಲು; ಆದರೆ ಇದು ಅರ್ಧ ಸತ್ಯ, ಮೂಲತಃ ಈ ಭಿಂದ್ರನವಾಲೆಯ ಭೂತವನ್ನು ರಾಜಕೀಯ ಲಾಭಕ್ಕಾಗಿ ನಿಲ್ಲಿಸುವಲ್ಲಿ ಸ್ವತಃ ಇಂದಿರಾ ಗಾಂಧಿ ಮತ್ತು ಅವರ ಪ್ರೀತಿಯ ಪುತ್ರ ಸಂಜಯ ಗಾಂಧಿ ಅವರ ಪಾತ್ರ ದೊಡ್ಡದಾಗಿತ್ತು. ೧೯೭೭ ನೇ ಇಸ್ವಿಯಲ್ಲಿ ಪಂಜಾಬ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತು ಮತ್ತು ಅಕಾಲಿ ದಳವು ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಿತು. ಪ್ರಕಾಶ ಸಿಂಗ್‌ ಬಾದಲ್‌ ಅವರು ಪಂಜಾಬಿನ ಮುಖ್ಯಮಂತ್ರಿಯಾದರು. ಅಷ್ಟೇ ಅಲ್ಲ, ಅದರ ನಂತರದ ಪಂಜಾಬಿನ ಪ್ರತಿ ಚುನಾವಣೆಯಲ್ಲೂ ಅಕಾಲಿ ದಳವು ಕಾಂಗ್ರೆಸ್ನ್ನು ಸೋಲಿಸುತ್ತಿತ್ತು. ಆಗ ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಅಕಾಲಿ ದಳಕ್ಕೆ ಪ್ರಬಲ ಸ್ಪರ್ಧೆ ನೀಡಬಲ್ಲ ಒಬ್ಬ ದೊಡ್ಡ ನಾಯಕನ ಹುಡುಕಾಟದಲ್ಲಿತ್ತು. ಜ್ಞಾನಿ ಜೈಲ್‌ ಸಿಂಗ್, ದರ್ಬಾರ್‌ ಸಿಂಗ್‌ ಮತ್ತು ಸ್ವರ್ಣ ಸಿಂಗ್‌ ಅವರು ಅಂದಿನ ಪಂಜಾಬ್‌ ರಾಜಕಾರಣದಲ್ಲಿ ಕಾಂಗ್ರೆಸ್ಸಿನ ಪ್ರಮುಖ ಹೆಸರುಗಳಾಗಿದ್ದವು, ಅವರ ನಡುವೆಯೂ ಪರಸ್ಪರ ಪ್ರಾಬಲ್ಯದ ಹೋರಾಟವಿತ್ತು.

೨. ಅಕಾಲಿ ದಳವನ್ನು ಮಣಿಸಲು ಕಾಂಗ್ರೆಸ್ಸಿನ ಗ್ಯಾನಿ ಜೈಲ್‌ಸಿಂಗ್‌ ಅವರಿಂದ ಭಿಂದ್ರನವಾಲೆಯನ್ನು ಮುಂದೆ ತಂದರು

ಈ ರಾಜಕೀಯವನ್ನು ಅರ್ಥಮಾಡಿಕೊಳ್ಳುವಾಗ ಪಂಜಾಬಿನ ಸಿಕ್ಖ್ ಧಾರ್ಮಿಕ ನಂಬಿಕೆಗಳನ್ನು ಸಹ ಗಮನದಲ್ಲಿಡಬೇಕು. ಮೂಲತಃ ಸಿಕ್ಖ್ ಧರ್ಮದಲ್ಲಿ ನಿರಂಕಾರಿ ಮತ್ತು ಅಕಾಲಿ ಎಂಬ ಎರಡು ಭಾಗಗಳಿವೆ. ಅವರ ನಡುವೆ ಧಾರ್ಮಿಕ ವೈಷಮ್ಯವೂ ಇದೆ. ಸಿಕ್ಖ್‌ರ ಅಂತಿಮ ಗುರು, ಗುರು ಗೋವಿಂದ ಸಿಂಗ್‌ ಅವರು ‘ಇನ್ನು ಮುಂದೆ ದೇಹಧಾರಿ ಗುರು ಇರುವುದಿಲ್ಲ, ಬದಲಿಗೆ ‘ಗುರು ಗ್ರಂಥ ಸಾಹಿಬ್’ ಮಾತ್ರ ಸಿಕ್ಖ್‌ರ ಗುರುವಾಗಿರುತ್ತದೆ’ ಎಂದು ಆದೇಶ ನೀಡಿದರು; ಆದರೆ ನಿರಂಕಾರಿ ಪಂಥದಲ್ಲಿ ಇಂದಿಗೂ ದೇಹಧಾರಿ ಗುರುಗಳನ್ನು ಗಾದಿಯ ಉತ್ತರಾಧಿಕಾರಿಯೆಂದು ಪರಿಗಣಿಸಲಾಗುತ್ತದೆ, ಇದು ಅಕಾಲಿ ಪಂಥಕ್ಕೆ ಸ್ವೀಕಾರಾರ್ಹವಿಲ್ಲ. ಆದ್ದರಿಂದ ಅಕಾಲಿ ಮತ್ತು ನಿರಂಕಾರಿ ಪಂಥಗಳ ನಡುವೆ ಧಾರ್ಮಿಕ ವೈಷಮ್ಯವಿದೆ. ಆಗಿನ ಕಾಂಗ್ರೆಸ್ಸಿನ ದುರ್ಬಲ ಸಮಯದಲ್ಲಿ, ಅಕಾಲಿ ದಳವನ್ನು ಮಣಿಸಲು ಪಂಜಾಬಿನಲ್ಲಿ ದೊಡ್ಡ ಮುಖದ ಅಗತ್ಯವಿದ್ದಾಗ, ಕಾಂಗ್ರೆಸ್‌ ನಾಯಕ ಗ್ಯಾನಿ ಜೈಲ್‌ ಸಿಂಗ್‌ ಅವರು ಜರ್ನೈಲ್‌ ಭಿಂದ್ರನವಾಲೆಯನ್ನು ಹುಡುಕಿದರು. ಭಿಂದ್ರನವಾಲೆ ಆಗ ‘ದಮ್‌ ದಮಿ ಟಕಸಾಲ್’ ನ ಧಾರ್ಮಿಕ ಪ್ರಚಾರಕರಾಗಿದ್ದರು. ಸಿಕ್ಖ್ ಧರ್ಮದಲ್ಲಿ ಈ ‘ದಮ್‌ ದಮಿ ಟಕಸಾಲ್‌’ಗೂ ವಿಶೇಷ ಮಹತ್ವವಿದೆ. ಇಂತಹ ಪ್ರಭಾವಿ ವ್ಯಕ್ತಿ ಸಿಕ್ಕ ನಂತರ, ಅಕ್ರಮವಾಗಿ ಕಾಂಗ್ರೆಸ್ಸಿನ ಅಂದಿನ ಸರ್ವೋಚ್ಚ ನಾಯಕರಾದ ಸಂಜಯ ಗಾಂಧಿ ಅವರೊಂದಿಗೆ ಭೇಟಿ ಮತ್ತು ಸಂದರ್ಶನ ಕಾರ್ಯಕ್ರಮವನ್ನೂ ಏರ್ಪಡಿಸಲಾಯಿತು. ಸಂಜಯ ಗಾಂಧಿಯವರಿಗೆ ಭಿಂದ್ರನವಾಲೆಯ ಅಹಂಕಾರ ಬಹಳ ಇಷ್ಟವಾಯಿತು. ಒಂದು ಸಂದರ್ಶನದಲ್ಲಿ, ಸಂಜಯ ಗಾಂಧಿಯವರ ಅಂದಿನ ಆಪ್ತ ಸ್ನೇಹಿತ ಕಮಲನಾಥ ಅವರು ಕಾಲಕಾಲಕ್ಕೆ ಭಿಂದ್ರನವಾಲೆಗೆ ಆರ್ಥಿಕ ನೆರವು ನೀಡಿದ್ದನ್ನು ಒಪ್ಪಿಕೊಂಡಿದ್ದರು; ಆದರೆ ಇದೇ ಭಿಂದ್ರನವಾಲೆ ಮುಂದೆ ಭಸ್ಮಾಸುರನಾಗುತ್ತಾನೆ ಎಂದು ಯಾರೂ ಯೋಚಿಸಲಿಲ್ಲ.

