ನಾವು ‘ಸಮಗ್ರ ಅಣು ಪರೀಕ್ಷೆ ನಿಷೇಧ ಒಪ್ಪಂದ’ವನ್ನು ಪಾಲಿಸುತ್ತೇವೆ, ಅಮೆರಿಕವೂ ಪಾಲಿಸಬೇಕು!

ಚೀನಾ ಅಣು ಪರೀಕ್ಷೆ ನಡೆಸುತ್ತಿದೆ: ಟ್ರಂಪ್ ಹೇಳಿಕೆಗೆ ಚೀನಾದ ಉತ್ತರ!

ಬೀಜಿಂಗ್ (ಚೀನಾ) / ಇಸ್ಲಾಮಾಬಾದ್ (ಪಾಕಿಸ್ತಾನ) – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಮತ್ತು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶವಾಗಿ, ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಆತ್ಮರಕ್ಷಣಾ ಪರಮಾಣು ನೀತಿಯನ್ನು ಅನುಸರಿಸುತ್ತೇವೆ ಮತ್ತು ಅಣು ಪರೀಕ್ಷೆಗಳನ್ನು ನಿಲ್ಲಿಸುವ ನಮ್ಮ ಬದ್ಧತೆಯನ್ನು ಗೌರವಿಸುತ್ತೇವೆ. ಚೀನಾ ‘ಸಮಗ್ರ ಅಣು ಪರೀಕ್ಷೆ ನಿಷೇಧ ಒಪ್ಪಂದ’ಕ್ಕೆ (‘ಸಿಟಿ ಬೀಟಿ ‘ ಗೆ – ” ಕ್ಯಾಂಪ್ರೆನ್ಸಿವ್ ನ್ಯೂಕ್ಲಿಯರ್ ಟೆಸ್ಟ್ ಬ್ಯಾನ್ ಟ್ರೀಟಿ )ಬೆಂಬಲ ನೀಡುತ್ತದೆ ಮತ್ತು ಅಮೆರಿಕವೂ ಆ ಒಪ್ಪಂದದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಅಮೆರಿಕ ಕೂಡ ಅಣು ಪರೀಕ್ಷೆಗಳ ಮೇಲಿನ ತನ್ನ ನಿಷೇಧವನ್ನು ಮುಂದುವರಿಸುತ್ತದೆ ಮತ್ತು ಜಾಗತಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ನಾವು ಆಶಿಸುತ್ತೇವೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಚೀನಾ ಉತ್ತರ ನೀಡಿದೆ. ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಯಾರಿಗೂ ಹೇಳದೆ ಅಣು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.

ನಾವು ಮತ್ತೊಮ್ಮೆ ಅಣು ಪರೀಕ್ಷೆ ಪ್ರಾರಂಭಿಸುವ ದೇಶವಲ್ಲ! – ಪಾಕಿಸ್ತಾನದ ಸ್ಪಷ್ಟೀಕರಣ

ಪಾಕಿಸ್ತಾನವು ಅಣು ಪರೀಕ್ಷೆಗಳನ್ನು ನಡೆಸಿದ ಮೊದಲ ದೇಶವಲ್ಲ ಮತ್ತು ಮತ್ತೆ ಅಣು ಪರೀಕ್ಷೆಗಳನ್ನು ಪ್ರಾರಂಭಿಸುವ ಮೊದಲ ದೇಶವೂ ಆಗುವುದಿಲ್ಲ, ಎಂದು ಟ್ರಂಪ್ ಅವರ ಹೇಳಿಕೆಗೆ ಪಾಕಿಸ್ತಾನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಣು ಪರೀಕ್ಷೆಗಳನ್ನು ನಡೆಸುವ ದೇಶಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ ಎಂದು ಟ್ರಂಪ್ ಹೇಳಿದ್ದರು. ಈ ಬಗ್ಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅಥವಾ ಅವರ ಸರಕಾರದ ಯಾವುದೇ ಸಚಿವರು ಇಲ್ಲಿಯವರೆಗೆ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಸಂಪಾದಕೀಯ ನಿಲುವು

ಚೀನಾ ಮತ್ತು ಪಾಕಿಸ್ತಾನ ಎರಡೂ ಅಣು ಪರೀಕ್ಷೆಗಳನ್ನು ನಡೆಸಿವೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ಎರಡೂ ರಾಷ್ಟ್ರಗಳು ನಿರಾಕರಿಸಿವೆ, ಆದ್ದರಿಂದ ಟ್ರಂಪ್ ಅವರು ಈಗ ಈ ಬಗ್ಗೆ ಪುರಾವೆಗಳನ್ನು ತೋರಿಸಬೇಕು, ಇಲ್ಲದಿದ್ದರೆ ಟ್ರಂಪ್ ಅವರ ಮೇಲಿನ ವಿಶ್ವಾಸ ಇನ್ನಷ್ಟು ಕಡಿಮೆಯಾಗುತ್ತದೆ!