ಆಂಧ್ರಪ್ರದೇಶ – ಸಮಾಜಘಾತುಕನೊಬ್ಬ ಗರ್ಭಗುಡಿಯ ದೀಪದಿಂದ ಸಿಗರೇಟ್ ಹಚ್ಚಿದ!

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯತ್ನ!

(ಈ ಮೇಲೆ ಪ್ರಕಟಿಸಿದ ಸಿಚ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಕರ್ನೂಲ್ (ಆಂಧ್ರಪ್ರದೇಶ) – ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿರುವ ದೇವಸ್ಥಾನದಲ್ಲಿ ಕೆಲವು ಸಮಾಜಘಾತುಕರು ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಕರ್ನೂಲ್ ಜಿಲ್ಲೆಯ ಆದೋನಿಯಲ್ಲಿ ನಡೆದಿದೆ. ಇಲ್ಲಿನ ಪ್ರಸಿದ್ಧ ಸಂತಾನ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪವಿರುವ ಶಿವದೇವಾಲಯದಲ್ಲಿ, ಗರ್ಭಗುಡಿಯಲ್ಲಿ ಉರಿಯುತ್ತಿದ್ದ ಪವಿತ್ರ ದೀಪದಿಂದ ಸಮಾಜಘಾತುಕನೊಬ್ಬ ಸಿಗರೇಟ್ ಹಚ್ಚಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ.

೧. ವಡ್ಡೆ ಈರಣ್ಣ ಎಂಬ ವ್ಯಕ್ತಿ ಶಿವದೇವಾಲಯ ಪ್ರವೇಶಿಸಿ, ಗರ್ಭಗುಡಿಯ ಮುಂದಿದ್ದ ಪವಿತ್ರ ದೀಪದಿಂದ ಸಿಗರೇಟ್ ಹಚ್ಚಿದ್ದಾನೆ. ತದನಂತರ ಆತ ದೇವಸ್ಥಾನದ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ಜೊತೆಯಲ್ಲಿದ್ದ ಸ್ನೇಹಿತರು ಈ ಇಡೀ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

೨. ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೇವಸ್ಥಾನದ ಪವಿತ್ರತೆಯನ್ನು ಭಂಗಗೊಳಿಸಿದ ಈರಣ್ಣ ಮತ್ತು ಆತನ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

೩. ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ; ಆದರೆ ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಬಾಲ್ಯದಿಂದಲೇ ಧರ್ಮಶಿಕ್ಷಣ ನೀಡಿದ್ದರೆ, ಹಿಂದೂ ಧರ್ಮದಲ್ಲಿ ಇಂತಹ ಸಮಾಜಘಾತುಕರು ಹುಟ್ಟಿಕೊಳ್ಳುತ್ತಿರಲಿಲ್ಲ! ಇಂತಹ ಘಟನೆಗಳು ಹಿಂದೂಗಳಿಗೆ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಸುವುದರ ಮಹತ್ವವನ್ನು ಒತ್ತಿಹೇಳುತ್ತವೆ!