೩. ಬಾಬಾ ಗುರುಬಚನ ಸಿಂಗ್‌ ಅವರ ಹತ್ಯೆ

೧೩ ಏಪ್ರಿಲ್‌ ೧೯೭೮ ರಂದು ನಿರಂಕಾರಿ ಮತ್ತು ಅಕಾಲಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆಯಿತು. ಅದರಲ್ಲಿ ೧೩ ಜನ ಅಕಾಲಿ ಸಿಕ್ಖ್‌ರು ಮರಣಹೊಂದಿದರು. ಈ ಪ್ರಕರಣದಲ್ಲಿ ನಿರಂಕಾರಿ ಬಾಬಾ ಗುರುಬಚನ ಸಿಂಗ್‌ ಅವರನ್ನು ಬಂಧಿಸಲಾಯಿತು ಮತ್ತು ಅವರ ಮೇಲೆ ಹರಿಯಾಣ ರಾಜ್ಯದಲ್ಲಿ ಮೊಕದ್ದಮೆ ಸಹ ದಾಖಲಿಸಲಾಯಿತು; ಆದರೆ ಈ ಪ್ರಕರಣದಿಂದ ಬಾಬಾ ಗುರುಬಚನ ಸಿಂಗ್‌ ಆಶ್ಚರ್ಯಕರವಾಗಿ ಬಿಡುಗಡೆಯಾದರು. ಈ ಘಟನೆಯಿಂದ ಸಿಕ್ಖ್ ಸಮುದಾಯದಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಈ ಎಲ್ಲದರ ನಡುವೆ ಭಿಂದ್ರನವಾಲೆ ಪ್ರವೇಶಿಸಿ ಅಕಾಲಿಗಳ ಕೈಯಿಂದ ಈ ಆಂದೋಲನವನ್ನು ತನ್ನ ಕೈಗೆ ತೆಗೆದುಕೊಂಡರು ಮತ್ತು ಇದೇ ಸಂದರ್ಭದಲ್ಲಿ ೨೪ ಏಪ್ರಿಲ್‌ ೧೯೮೦ ರಂದು ಬಾಬಾ ಗುರುಬಚನ ಸಿಂಗ್‌ ಅವರ ಹತ್ಯೆಯಾಯಿತು. ಇದರ ನಂತರ ಪಂಜಾಬಿನ ಧಾರ್ಮಿಕ ಚಳುವಳಿ ಸಂಪೂರ್ಣವಾಗಿ ಭಿಂದ್ರನವಾಲೆಯ ಕೈಗೆ ಹೋಯಿತು. ಬಾಬಾ ಗುರುಬಚನ ಸಿಂಗ್‌ ಹತ್ಯೆಗೆ ಸಂಬಂಧಿಸಿದವರು ಭಿಂದ್ರನವಾಲೆ ಜೊತೆಗಿದ್ದರು ಎಂಬುದು ಬಹಿರಂಗ ರಹಸ್ಯವಾಗಿತ್ತು.

