ಪಾಕಿಸ್ತಾನದಲ್ಲಿ ೧,೨೦೦ ವರ್ಷಗಳಷ್ಟು ಹಳೆಯ ದೇವಸ್ಥಾನ ಪತ್ತೆ!

ಪ್ರಾಚೀನ ೮ ಸ್ಥಳಗಳ ಶೋಧ

ಇಸ್ಲಾಮಾಬಾದ್ – ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದಲ್ಲಿ ನಡೆದ ಪುರಾತತ್ವ ಉತ್ಖನನದಲ್ಲಿ ೧,೨೦೦ ವರ್ಷಗಳಷ್ಟು ಹಳೆಯದಾದ ಒಂದು ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ಜೊತೆಗೆ, ಈ ಶೋಧ ಕಾರ್ಯದಲ್ಲಿ ಪ್ರಾಚೀನ ೮ ಸ್ಥಳಗಳು ಸಹ ಪತ್ತೆಯಾಗಿವೆ.

ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಸ್ವಾತ್‌ನಿಂದ ತಕ್ಷಶಿಲೆಯವರೆಗೆ ಪುರಾತತ್ವ ಸಂಶೋಧನೆ ನಡೆಯುತ್ತಿದೆ. ಇಟಲಿಯ ಪುರಾತತ್ವಜ್ಞರು ಖೈಬರ್ ಪಖ್ತೂನ್‌ಖ್ವಾ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಈ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಇಟಲಿಯ ಪುರಾತತ್ವ ಕಾರ್ಯಾಚರಣೆಯ ನಿರ್ದೇಶಕ ಡಾ. ಲೂಕಾ ಅವರು, ಸ್ವಾತ್ ಜಿಲ್ಲೆಯ ಬಾರಿಕೋಟ್‌ನಲ್ಲಿ ನಡೆದ ಉತ್ಖನನದಲ್ಲಿ ೧,೨೦೦ ವರ್ಷಗಳಷ್ಟು ಹಳೆಯ ದೇವಸ್ಥಾನ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ‘ಖೈಬರ್ ಪಥ’ ಎಂಬ ಯೋಜನೆಯ ಕಾರ್ಯ ನಡೆಯುತ್ತಿದೆ. ೨೦೨೫ರ ಜೂನ್ ೧ ರಂದು ಪ್ರಾರಂಭವಾದ ಈ ಯೋಜನೆಯ ಉದ್ದೇಶವು ಖೈಬರ್ ಪಖ್ತೂನ್‌ಖ್ವಾ ಪ್ರದೇಶದಲ್ಲಿ ಪ್ರವಾಸೋದ್ಯಮ, ಸ್ಥಳೀಯ ಅಭಿವೃದ್ಧಿ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವುದಾಗಿದೆ.

ಇಟಲಿಯ ಪುರಾತತ್ವಜ್ಞರು ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇಲ್ಲಿಯವರೆಗೆ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದಲ್ಲಿ ೫೦ಕ್ಕೂ ಹೆಚ್ಚು ಪುರಾತತ್ವ ಸ್ಥಳಗಳನ್ನು ಶೋಧಿಸಿದ್ದಾರೆ. ಇವುಗಳಲ್ಲಿ ಅಲೆಕ್ಸಾಂಡರ್‌ನ ಕಾಲದಿಂದ ಬೌದ್ಧ ಧರ್ಮ, ಹಿಂದೂ ರಾಜಪ್ರಭುತ್ವ, ಗ್ರೀಕ್ ಕಾಲ ಮತ್ತು ಆರಂಭಿಕ ಇಸ್ಲಾಮಿಕ್ ಕಾಲದವರೆಗಿನ ಇತಿಹಾಸ ಅಡಗಿದೆ. ಈ ಸಂಶೋಧನೆಯು ಈ ಪ್ರದೇಶದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತದೆ.