ಐ.ಆರ್.ಸಿ.ಟಿ.ಸಿ. ಟೆಂಡರ್ ಹಗರಣ; ಲಾಲು ಪ್ರಸಾದ್, ರಾಬ್ಡಿದೇವಿ ಮತ್ತು ತೇಜಸ್ವಿ ಯಾದವ್ ವಿರುದ್ಧ ಆರೋಪ ನಿಗದಿ

(ಐ.ಆರ್.ಸಿ.ಟಿ.ಸಿ. – ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ – ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ)

ನವದೆಹಲಿ – ರಾಜಧಾನಿಯ ರೌಸ್ ಅವೆನ್ಯೂ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ವಿರುದ್ಧ ಐ.ಆರ್.ಸಿ.ಟಿ.ಸಿ. (ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ – ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ) ಟೆಂಡರ್ ಹಗರಣದ ಪ್ರಕರಣದಲ್ಲಿ ಆರೋಪಗಳನ್ನು ನಿಗದಿಪಡಿಸಿದೆ.
ನ್ಯಾಯಾಲಯವು, ‘ಟೆಂಡರ್ ಹಗರಣದ ಸಂಪೂರ್ಣ ಸಂಚನ್ನು ಲಾಲು ಪ್ರಸಾದ್ ಯಾದವ್ ಅವರ ಮಾಹಿತಿಯೊಂದಿಗೆ ರೂಪಿಸಲಾಗಿದೆ. ಟೆಂಡರ್ ಹಂಚಿಕೆಯ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಿದ್ದರು’ ಎಂದು ಹೇಳಿದೆ. ನ್ಯಾಯಾಲಯವು ಲಾಲು ಪ್ರಸಾದ್ ಯಾದವ್ ಅವರನ್ನು, ‘ನೀವು ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ? ತಪ್ಪಿತಸ್ಥರೆಂದು ಒಪ್ಪಿಕೊಳ್ಳುತ್ತೀರಾ? ಅಥವಾ ನೀವು ವಿಚಾರಣೆಯನ್ನು ಎದುರಿಸಲು ಬಯಸುತ್ತೀರಾ?’ ಎಂದು ಪ್ರಶ್ನಿಸಿತು. ಇದಕ್ಕೆ ಲಾಲು ಪ್ರಸಾದ್ ಅವರು ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದರು.

ಏನಿದು ಐ.ಆರ್.ಸಿ.ಟಿ.ಸಿ. ಹಗರಣ?

೨೦೦೪ ರಿಂದ ೨೦೦೯ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ, ರಾಂಚಿ (ಜಾರ್ಖಂಡ್) ಮತ್ತು ಪುರಿ (ಒಡಿಶಾ) ನಲ್ಲಿರುವ ಐ.ಆರ್.ಸಿ.ಟಿ.ಸಿ.ಯ ೨ ಹೋಟೆಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ‘ಸುಜಾತಾ ಹೋಟೆಲ್ಸ್’ ಎಂಬ ಖಾಸಗಿ ಸಂಸ್ಥೆಗೆ ಅಕ್ರಮವಾಗಿ ನೀಡಲಾಯಿತು. ಈ ವ್ಯವಹಾರದ ಬದಲಾಗಿ ಲಾಲು ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಪಾಟ್ನಾದಲ್ಲಿ ಅಮೂಲ್ಯ ಭೂಮಿ ನೀಡಲಾಯಿತು ಎಂದು ತನಿಖಾ ಸಂಸ್ಥೆ ಹೇಳಿದೆ. ಯಾದವ್ ಕುಟುಂಬದ ಜೊತೆಗೆ, ಐ.ಆರ್.ಸಿ.ಟಿ.ಸಿ. ಗ್ರೂಪ್‌ನ ಅಂದಿನ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಅಸ್ಥಾನ, ಆರ್.ಕೆ. ಗೋಯಲ್ ಮತ್ತು ‘ಸುಜಾತಾ ಹೋಟೆಲ್ಸ್’ನ ನಿರ್ದೇಶಕರಾದ ವಿಜಯ್ ಮತ್ತು ವಿನಯ್ ಕೋಚರ್ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಸಂಪಾದಕೀಯ ನಿಲುವು

ಲಾಲು ಪ್ರಸಾದ್ ಯಾದವ್ ಅವರಿಗೆ ಈ ಹಿಂದೆಯೇ ಕೆಲವು ಹಗರಣಗಳಲ್ಲಿ ಶಿಕ್ಷೆಯಾಗಿದ್ದರೂ ಜಾಮೀನು ಸಿಕ್ಕಿದೆ. ಆದರೂ, ಸಾರ್ವಜನಿಕರ ದೃಷ್ಟಿಯಲ್ಲಿ ಅವರ ಘನತೆ ಏನು ಎಂಬುದು ಎಲ್ಲರಿಗೂ ತಿಳಿದ ವಿಷಯ !