೪. ಭಿಂದ್ರನವಾಲೆಯ ಸೊಕ್ಕು ಮತ್ತು ಕಾಂಗ್ರೆಸ್ಸಿನ ಮನಃಸ್ಥಿತಿ

ಈ ಎಲ್ಲಾ ಘಟನೆಗಳು ನಡೆಯುತ್ತಿರುವಾಗ, ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್‌ ಅವರು ಭಿಂದ್ರನವಾಲೆಯ ಸಂದರ್ಶನ ಪಡೆಯಲು ಹೋಗಿದ್ದಾಗ ಆದ ಘಟನೆಯನ್ನು ತಮ್ಮ ‘ಬಿಯಾಂಡ್‌ ದಿ ಲೈಫ್’ ಪುಸ್ತಕದಲ್ಲಿ ಬರೆದಿದ್ದಾರೆ. ಕುಲದೀಪ ನಯ್ಯರ್‌ ಅವರು ಭಿಂದ್ರನವಾಲೆಗೆ ಪೊಲೀಸರ ಬಳಿಯಿರುವ ಶಸ್ತ್ರಾಸ್ತ್ರಗಳ ಬಗ್ಗೆ ಹಾಗೂ ಅವರಿಗೆ ಇರುವ ಸರಕಾರಿ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿಸಿದಾಗ, ಭಿಂದ್ರನವಾಲೆ ಅಷ್ಟೇ ಸೊಕ್ಕಿನಿಂದ, ‘ಅವರಿಗೆ ನನ್ನೊಂದಿಗೆ ಹೋರಾಡಲು ಹೇಳಿ’ ಎಂದು ಉತ್ತರಿಸಿದರು. ಅದೇ ಸಮಯದಲ್ಲಿ, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಮಾಜಿ ರಕ್ಷಣಾ ಮತ್ತು ವಿದೇಶಾಂಗ ಸಚಿವರಾಗಿದ್ದ ಸ್ವರ್ಣಸಿಂಗ್‌ ಅವರೂ ಭಿಂದ್ರನವಾಲೆಯನ್ನು ಭೇಟಿಯಾಗಲು ಬಂದರು ಮತ್ತು ಅವನ ಮುಂದೆ ನೆಲದ ಮೇಲೆ ಕುಳಿತುಕೊಂಡರು. ಇದನ್ನು ನೋಡಿ ಕುಲದೀಪ ನಯ್ಯರ್‌ ಇವರಿಗೆ ಆಶ್ಚರ್ಯಗೊಂಡು, ಸ್ವರ್ಣ ಸಿಂಗ್‌ ಅವರಿಗೆ ತಮ್ಮ ಕುರ್ಚಿಯನ್ನು ನೀಡಿದರು; ಆದರೆ ಸ್ವರ್ಣ ಸಿಂಗ್‌ ಅವರು, ‘ಸಂತರ ಮುಂದೆ ಕುರ್ಚಿಯ ಮೇಲೆ ಹೇಗೆ ಕುಳಿತುಕೊಳ್ಳುವುದು ?’ ಎಂದು ಹೇಳಿ ನೆಲದಲ್ಲಿ ಕುಳಿತುಕೊಳ್ಳಲು ಆದ್ಯತೆ ನೀಡಿದರು. ಇದು ಅಂದಿನ ಕಾಂಗ್ರೆಸ್ಸಿನ ಮನಃಸ್ಥಿತಿಯಾಗಿತ್ತು.

