ಬಾಂಗ್ಲಾದೇಶದ ಅಧಿಕಾರ ಪಲ್ಲಟದ ಹಿಂದೆ ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ ಕೈವಾಡ!

  • ಬಾಂಗ್ಲಾದೇಶದ ಅಧಿಕಾರ ಪಲ್ಲಟದ ಕುರಿತ ಪುಸ್ತಕದಲ್ಲಿ ಅಂದಿನ ಗೃಹ ಸಚಿವರ ಹೇಳಿಕೆ

  • ಸೇನಾ ಮುಖ್ಯಸ್ಥ ಜನರಲ್ ವಕಾರ್, ಹಸೀನಾ ಅವರಿಗೆ ದ್ರೋಹ ಮಾಡಿದರು!

(‘ಸಿಐಎ’ ಎಂದರೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ – ಕೇಂದ್ರೀಯ ಗುಪ್ತಚರ ಸಂಸ್ಥೆ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನಡೆದ ಅಧಿಕಾರ ಪಲ್ಲಟದ ಹಿಂದೆ ಅಮೆರಿಕ ಮತ್ತು ಪಾಕಿಸ್ತಾನದ ಕೈವಾಡವಿದೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಆರೋಪಿಸಿದ ನಂತರ, ಇದೀಗ ದೀಪ್ ಹಲ್ದಾರ್, ಜಯದೀಪ್ ಮಜುಂದಾರ್ ಮತ್ತು ಸಾಹಿದುಲ್ ಹಸನ್ ಖೋಕನ್ ಅವರು ಬರೆದ, ‘ಜಗ್ಗರ್ನಾಟ್’ ಪ್ರಕಾಶನದಿಂದ ಪ್ರಕಟವಾಗಲಿರುವ ‘ಇನ್ಶಾ ಅಲ್ಲಾ ಬಾಂಗ್ಲಾದೇಶ್: ದಿ ಸ್ಟೋರಿ ಆಫ್ ಆನ್ ಅನ್ಫಿನಿಶ್ಡ್ ರೆವಲ್ಯೂಷನ್’ (ಒಂದು ಅಪೂರ್ಣ ಕ್ರಾಂತಿಯ ಕಥೆ) ಎಂಬ ಪುಸ್ತಕದಲ್ಲಿ ಈ ಕುರಿತು ಮತ್ತಷ್ಟು ರಹಸ್ಯಗಳನ್ನು ಬಯಲು ಮಾಡಲಾಗಿದೆ. ಈ ಪುಸ್ತಕ ಇನ್ನೂ ಪ್ರಕಟಗೊಂಡಿಲ್ಲ. ಶೇಖ್ ಹಸೀನಾ ಅವರ ಸರಕಾರದ ಗೃಹ ಸಚಿವರಾಗಿದ್ದ ಅಸದುಜ್ಮಾನ್ ಖಾನ್ ಅವರ ಪ್ರಕಾರ, ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕದ ಗುಪ್ತಚರ ಸಂಸ್ಥೆಯು, ಅಂದರೆ ‘ಸಿಐಎ’ಯು ದೀರ್ಘಕಾಲದಿಂದ ನಿಖರವಾದ ಯೋಜನೆಯನ್ನು ರೂಪಿಸಿತ್ತು. ಹಸೀನಾ ಅವರ ಸಂಬಂಧಿಕರಾಗಿದ್ದ ಸೇನಾ ಮುಖ್ಯಸ್ಥ ವಕಾರ್-ಉಜ್-ಜಮಾನ್ ಅವರ ಮೇಲೆ ‘ಸಿಐಎ’ ಪ್ರಭಾವ ಬೀರಿತ್ತು ಮತ್ತು ಅವರೇ ಬೆನ್ನಿಗೆ ಚೂರಿ ಹಾಕಿದರು ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ.

ಪುಸ್ತಕದಲ್ಲಿ ಮಂಡಿರಿಸಿರುವ ಕೆಲ ಪ್ರಮುಖ ಅಂಶಗಳು,

೧. ಅಸದುಜ್ಮಾನ್ ಖಾನ್ ಅವರು ಹೇಳಿರುವ ಪ್ರಕಾರ, ಬಾಂಗ್ಲಾದೇಶದ ಪ್ರಮುಖ ಸೇನಾ ಗುಪ್ತಚರ ಸಂಸ್ಥೆ ಮತ್ತು ರಾಷ್ಟ್ರೀಯ ಭದ್ರತಾ ಗುಪ್ತಚರ ಇಲಾಖೆಗಳು ಪ್ರಧಾನಿ ಹಸೀನಾ ಅವರಿಗೆ, ವಕಾರ್ ಅವರು ದ್ರೋಹ ಮಾಡಲು ಸಿದ್ಧರಾಗಿದ್ದಾರೆ ಎಂದು ಎಚ್ಚರಿಕೆ ನೀಡಿರಲಿಲ್ಲ. ಈ ಪಿತೂರಿಯಲ್ಲಿ ಕೆಲವು ಉನ್ನತ ಅಧಿಕಾರಿಗಳು ಸಹ ಭಾಗಿಯಾಗಿರಬಹುದು ಎಂದು ಖಾನ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

೨. ಅಸದುಜ್ಮಾನ್ ಖಾನ್ ಅವರ ಪ್ರಕಾರ, ‘ಸಿಐಎ’ ದಕ್ಷಿಣ ಏಷ್ಯಾದಲ್ಲಿ ಸಬಲ ನಾಯಕತ್ವವನ್ನು ಬಯಸುವುದಿಲ್ಲ. ಅಮೆರಿಕವು ಅಂತಹ ದೇಶಗಳಲ್ಲಿ ದುರ್ಬಲ ಸರಕಾರಗಳಿಗೆ ಆದ್ಯತೆ ನೀಡುತ್ತದೆ, ಈ ನೀತಿಯಿಂದ ಅಮೆರಿಕದ ಹಿತಾಸಕ್ತಿಗಳನ್ನು ಸುಲಭವಾಗಿ ಸಾಧಿಸಬಹುದು. ಬಾಂಗ್ಲಾದೇಶದ ಅಧಿಕಾರ ಪಲ್ಲಟದಿಂದ ಅಮೆರಿಕಕ್ಕೆ ಲಾಭವಾಗುವ ಎರಡು ಅಂಶಗಳಿವೆ. ಮೊದಲನೆಯದು – ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಶಕ್ತಿಶಾಲಿ ರಾಷ್ಟ್ರವಿರಬಾರದು. ನರೇಂದ್ರ ಮೋದಿ, ಶೀ ಜಿನ್‌ಪಿಂಗ್ ಮತ್ತು ಶೇಖ್ ಹಸೀನಾ ಅವರಂತಹ ಸಬಲ ನಾಯಕರು ಉಪಖಂಡದಲ್ಲಿದ್ದರೆ, ಅಮೆರಿಕಕ್ಕೆ ತನ್ನ ಹಿತಾಸಕ್ತಿ ಸಾಧಿಸುವುದು ಕಷ್ಟವಾಗುತ್ತದೆ. ಅಮೆರಿಕದ ಕಾರ್ಯತಂತ್ರ ಯಾವಾಗಲೂ ದುರ್ಬಲ ಶಕ್ತಿಗಳೊಂದಿಗಿರುವುದು. ಈ ಅಧಿಕಾರ ಪಲ್ಲಟಕ್ಕೆ ಇನ್ನೊಂದು ಕಾರಣವೆಂದರೆ ‘ಸೇಂಟ್ ಮಾರ್ಟಿನ್ ದ್ವೀಪ’.

೩. ಅಸದುಜ್ಮಾನ್ ಖಾನ್ ಅವರು ಅಧಿಕಾರ ಪಲ್ಲಟವನ್ನು ಮಹಾಭಾರತಕ್ಕೆ ಹೋಲಿಸಿದ್ದಾರೆ. ಅವರು ಹೇಳಿದಂತೆ, ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ತನ್ನದೇ ಜನರ ಕೈಯಿಂದ ರಣಾಂಗಣದಲ್ಲಿ ಬಿದ್ದಂತೆ, ವಕಾರ್ ಅವರು ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಾಂಗ್ಲಾದೇಶದ ಮೂಲಭೂತವಾದಿ ಶಕ್ತಿಗಳೊಂದಿಗೆ ಕೈಜೋಡಿಸಿದರು. ‘ಜಮಾತ್-ಎ-ಇಸ್ಲಾಮಿ ಬಾಂಗ್ಲಾದೇಶ’ ಈ ಹಿಂದೆಯೂ ಕೂಡ ಅನ್ಯ ಭಯೋತ್ಪಾದಕ ಶಕ್ತಿಗಳನ್ನು ಒಗ್ಗೂಡಿಸಿತ್ತು.

