ಸಂಪಾದಕೀಯ : ಸಾಗರ ಸಾಮರ್ಥ್ಯಕ್ಕೆ ಮತ್ತಷ್ಟು ಬಲ

ಕೇಂದ್ರ ಸರಕಾರ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದಲ್ಲಿರುವ ಪ್ರಮುಖ ದ್ವೀಪವಾದ ‘ಗ್ರೇಟ್‌ ನಿಕೋಬಾರ್‌’ನಲ್ಲಿ ಮಹತ್ವಾಕಾಂಕ್ಷೆಯ ಮತ್ತು ದೂರ ದೃಷ್ಟಿಯ ಯೋಜನೆಯನ್ನು ಸ್ಥಾಪಿಸಲು ನಿಯೋಜನೆಯ ನೀಲನಕ್ಷೆಯನ್ನು ಕೂಡ ತಯಾರಿಸಲಾಗಿದೆ ಮತ್ತು ಭವಿಷ್ಯದಲ್ಲಿ ಅದು ಸಾಕಾರವಾಗಲಿದೆ. ಈ ಯೋಜನೆಗೆ ೭೨ ಸಾವಿರ ಕೋಟಿ ಖರ್ಚಾಗುತ್ತಿದ್ದರೂ, ಇದರಿಂದ ಭಾರತದ ಸಾಗರದ ಮೇಲಿನ ಪ್ರಭುತ್ವ ಹೆಚ್ಚಾಗಲಿದೆ. ಮಲಾಕ್ಕಾ ಜಲಸಂಧಿಯಿಂದ ಕೇವಲ ೪೦ ಕಿಲೋಮೀಟರ್‌ ದೂರದಲ್ಲಿರುವ ಈ ದ್ವೀಪದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಭಾರತದ ಪ್ರಯತ್ನ ಪ್ರಶಂಸನೀಯ ಮತ್ತು ದೂರದೃಷ್ಟಿಯಾಗಿದೆ. ಇಲ್ಲಿ ಪ್ರಸ್ತಾಪಿಸಲಾಗಿರುವ ಉದ್ದನೆಯ ರನ್ ವೇ ಹೊಂದಿರುವ ವಾಯುನೆಲೆ, ನೌಕಾನೆಲೆ ಮತ್ತು ‘ಲಾಜಿಸ್ಟಿಕ್‌ ಹಬ್’ (ಸರಕು ಸಾಗಣೆ ಕೇಂದ್ರ)ದಿಂದ ಹಿಂದೂ ಮಹಾಸಾಗರದ ಮೇಲೆ ಕಣ್ಗಾವಲು ಇಡುವ ಭಾರತದ ಸಾಮರ್ಥ್ಯ ಹೆಚ್ಚಲಿದೆ. ಈ ಪ್ರದೇಶದಲ್ಲಿ ಚೀನಾ ಕೂಡ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವುದು ಗಮನಾರ್ಹವಾಗಿದೆ. ಈವರೆಗೆ ಭಾರತವು ಆಮದು-ರಫ್ತು ಅಥವಾ ನೌಕಾ ಸಂಚಾರಕ್ಕಾಗಿ ಕೊಲಂಬೋ, ಸಿಂಗಾಪುರ ಅಥವಾ ಪೋರ್ಟ್ ಕ್ಲಾಂಗ್‌ ಅನ್ನು ಅವಲಂಬಿಸಬೇಕಾಗಿತ್ತು. ಆದರೆ, ಗ್ರೇಟ್‌ ನಿಕೋಬಾರ್‌ನಲ್ಲಿರುವ ಆಧುನಿಕ ಬಂದರು ಭಾರತವನ್ನು ‘ಜಾಗತಿಕ ನೌಕಾ ಸಂಚಾರದ ಕೇಂದ್ರ’ವನ್ನಾಗಿ ಮಾಡಬಹುದು. ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪ್ರವಾಸೋದ್ಯಮ ಹೆಚ್ಚಳವಾಗಲಿದೆ ಹಾಗೂ ಕರಾವಳಿ ರಾಜ್ಯಗಳಿಗೆ ಆರ್ಥಿಕ ಲಾಭ ಸಿಗಲಿದೆ. ಈ ಯೋಜನೆಯಿಂದ ಇತರ ದೇಶಗಳಿಗೂ ಭಾರತದ ಮೇಲೆ ಅಪಾರ ನಿರೀಕ್ಷೆಗಳಿವೆ. ಭಾರತದ ಸದಸ್ಯತ್ವ ಹೊಂದಿರುವ ‘ಕ್ವಾಡ್‌’ನ ಅಮೇರಿಕ,ಜಪಾನ್,ಆಸ್ಟ್ರೇಲಿಯಾದಂತಹ ದೇಶಗಳು ಕೂಡ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಡೆಯಲು ಬಯಸಿವೆ. ಆದ್ದರಿಂದ, ಜಪಾನ್‌ನಂತಹ ದೇಶಗಳು ಈ ಯೋಜನೆಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲು ಉತ್ಸುಕವಾಗಿವೆ.

ಚೀನಾಗೆ ತಲೆನೋವು !

ಹಿಂದೂ ಮಹಾಸಾಗರದಲ್ಲಿ ಭಾರತದ ಅಸ್ತಿತ್ವ ಬಲಗೊಂಡರೆ,ಚೀನಾದ ‘ಸ್ಟ್ರಿಂಗ್‌ ಆಫ್‌ ಪರ್ಲ್ಸ್‌’ (ಚೀನಾದ ಕರಾವಳಿಯಿಂದ ಆಫ್ರಿಕಾದ ಹಾರ್ನ ಆಫ್‌ ವರೆಗೆ ಹರಡಿರುವ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸೇನಾ ಮತ್ತು ವಾಣಿಜ್ಯ ಬಂದರುಗಳು, ನೆಲೆಗಳು ಹಾಗೂ ಸೌಲಭ್ಯಗಳ ಜಾಲವನ್ನು ಸ್ಥಾಪಿಸುವ ಚೀನಾದ ನೀತಿಯನ್ನು ಸೂಚಿಸುವ ಭೌಗೋಳಿಕ-ರಾಜಕೀಯ ಪದ) ನೀತಿಗೆ ನೇರ ಉತ್ತರ ಸಿಗಲಿದೆ. ಇದರಿಂದ ಚೀನಾದ ನೌಕಾ ಸಂಚಾರದ ಮೇಲೆ ಭಾರತ ನಿಗಾ ಇಡಲಿದೆ. ಚೀನಾ ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್, ಜಿಬೂತಿಯಲ್ಲಿ ಅನೇಕ ಬಂದರುಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ನಿಕೋಬಾರ್‌ನಲ್ಲಿನ ಯೋಜನೆಯಿಂದ ಆ ಸರಪಳಿಗೆ ದೊಡ್ಡ ತಡೆ ಉಂಟಾಗಲಿದೆ.

ಚೀನಾದ ಶೇ. ೮೦ ರಷ್ಟು ತೈಲ ಮತ್ತು ಅನಿಲವು ಮಲಾಕ್ಕಾ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಈ ಸಮುದ್ರ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡುವುದರಿಂದ ಅದರ ಅಪಾಯಕಾರಿ ಕಾರ್ಯಗಳಿಗೆ ಕಡಿವಾಣ ಬೀಳುತ್ತದೆ. ಭಾರತವು ಅಭಿವೃದ್ಧಿಯ ಶಿಖರಕ್ಕೆ ಏರುತ್ತಿರುವಾಗ ಹಲವು ದೇಶಗಳು ಅದರ ಬೆಂಬಲಕ್ಕೆ ನಿಂತರೆ ಚೀನಾವನ್ನು ಏಕಾಂಗಿ ಮಾಡಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ, ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಪ್ರಭಾವ ತನ್ನಿಂತಾನೇ ಕಡಿಮೆಯಾಗುತ್ತದೆ.

ಕಾಂಗ್ರೆಸ್‌ ಮತ್ತು ಪರಿಸರವಾದಿಗಳ ವಿರೋಧ !

ಈ ದ್ವೀಪಗಳ ಪ್ರದೇಶದಲ್ಲಿ ಅಪರೂಪದ ಪ್ರಭೇದಗಳು ಮತ್ತು ಹವಳದ ಬಂಡೆಗಳಿವೆ. ಈ ಅನನ್ಯ ಸಂಪತ್ತನ್ನು ರಕ್ಷಿಸಬೇಕು. ಇಲ್ಲದಿದ್ದರೆ ಅಲ್ಲಿನ ಸ್ಥಳೀಯ ಆದಿವಾಸಿಗಳ ಜೀವನಶೈಲಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಕೆಲವು ಪರಿಸರವಾದಿಗಳು ಆರೋಪಿಸಿದ್ದಾರೆ. ಆದರೆ, ವಾಸ್ತವದಲ್ಲಿ ಅಲ್ಲಿನ ಆದಿವಾಸಿಗಳ ಸಂಖ್ಯೆ ೧ ಸಾವಿರಕ್ಕಿಂತಲೂ ಕಡಿಮೆಯಿದೆ. ಕೆಲವು ಆದಿವಾಸಿ ಸಮುದಾಯಗಳು ದ್ವೀಪದಲ್ಲಿನ ನಾಗರಿಕ ವಸಾಹತುಗಳೊಂದಿಗೆ ವಿಶೇಷ ಸಂವಾದವನ್ನು ಹೊಂದಿಲ್ಲ ಮತ್ತು ಅವರು ದ್ವೀಪದಿಂದ ದೂರವಿರುವ ಅರಣ್ಯದಲ್ಲಿ ಬೇಟೆಯಾಡಿ ಜೀವನ ಸಾಗಿಸುತ್ತಾರೆ. ಆದ್ದರಿಂದ, ಅಂತಹ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ೨೦೨೪ ರಲ್ಲಿ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಾಗ, ಕಾಂಗ್ರೆಸ್‌ ಮತ್ತು ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಹಜವಾಗಿ, ವಿರೋಧಿಸು ವುದು ಅವರ ಶಾಶ್ವತ ಗುಣವಾಗಿದೆ. ಇದನ್ನು ನಿರ್ಲಕ್ಷಿಸಬೇಕು.

ಪ್ರಗತಿಗಾಗಿ ಅಭಿವೃದ್ಧಿಯನ್ನು ಸಾಧಿಸುವಾಗ ಸಂರಕ್ಷಣೆಯ ಬಗ್ಗೆಯೂ ಯೋಚಿಸಬೇಕು. ಅದರಲ್ಲಿ ನಿರೀಕ್ಷಿತ ಮಟ್ಟದ ಸಮತೋಲನ ಸಾಧಿಸದಿದ್ದರೆ, ಯೋಜನೆಯ ವೇಗಕ್ಕೆ ಅಡ್ಡಿ ಉಂಟಾಗಬಹುದು. ಕಾರ್ಯತಂತ್ರ ಮತ್ತು ಸಾಗರಕ್ಷೇತ್ರದಲ್ಲಿ ಮುನ್ನಡೆಯುವಾಗ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಜನರ ಜೀವನವನ್ನು ಗೌರವಿಸುವುದು ಆವಶ್ಯಕವಾಗಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಅರಣ್ಯ ನಾಶಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ, ತಜ್ಞರ ಪ್ರಕಾರ ಇಲ್ಲಿ ವರ್ಷವಿಡೀ ಮಳೆ ಬೀಳುತ್ತದೆ ಮತ್ತು ಇಲ್ಲಿನ ಕಾಡುಗಳು ೧೨ ತಿಂಗಳು ಹಸಿರಾಗಿರುತ್ತವೆ. ಆದ್ದರಿಂದ, ಅರಣ್ಯ ನಾಶದ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಕಡಿಮೆ. ಹಾಗಿದ್ದರೂ, ಕತ್ತರಿಸಿದ ಮರಗಳನ್ನು ಭರ್ತಿ ಮಾಡಲು ಆ ಪ್ರದೇಶದಲ್ಲಿ ಬೇರೆಡೆ ಮರ ನೆಡುವಂತಹ ಯೋಜನೆಗಳನ್ನು ಜಾರಿಗೊಳಿಸಬಹುದು. ‘ದೊಡ್ಡ ಬಂದರು, ವಿಮಾನ ನಿಲ್ದಾಣ ಮತ್ತು ನಾಗರೀಕರಣದಿಂದ ಆದಿವಾಸಿಗಳ ಸಾಂಪ್ರದಾಯಿಕ ಜೀವನಶೈಲಿ ಅಪಾಯಕ್ಕೆ ಸಿಗಬಹುದು’ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವು ಭೂಕಂಪ ಮತ್ತು ಸುನಾಮಿ ಪ್ರವಣ ಪ್ರದೇಶವಾಗಿರುವುದರಿಂದ ಇಲ್ಲಿ ನಿರ್ಮಾಣ ಕಾರ್ಯ ಮಾಡುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಭವಿಷ್ಯದ ಲಾಭಗಳು !