೫. ಕಾಂಗ್ರೆಸ್‌ ಅಧಿಕಾರ ಪಡೆಯುವುದು ಮತ್ತು ಇಂದಿರಾ ಗಾಂಧಿಯವರಿಂದ ಭಿಂದ್ರನವಾಲೆ ಜೊತೆಗಿನ ಸಂಬಂಧ ನಿರಾಕರಣೆ

೧೯೮೦ ರ ಪಂಜಾಬ ಚುನಾವಣೆಯಲ್ಲಿ, ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ದೊಡ್ಡ ಪ್ರಮಾಣದಲ್ಲಿ ಮತ್ತೆ ಅಧಿಕಾರವನ್ನು ಗಳಿಸಿತು. ಸಂಜಯ ಗಾಂಧಿ ಮತ್ತು ಗ್ಯಾನಿ ಜೈಲ್‌ ಸಿಂಗ್‌ ಅವರು ಭಿಂದ್ರನವಾಲೆಗೆ ಹೊಸ ಪಕ್ಷವನ್ನು ಸಹ ಸ್ಥಾಪಿಸಲು ಸಹಾಯ ಮಾಡಿದರು. ಪ್ರತಿಯಾಗಿ, ಭಿಂದ್ರನವಾಲೆ ಅನೇಕ ಸ್ಥಳಗಳಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸಹಾಯ ಮಾಡಿದರು. ಅದರಲ್ಲಿ ಅಮೃತಸರ ಸಹ ಒಂದು ಪ್ರಮುಖ ಕ್ಷೇತ್ರವಾಗಿತ್ತು. ಈ ಅವಧಿಯಲ್ಲಿ ‘ಬಿಬಿಸಿ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಇಂದಿರಾ ಗಾಂಧಿ ಅವರು ‘ಭಿಂದ್ರನವಾಲೆಯನ್ನು ಗುರುತಿಸುವುದಿಲ್ಲ ಮತ್ತು ಅವನಿಗೆ ಕಾಂಗ್ರೆಸ್‌ನೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂದು ಸಂಪೂರ್ಣವಾಗಿ ನಿರಾಕರಿಸಿದರು; ಆದರೆ ಈ ಚುನಾವಣೆಯ ನಂತರ ಗ್ಯಾನಿ ಜೈಲ್‌ ಸಿಂಗ್‌ ಅವರಿಗೆ ಕೇಂದ್ರ ಗೃಹ ಸಚಿವರಾಗಿ ಬಡ್ತಿ ನೀಡಲಾಯಿತು ಮತ್ತು ದರ್ಬಾರ್‌ ಸಿಂಗ್‌ ಅವರು ಪಂಜಾಬಿನ ಮುಖ್ಯಮಂತ್ರಿಯಾದರು. ತ್ರಿಕೋನದಲ್ಲಿನ ಎರಡು ಕೋನಗಳ ನಡುವಿನ ಮೂರನೇ ಕೋನ ಭಿಂದ್ರನವಾಲೆ ಆಗಿದ್ದರು ಮತ್ತು ಅವರು ದಿನದಿಂದ ದಿನಕ್ಕೆ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದರು. ಇವೆಲ್ಲದರ ನಡುವೆ ಅಕಾಲಿ ದಳ ಮತ್ತೆ ಹಳೆಯ ರಾಜಕೀಯ ನಿಲುವಿಗೆ ಮರಳಿದ್ದರಿಂದ ಪಂಜಾಬಿನ ರಾಜಕೀಯ ಪರಿಸ್ಥಿತಿ ಸ್ಫೋಟಕವಾಯಿತು.

೬. ‘ಪಂಜಾಬ್‌ ಕೇಸರಿ’ಯ ಮುಖ್ಯ ಸಂಪಾದಕರಾದ ಲಾಲಾ ಜಗತ ನಾರಾಯಣ ಅವರ ಹತ್ಯೆ, ಬಿಂದ್ರನವಾಲೆ ಬಂಧನ ಮತ್ತು ಕಾಂಗ್ರೆಸ್ಸಿನಿಂದ ಬಿಡುಗಡೆ