೪. ಲೇಖಕ ದೀಪ್ ಹಲ್ದಾರ್ ಅವರ ಪ್ರಕಾರ, ಈ ಬಹಿರಂಗಪಡಿಸುವಿಕೆಯು ಬಾಂಗ್ಲಾದೇಶದಲ್ಲಿ ಮತ್ತಷ್ಟು ಅಶಾಂತಿಯನ್ನು ಸೃಷ್ಟಿಸಬಹುದು. ಜನರಲ್ ವಕಾರ್ ಅವರನ್ನು ಹಸೀನಾ ಅವರು ಅಧಿಕಾರದಿಂದ ಕೆಳಗಿಳಿಯುವ ಮೊದಲು ಸ್ವತಃ ನೇಮಿಸಿದ್ದರು. ಕಳೆದ ಎರಡು ವರ್ಷಗಳಿಂದ ‘ನ್ಯಾಷನಲ್ ಸಿಟಿಜನ್ಸ್ ಪಾರ್ಟಿ’ಯ ನಾಯಕರು ನಿರಂತರವಾಗಿ ಜನರಲ್ ವಕಾರ್ ಅವರು ಭಾರತದ ಏಜೆಂಟ್ ಎಂದು ಆರೋಪಿಸುತ್ತಿದ್ದರು, ಆದರೆ ಈಗ ಬಯಲಾದ ಇಂತಹ ವಿಷಯಗಳ ನಂತರ, ವಕಾರ್ ನಿಜವಾಗಿ ಯಾರ ಪರವಾಗಿದ್ದರು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹಲ್ದಾರ್ ಹೇಳಿದರು.

೫. ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐ.ಎಸ್.ಐ.)’ ಜಮಾತ್ ಜೊತೆ ಕಾರ್ಯನಿರ್ವಹಿಸುತ್ತಿತ್ತು ಎಂದೂ ಸಹ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಐ.ಎಸ್.ಐ. ತರಬೇತಿ ಪಡೆದ ವ್ಯಕ್ತಿಗಳು ಜಮಾತ್‌ ಜೊತೆ ಸೇರಿದ್ದರು ಮತ್ತು ಜೂನ್ ತಿಂಗಳ ಕೊನೆಯಲ್ಲಿ ನಡೆದ ಪೊಲೀಸ್ ಹತ್ಯೆಗಳಲ್ಲಿ ಅವರ ಕೈವಾಡವಿತ್ತು.

ಅಮೆರಿಕಕ್ಕೆ ‘ಸೇಂಟ್ ಮಾರ್ಟಿನ್ ದ್ವೀಪ’ ಯಾಕೆ ಬೇಕು?

ಶೇಖ್ ಹಸೀನಾ ಅವರು ಅಧಿಕಾರ ಕಳೆದುಕೊಳ್ಳುವ ಮೊದಲು ಸ್ವತಃ ಈ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, “ನಾವು ಅಮೆರಿಕಕ್ಕೆ ‘ಸೇಂಟ್ ಮಾರ್ಟಿನ್ ದ್ವೀಪ’ವನ್ನು ನೀಡಿದ್ದರೆ, ನಾವು ಯಾವುದೇ ಅಡೆತಡೆಯಿಲ್ಲದೆ ಅಧಿಕಾರದಲ್ಲಿ ಉಳಿಯಬಹುದಿತ್ತು” ಎಂದು ಹೇಳಿದ್ದರು.

