ಕಾಬೂಲ್‌ನಲ್ಲಿ ನೀವು ಕುಡಿದ ಒಂದು ಕಪ್ ಚಹಾಕ್ಕೆ ನಾವು ದೊಡ್ಡ ಬೆಲೆ ಕಟ್ಟುತ್ತಿದ್ದೇವೆ!

ತಾಲಿಬಾನ್‌ನ ಸಂಘರ್ಷ; ಸೇನೆ ಮತ್ತು ಇಮ್ರಾನ್ ಖಾನ್ ಸರಕಾರವನ್ನು ಟೀಕಿಸಿದ ಪಾಕ್ ವಿದೇಶಾಂಗ ಸಚಿವ ಇಶಾಕ್ ಡಾರ್

ಇಸ್ಲಾಮಾಬಾದ್ (ಪಾಕಿಸ್ತಾನ) – ತಾಲಿಬಾನ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರಕಾರ ಮತ್ತು ಅಂದಿನ ಮಿಲಿಟರಿ ನಾಯಕತ್ವದ ಮೇಲೆ ಆರೋಪ ಮಾಡಿದ್ದಾರೆ. 2021ರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್‌.ಐ.’ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಅಂತರ ಸೇವಾ ಗುಪ್ತಚರ ಸಂಸ್ಥೆ) ಯ ಅಂದಿನ ಮುಖ್ಯಸ್ಥ ಫೈಜ್ ಹಮೀದ್ ಅವರು ಕಾಬೂಲ್‌ಗೆ ನೀಡಿದ ಭೇಟಿಯೇ ಹೆಚ್ಚುತ್ತಿರುವ ಈ ಭಯೋತ್ಪಾದಕ ಘಟನೆಗಳಿಗೆ ಮೂಲ ಕಾರಣ ಎಂದು ಡಾರ್ ಆರೋಪಿಸಿದರು.

“ಅವರು ಅಲ್ಲಿ ಕುಡಿದ ಒಂದು ಕಪ್ ಚಹಾ ನಮಗೆ ತುಂಬಾ ದುಬಾರಿಯಾಗಿದೆ. ಆ ಒಂದು ಕಪ್ ಚಹಾದಿಂದಾಗಿ ಪಾಕಿಸ್ತಾನ-ಆಫ್ಘಾನ್ ಗಡಿ ಬಾಗಿಲು ಮತ್ತೆ ತೆರೆಯಿತು ಮತ್ತು ಆ ಸಮಯದಲ್ಲಿ ಸರಕಾರವು 100ಕ್ಕೂ ಹೆಚ್ಚು ಕುಖ್ಯಾತ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತು. ಈ ನಿರ್ಧಾರಗಳಿಂದಲೇ ದೇಶದಲ್ಲಿ ಭಯೋತ್ಪಾದಕ ದಾಳಿಗಳ ಪ್ರವಾಹ ಉಂಟಾಗಿದ್ದು, ಅದಕ್ಕೆ ಮಾಜಿ ಸರಕಾರವೇ ನೇರವಾಗಿ ಹೊಣೆಯಾಗಿದೆ.”

ಕಳೆದ ತಿಂಗಳು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಸಶಸ್ತ್ರ ಸಂಘರ್ಷ ನಡೆದ ಸಮಯದಲ್ಲಿ ಡಾರ್ ಅವರ ಈ ಹೇಳಿಕೆ ಹೊರಬಿದ್ದಿದೆ. ಕತಾರ್ ಮತ್ತು ಟರ್ಕಿ (ತುರ್ಕಿ) ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ನಂತರ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ; ಆದರೂ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ.