ದಸರಾದ ಶುಭದಿನದಂದು ಏನು ಮಾಡುತ್ತಾರೆ ?

೧. ಈ ದಿನ ಬನ್ನಿ ಅಥವಾ ಮಂದಾರ ಗಿಡದ ಪೂಜೆ ಮಾಡುತ್ತಾರೆ. ಬನ್ನಿ ಗಿಡದ ಹತ್ತಿರದಲ್ಲೇ ನೆಲದ ಮೇಲೆ ಅಪರಾಜಿತಾ ದೇವಿಯ ಚಿತ್ರವನ್ನು ಬಿಡಿಸಿ ಅದನ್ನೂ ಪೂಜಿಸುತ್ತಾರೆ. ರಾವಣನನ್ನು ಸಂಹರಿಸಲು ರಾಮನು ಇದೇ ದಿನ ಬನ್ನಿ ಗಿಡದ ಪೂಜೆ ಮಾಡಿ ಪ್ರಯಾಣ ಬೆಳೆಸಿದನು. ಅರ್ಜುನನು ತನ್ನ ಅಜ್ಞಾತವಾಸವನ್ನು ಮುಗಿಸಿ ಇದೇ ದಿನ ಬನ್ನಿ ಗಿಡದ ಪೂಜೆ ಮಾಡಿ ತನ್ನ ಆಯುಧಗಳನ್ನು ಮತ್ತೆ ಕೈಗೆತ್ತಿಕೊಂಡನು.

೨. ‘ಇದು ವಿಜಯೋತ್ಸವವಾಗಿರುವುದರಿಂದ ರಾಜರು ತಮ್ಮ ಕುದುರೆಗಳನ್ನು ಸುಂದರವಾಗಿ ಅಲಂಕರಿಸ ಬೇಕು, ‘ನೀರಾಜನ’ ಎಂಬ ವಿಧಿಯನ್ನು ಮಾಡಬೇಕು, ಶಸ್ತ್ರಾಸ್ತ್ರಗಳನ್ನು ಪೂಜಿಸಬೇಕು ಮತ್ತು ವಿಜಯಕ್ಕಾಗಿ ಹೊರಡಬೇಕು’, ಎಂದು ಹೇಳಲಾಗಿದೆ.

೩. ದಸರಾದಂದು ಬನ್ನಿ ಗಿಡದ ಪೂಜೆಗೆ ವಿಶೇಷ ಮಹತ್ವವಿದೆ. ನವರಾತ್ರಿಯ ೯ ದಿನಗಳಲ್ಲಿ ಪ್ರತಿದಿನ ಸಂಜೆ ಬನ್ನಿ ಗಿಡದ ಪೂಜೆಯನ್ನು ಮಾಡುವುದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ, ಎಂದು ನಂಬಲಾಗಿದೆ.

೪. ಮಂದಾರದ ಗಿಡವನ್ನು ‘ಅಶ್ಮಂತಕ’ ಎಂದೂ ಕರೆಯುತ್ತಾರೆ. ಮಂದಾರದ ಎಲೆಗಳು ಪಿತ್ತ ಮತ್ತು ಕಫ ದೋಷಗಳಿಗೆ ಪ್ರಯೋಜನಕಾರಿ. ವಿಜಯದಶಮಿಯಂದು ಮಂದಾರದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದನ್ನೇ ‘ಬಂಗಾರ ಹಂಚುವುದು’ ಎಂದೂ ಕರೆಯುತ್ತಾರೆ.

೫. ದಸರಾ ಮೂಲತಃ ಒಂದು ಕೃಷಿಗೆ ಸಂಬಂಧಿಸಿದ ಜನಪದೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಮೊದಲ ಫಸಲು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು.

೬. ನವರಾತ್ರಿಯಲ್ಲಿ ಘಟಸ್ಥಾಪನೆಯ ದಿನದಂದು ಘಟದ ಕೆಳಗಿನ ತಟ್ಟೆಯಲ್ಲಿ ೯ ಧಾನ್ಯಗಳನ್ನು ಬಿತ್ತಲಾಗುತ್ತದೆ. ದಸರಾ ದಿನದಂದು ಆ ಧಾನ್ಯಗಳ ಮೊಳಕೆಗಳನ್ನು ಕಿತ್ತು ದೇವರಿಗೆ ಅರ್ಪಿಸಲಾಗುತ್ತದೆ. ಹಲವೆಡೆ ಗದ್ದೆಗಳಲ್ಲಿನ ಭತ್ತದ ತೆನೆಗಳನ್ನು ತಂದು ಅವುಗಳನ್ನು ಪ್ರವೇಶದ್ವಾರದಲ್ಲಿ ತೋರಣದಂತೆ ಕಟ್ಟುತ್ತಾರೆ.

– ಶ್ರೀ. ವಿವೇಕ ಭೋರ (ಆಧಾರ : ದೈನಿಕ ‘ನವರಾಷ್ಟ್ರ’)