ಮುಖ್ಯ ಸಂಪಾದಕ ಲಾಲಾ ಜಗತ ನಾರಾಯಣ

೯ ಸೆಪ್ಟೆಂಬರ್‌ ೧೯೮೧ ರಂದು, ಪಟಿಯಾಲಾ-ಜಲಂಧರ್‌ ಹೆದ್ದಾರಿಯಲ್ಲಿ ೨ ಬುಲೆಟ್‌ ಬೈಕ್‌ಗಳಲ್ಲಿ ಬಂದ ೪ ಭಯೋತ್ಪಾದಕರು ಪಂಜಾಬಿನ ಪ್ರಮುಖ ಹಿಂದಿ ದಿನಪತ್ರಿಕೆ ‘ಪಂಜಾಬ್‌ ಕೇಸರಿ’ಯ ಮುಖ್ಯ ಸಂಪಾದಕ ಲಾಲಾ ಜಗತ ನಾರಾಯಣ ಅವರನ್ನು ಹತ್ಯೆ ಮಾಡಿದರು. ಇದರ ನೇರ ಸುಳಿವು ಭಿಂದ್ರನವಾಲೆಯ ಕಡೆಗೆ ತಿರುಗಿತು. ಇದಕ್ಕೆ ಅಂದಿನ ಕಾರಣಗಳೂ ಇದ್ದವು, ಮೊದಲನೆಯದಾಗಿ ಲಾಲಾ ಜಗತ ನಾರಾಯಣ ಅವರು ಭಿಂದ್ರನವಾಲೆಯ ಪ್ರಬಲ ವಿರೋಧಿಯಾಗಿದ್ದರು. ಅವರು ನಿರಂತರವಾಗಿ ಅವರ ವಿರುದ್ಧ ಬರೆಯುತ್ತಿದ್ದರು. ಎರಡನೆಯದಾಗಿ, ಆಗ ನಡೆಯುತ್ತಿದ್ದ ಪಂಜಾಬ್‌ ರಾಜ್ಯದ ಜನಗಣತಿಯಲ್ಲಿ, ಅವರು ಹಿಂದೂಗಳಿಗೆ ‘ತಮ್ಮ ಮಾತೃಭಾಷೆಯನ್ನು ಪಂಜಾಬಿ ಎಂದು ಬರೆಯದೆ ಹಿಂದಿ ಎಂದು ಬರೆಯಿರಿ’ ಎಂದು ಕರೆ ನೀಡಿದ್ದರು, ಇದಕ್ಕೆ ಭಿಂದ್ರನವಾಲೆಯ ವಿರೋಧವಿತ್ತು. ಲಾಲಾ ಜಗತ ನಾರಾಯಣ ಅವರ ಹತ್ಯೆಯ ೪ ದಿನಗಳ ನಂತರ ಭಿಂದ್ರನವಾಲೆ ವಿರುದ್ಧ ಬಂಧನ ವಾರಂಟ್‌ ಹೊರಡಿಸ ಲಾಯಿತು. ಆಗ ಭಿಂದ್ರನವಾಲೆ ಹರಿಯಾಣದಲ್ಲಿದ್ದರು; ಆದರೆ ಆಗ ಅವರನ್ನು ಬಂಧಿಸದೆ ಸರಕಾರಿ ವಾಹನದಲ್ಲಿ ಹೋಗಲು ಅನುಮತಿಯನ್ನು ನೀಡಲಾಯಿತು. ಮುಂದೆ ಪಂಜಾಬಿನಲ್ಲಿನ ವಿರೋಧದ ವಾತಾವರಣವನ್ನು ನೋಡಿ ಕೊನೆಗೆ ೧೫ ಸೆಪ್ಟೆಂಬರ್‌ ೧೯೮೧ ರಂದು ಭಿಂದ್ರನವಾಲೆಯನ್ನು ಬಂಧಿಸಲಾಯಿತು; ಆದರೆ ಅಲ್ಲಿಯವರೆಗೆ ಪ್ರಬಲರಾಗಿದ್ದ ಭಿಂದ್ರನವಾಲೆ ಧಾರ್ಮಿಕ ರಾಜಕೀಯವನ್ನು ಪ್ರಾರಂಭಿಸಿದರು. ಇದರೊಂದಿಗೆ ಸಿಕ್ಖ್‌ರಿಗಾಗಿ ಪ್ರತ್ಯೇಕ ಖಲಿಸ್ತಾನದ ಬೇಡಿಕೆ ಮುನ್ನೆಲೆಗೆ ಬಂದಿತು. ಈ ಎಲ್ಲ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಭಿಂದ್ರನವಾಲೆಯ ಬಿಡುಗಡೆಯಾಯಿತು. ಅಂದಿನ ಗೃಹರಾಜ್ಯ ಸಚಿವರಾದ ಬೂಟಾಸಿಂಗ್‌ ಅವರು ಭಿಂದ್ರನವಾಲೆ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಘೋಷಿಸಿದರು; ಆದರೆ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯನ್ನು ಬರೆದ ಲೇಖಕಿ ಪುಪುಲ್‌ ಜಯಕರ್‌ ಅವರ ಪ್ರಕಾರ, ಭಿಂದ್ರನವಾಲೆಯ ಬಿಡುಗಡೆಯಲ್ಲಿ ಸ್ವತಃ ಇಂದಿರಾ ಗಾಂಧಿ ಅವರು ನೇರವಾಗಿ ಹಸ್ತಕ್ಷೇಪ ಮಾಡಿದ್ದರು.