ಭೌಗೋಳಿಕವಾಗಿ ಈ ದ್ವೀಪವು ಅತ್ಯಂತ ಮುಖ್ಯವಾಗಿದೆ; ಏಕೆಂದರೆ ಇದು ವಿಶ್ವದ ಯಾವುದೇ ಭಾಗದಿಂದ ಸಮುದ್ರ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಇದು ಕೇವಲ ವ್ಯಾಪಾರಿ ಜಲಮಾರ್ಗವಲ್ಲ, ಆದರೆ ಇದು ರಣತಾಂತ್ರಿಕ ದೃಷ್ಟಿಯಿಂದಲೂ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ, ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿ ನೆಲೆಗೊಂಡಿರುವ ಈ ೭.೩ ಕಿಲೋಮೀಟರ್ ಉದ್ದದ ದ್ವೀಪವು ಸಮುದ್ರ ಮಟ್ಟದಿಂದ ಕೇವಲ ೩.೬ ಮೀಟರ್ ಎತ್ತರದಲ್ಲಿದೆ. ಸುಮಾರು ೫ ಸಾವಿರ ವರ್ಷಗಳ ಹಿಂದೆ ಈ ದ್ವೀಪವು ಟೆಕ್ನಾಫ್ ಪರ್ಯಾಯ ದ್ವೀಪದ ಭಾಗವಾಗಿತ್ತು; ಆದರೆ ನಂತರ ಸಮುದ್ರದಲ್ಲಿ ಮುಳುಗಿತು. ಸುಮಾರು ೪೫೦ ವರ್ಷಗಳ ಹಿಂದೆ ಇದರ ದಕ್ಷಿಣ ಭಾಗವು ಮತ್ತೆ ಮೇಲೆ ಬಂದಿತು ಮತ್ತು ೧೦೦ ವರ್ಷಗಳ ಅವಧಿಯಲ್ಲಿ ಉಳಿದ ಭಾಗವೂ ಸಮುದ್ರದಿಂದ ಮೇಲೆ ಬಂದಿತು. ೧೯೦೦ ರಲ್ಲಿ ಭಾರತವು ಭೂ ಸಮೀಕ್ಷೆ ಮಾಡಿದಾಗ ಈ ದ್ವೀಪವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು ಮತ್ತು ಅಂದಿನ ಚಿತ್ತಗಾಂಗ್‌ನ ಉಪಾಯುಕ್ತ (ಡೆಪ್ಯೂಟಿ ಕಮಿಷನರ್) ಮಾರ್ಟಿನ್ ಅವರ ಹೆಸರಿನಿಂದ ಇದನ್ನು ‘ಸೇಂಟ್ ಮಾರ್ಟಿನ್ ದ್ವೀಪ’ ಎಂದು ಹೆಸರಿಡಲಾಯಿತು. ಈ ದ್ವೀಪದಿಂದ ಬಂಗಾಳಕೊಲ್ಲಿಯಲ್ಲಿ, ಹಾಗೂ ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಡಬಹುದು; ಹಾಗಾಗಿ ಈ ದ್ವೀಪವು ಬಾಂಗ್ಲಾದೇಶಕ್ಕೆ ಅತಿ ಮುಖ್ಯವಾಗಿದೆ.

ದಕ್ಷಿಣ ಏಷ್ಯಾದ ರಾಜಕೀಯ ಸಮತೋಲನದಲ್ಲಿಯೂ ಈ ದ್ವೀಪದ ಪಾತ್ರ ನಿರ್ಣಾಯಕವಾಗಿದೆ.

ವ್ಯಾಪಾರ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಚೀನಾ ಮತ್ತು ಅಮೆರಿಕ ಈ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಬಯಸುತ್ತವೆ. ಆದರೆ ಭಾರತಕ್ಕೂ ಕೂಡ ‘ಸೇಂಟ್ ಮಾರ್ಟಿನ್ ದ್ವೀಪ’ದ ರಣತಾಂತ್ರಿಕ ಮಹತ್ವ ದೊಡ್ಡದಾಗಿದೆ. ಅಮೆರಿಕದ ಉದ್ದೇಶವೇನೆಂದರೆ, ಈ ದ್ವೀಪದ ಮೇಲೆ ಹಿಡಿತ ಸಾಧಿಸಿದರೆ, ಅಲ್ಲಿಂದ ಸುತ್ತಲಿನ ರಾಷ್ಟ್ರಗಳ ಮೇಲೆ, ವಿಶೇಷವಾಗಿ ಚೀನಾ ಮತ್ತು ಭಾರತದ ಮೇಲೆ ಕಣ್ಣಿಡುವುದು ಸುಲಭವಾಗುತ್ತದೆ.