ಆರೋಪ-ಸಮರ್ಥನೆ, ವಿವಾದಗಳಿಂದ ಸುತ್ತುವರಿದಿರುವ ಈ ಯೋಜನೆಯಲ್ಲಿ ಹಸಿರು ತಂತ್ರಜ್ಞಾನವನ್ನು ಹೆಚ್ಚು ಬಳಸಿದರೆ ಪರಿಸರದ ಮೇಲಿನ ಪ್ರಭಾವವನ್ನು ವೇಗವಾಗಿ ಕಡಿಮೆ ಮಾಡಬಹುದು. ಆದಿವಾಸಿಗಳಿಗೆ ವಿಶೇಷ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸಿದರೆ, ಅವರು ಯಾವುದೇ ಹಾನಿಯನ್ನು ಎದುರಿಸಬೇಕಾಗಿಲ್ಲ ಮತ್ತು ಸುರಕ್ಷಿತವಾಗಿರುತ್ತಾರೆ. ಭವಿಷ್ಯದಲ್ಲಿನ ನೈಸರ್ಗಿಕ ವಿಕೋಪಗಳ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಭೂಕಂಪ-ಸುನಾಮಿಗೆ ಸುರಕ್ಷಿತವಾದ ವಿನ್ಯಾಸಗಳನ್ನು ಸಿದ್ಧಪಡಿಸಬೇಕು. ಹಿಂದೂ ಮಹಾಸಾಗರದಲ್ಲಿ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಗಳು ಮತ್ತು ವಿಮಾನವಾಹಕ ನೌಕೆಗಳನ್ನು ಹೆಚ್ಚು ನಿಯೋಜಿಸಬೇಕು. ಮಲಾಕ್ಕಾ ಜಲಸಂಧಿಯ ಮೂಲಕ ಹಾದುಹೋಗುವ ನೌಕೆಗಳ ಮೇಲೆ ಕಣ್ಗಾವಲು ಇಡಲು ಉಪಗ್ರಹ, ರಡಾರ್‌ ಮತ್ತು ಡ್ರೋನ್‌ ಜಾಲವನ್ನು ಸ್ಥಾಪಿಸುವುದು ಹಾಗೂ ಅಮೆರಿಕ, ಜಪಾನ್, ಆಸ್ಟ್ರೇಲಿಯಾದೊಂದಿಗೆ ಜಂಟಿ ನೌಕಾ ಸಮರಾಭ್ಯಾಸಗಳನ್ನು ಹೆಚ್ಚಿಸುವುದರಿಂದ ಚೀನಾಗೆ ಸೂಕ್ತ ಸಂದೇಶ ರವಾನೆಯಾಗುತ್ತದೆ. ಸಿಂಗಾಪುರ ಮತ್ತು ಕೊಲಂಬೋಗಳೊಂದಿಗೆ ಸ್ಪರ್ಧಿಸಬೇಕಿರುವುದರಿಂದ ಭಾರತ ಹೆಚ್ಚು ಸಮರ್ಥವಾಗುವುದು ಅನಿವಾರ್ಯವಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ನಾಯಕತ್ವ ವಹಿಸುವಾಗ ಏಷ್ಯಾ ದೇಶಗಳಿಗೆ (ವಿಯೆಟ್ನಾಂ, ಇಂಡೋನೇಷ್ಯಾ ಫಿಲಿಪೈನ್ಸ್‌) ಭಾರತದ ನಾಯಕತ್ವದಲ್ಲಿ ಪರ್ಯಾಯ ಸಹಕಾರದ ಅವಕಾಶಗಳನ್ನು ಒದಗಿಸಬೇಕು ! ಇಂತಹ ಕ್ರಮಗಳನ್ನು ಕೈಗೊಂಡರೆ, ಅಭಿವೃದ್ಧಿ ಮತ್ತು ಪರಿಸರ ಸಮತೋಲನವು ಕೈಜೋಡಿಸಿ ಭವಿಷ್ಯ  ಸಾಗಬಹುದು. ಈ ರೀತಿ, ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಭೌಗೋಳಿಕ ಸಾಮರ್ಥ್ಯ, ಅತ್ಯುತ್ತಮ ಯೋಜನಾ ಸಾಮರ್ಥ್ಯ, ಆರ್ಥಿಕ ಸ್ವಾವಲಂಬನೆ, ಜಾಗತಿಕ ಸ್ಪರ್ಧೆ, ಕಾರ್ಯತಂತ್ರದ ಜಾಗೃತಿಯ ಮೂಲಕ ಸಾಗರ ಪ್ರಭುತ್ವವನ್ನು ಬಲಪಡಿಸುತ್ತಿದೆ. ಭಾರತದ ಈ ಹೊಸ ಅಧ್ಯಾಯಕ್ಕೆ ಎಲ್ಲಾ ಭಾರತೀಯರ ಶುಭ ಹಾರೈಕೆಗಳು !