೭. ಭಿಂದ್ರನವಾಲೆಯ ದೆಹಲಿ ಪ್ರವಾಸ

ಇದಾದ ನಂತರ ಭಿಂದ್ರನವಾಲೆ ತನ್ನ ಎಲ್ಲಾ ಶಸ್ತ್ರಸಜ್ಜಿತ ಸೈನಿಕರೊಂದಿಗೆ ದೆಹಲಿಗೆ ಭೇಟಿ ನೀಡಲು ಹೋದರು. ಅವರ ಈ ಭೇಟಿಯನ್ನು ಒಬ್ಬ ಕಾಂಗ್ರೆಸ್‌ ನಾಯಕರು ಪ್ರಾಯೋಜಿಸಿದ್ದರು, ಅವರ ಹೆಸರು ಇಂದಿಗೂ ರಹಸ್ಯವಾಗಿದೆ; ಆದರೆ ಈ ಸಮಯದಲ್ಲಿ ಭಿಂದ್ರನವಾಲೆ ಸಿಕ್ಖ್ ಕಾಂಗ್ರೆಸ್‌ ನಾಯಕ ಸಂತೋಖ ಸಿಂಗ್‌ ಅವರ ಮನೆಯಲ್ಲಿ ಶೋಕಸಭೆಯ ನೆಪದಲ್ಲಿ ಭೇಟಿ ನೀಡಿದರು, ಆಗ ರಾಜೀವ ಗಾಂಧಿ ಸಹ ಅಲ್ಲಿ ಉಪಸ್ಥಿತರಿದ್ದರು.

೮. ಭಿಂದ್ರನವಾಲೆಯ ಖಲಿಸ್ತಾನ ಬೇಡಿಕೆಗೆ ಪಾಕ್‌ನಿಂದ ನೆರವು

ಈ ಎಲ್ಲದರ ನಡುವೆ ಭಿಂದ್ರನವಾಲೆ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಸಂಪೂರ್ಣವಾಗಿ ಪ್ರಯತ್ನಿಸಿದನು ಮತ್ತು ಹೆಮ್ಮೆಯಿಂದ ಇದರ ಎಲ್ಲಾ ಶ್ರೇಯಸ್ಸನ್ನು ಕಾಂಗ್ರೆಸ್ಸಿಗೆ ಕೊಡುತ್ತಿದ್ದರು. ಈ ನಾಟಕದ ಸಮಯದಲ್ಲಿ ಕಾಂಗ್ರೆಸ್‌ ಕಣ್ಣು ಮುಚ್ಚಿ ಕುಳಿತಿತ್ತು ಮತ್ತು ತನ್ನ ರಾಜಕೀಯ ಲಾಭವನ್ನು ನೋಡುತ್ತಿತ್ತು. ಇತ್ತ, ಭಿಂದ್ರನವಾಲೆಗೆ ಪ್ರತ್ಯೇಕ ಖಲಿಸ್ತಾನ್‌ ವಿಷಯದ ಮೇಲೆ ಭಾರತದ ಶತ್ರುವಾದ ಪಾಕಿಸ್ತಾನದಿಂದ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವು ಸಿಗಲು ಪ್ರಾರಂಭಿಸಿತು.

೯. ಕಾಂಗ್ರೆಸ್ಸಿನ ಒಡೆದಾಳುವ ರಾಜಕಾರಣದ ಫಲಿತಾಂಶ

ಡಿಸೆಂಬರ್‌ ೧೯೮೩ ರಲ್ಲಿ, ಜರ್ನೈಲ್‌ ಸಿಂಗ್‌ ಭಿಂದ್ರನವಾಲೆ ಸ್ವರ್ಣ ಮಂದಿರದ ಅಕಾಲ ತಖ್ತ್‌ನಲ್ಲಿ ಆಶ್ರಯ ಪಡೆದಿದ್ದರು. ೩೦ ಮೇ ೧೯೮೪ ರ ಹೊತ್ತಿಗೆ ಸ್ವರ್ಣ ಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣವಾಗಿ ಖಲಿಸ್ತಾನಿ ಭಯೋತ್ಪಾದಕರ ಕೈಯಲ್ಲಿತ್ತು. ಶೀಘ್ರವಾಗಿ ಕ್ರಮ ಕೈಗೊಳ್ಳದಿದ್ದರೆ, ಪ್ರತ್ಯೇಕ ಖಲಿಸ್ತಾನ್‌ ಘೋಷಣೆಯೊಂದಿಗೆ ಪಂಜಾಬ್‌ ಇದು ಭಾರತದಿಂದ ಕೈತಪ್ಪುವ ಲಕ್ಷಣಗಳು ಕಾಣಲಾರಂಭಿಸಿದವು. ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ಸಿನ ರಾಜಕೀಯ ಮಹತ್ವಾಕಾಂಕ್ಷೆಯ ದೊಡ್ಡ ಬೆಲೆಯನ್ನು ಪಂಜಾಬಿನೊಂದಿಗೆ ದೇಶದ ಸಾಮಾನ್ಯ ಜನರು ತೆರಬೇಕಾಯಿತು. ಇದರ ಫಲಿತಾಂಶ ೩೧ ಅಕ್ಟೋಬರ್‌ ೧೯೮೪ ರಂದು ಇಂದಿರಾ ಗಾಂಧಿಯವರ ಹತ್ಯೆಯಲ್ಲಿ ಆಯಿತು. ಬ್ರಿಟಿಷ್‌ ಆಡಳಿತಗಾರರ ‘ಒಡೆದಾಳುವ’ ತತ್ತ್ವದ ಮೇಲೆ ರಾಜಕೀಯ ವ್ಯವಹಾರ ಮಾಡಲು ಪ್ರಯತ್ನಿಸಿದ ರಾಜಕಾರಣದ ದುಃಖದ ಅಂತ್ಯವಿದು; ಆದರೆ ಈ ಎಲ್ಲದರಿಂದ ಕಾಂಗ್ರೆಸ್‌ ಏನನ್ನಾದರೂ ಕಲಿತಿದೆಯೆಂದು ರಾಹುಲ್‌ ಗಾಂಧಿಯವರ ಇಂದಿನ ರಾಜಕಾರಣವನ್ನು ನೋಡಿದರೆ ಅನಿಸುವುದಿಲ್ಲ.

(ಆಧಾರ : ವಿವಿಧ ಜಾಲತಾಣಗಳು)