ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಮೂಲಕ ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಬದ್ಧ ! – ಪ್ರಧಾನಿ ಮೋದಿ India China SCO Meeting

  • ಶಾಂಘೈ: ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸಂಭಾಷಣೆ

  • ಟ್ರಂಪ್ ಅನ್ನು ಪರೋಕ್ಷವಾಗಿ ಟೀಕೆ ಮಾಡಿದ ಜಿನ್‌ಪಿಂಗ್

ನವದೆಹಲಿ / ಬೀಜಿಂಗ್ – ಎರಡೂ ದೇಶಗಳ ಸಂಬಂಧಗಳು ಪರಸ್ಪರ ನಂಬಿಕೆಯ ಮೇಲೆ ಆಧಾರಿತವಾಗಿರಬೇಕು. ಭಾರತ-ಚೀನಾ ಸಂಬಂಧಗಳನ್ನು ಬಲಪಡಿಸಬೇಕಾದ ಅವಶ್ಯಕತೆಯಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಒಪ್ಪಂದವಾಗಿದೆ. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಮುಂದುವರೆಸಲು ನಾವು ಬದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಗಾಗಿ ಸದ್ಯ ಪ್ರಧಾನಿ ಮೋದಿ ಅವರು ಚೀನಾದ ತಿಯಾನ್ ಜಿನ್ ನಗರದಲ್ಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಆಗಸ್ಟ್ 31ರ ಬೆಳಿಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಆ ಸಂದರ್ಭದಲ್ಲಿ ಪ್ರಧಾನಿ ಮಾತನಾಡುತ್ತಿದ್ದರು.

ಅಮೇರಿಕಾ ಭಾರತದ ಮೇಲೆ ಹೇರಿದ ಭಾರಿ ಆಮದು ಸುಂಕದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ 7 ವರ್ಷಗಳ ನಂತರದ ಚೀನಾ ಭೇಟಿ ಅತ್ಯಂತ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಗಡಿ ವಿವಾದ, ಕೈಲಾಶ್ ಮಾನಸರೋವರ, ವ್ಯಾಪಾರ ಮತ್ತು ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ಇಬ್ಬರೂ ನಾಯಕರು ಕೊನೆಯ ಬಾರಿಗೆ ಅಕ್ಟೋಬರ್ 2024 ರಲ್ಲಿ ರಷ್ಯಾದ ಕಾಝಾನ್‌ ನಲ್ಲಿ ನಡೆದ ‘ಬ್ರಿಕ್ಸ್ ಶೃಂಗಸಭೆ’ಯಲ್ಲಿ ಭೇಟಿಯಾಗಿದ್ದರು.

ಪ್ರಧಾನಿ ಮೋದಿ ಅವರು ಮಂಡಿಸಿದ ಪ್ರಮುಖ ಅಂಶಗಳು!

1. ಕೈಲಾಶ್ ಮಾನಸರೋವರ ಯಾತ್ರೆ ಪುನರಾರಂಭಗೊಂಡಿದೆ.

2. ಎರಡೂ ದೇಶಗಳ ನಡುವಿನ ನೇರ ವಿಮಾನಗಳು ಕೂಡ ಪುನರಾರಂಭಗೊಳ್ಳುತ್ತಿವೆ.

3. ನಮ್ಮ ಸಹಕಾರವು ಎರಡೂ ದೇಶಗಳ 2.8 ಶತಕೋಟಿ ಜನರ ಹಿತಾಸಕ್ತಿಗಳೊಂದಿಗೆ ಸಂಬಂಧಿಸಿದೆ. ಅವು ಇಡೀ ಮಾನವಕುಲದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ.

‘ಡ್ರ್ಯಾಗನ್’ (ಚೀನಾ) ಮತ್ತು ‘ಆನೆ’ (ಭಾರತ) ಒಟ್ಟಾಗಿ ಬರುವುದು ಎರಡೂ ದೇಶಗಳಿಗೆ ಸರಿಯಾದ ಆಯ್ಕೆ! – ಜಿನ್‌ಪಿಂಗ್

ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದು:

1. ಚೀನಾ ಮತ್ತು ಭಾರತ ಎರಡು ಪ್ರಾಚೀನ ಸಂಸ್ಕೃತಿಗಳಾಗಿವೆ. ನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳು ಮತ್ತು ನಾವು ‘ಗ್ಲೋಬಲ್ ಸೌತ್’ನ (ದಕ್ಷಿಣ ಗೋಳಾರ್ಧ) ಪ್ರಮುಖ ಸದಸ್ಯರು ಕೂಡ ಆಗಿದ್ದೇವೆ.

2. ನಮ್ಮ ಜನರ ಜೀವನವನ್ನು ಸುಧಾರಿಸುವ, ಅಭಿವೃದ್ಧಿಶೀಲ ದೇಶಗಳಾಗಿ ಏಕತೆ, ಮತ್ತು ಮಾನವ ಸಮಾಜದ ಪ್ರಗತಿಯನ್ನು ಪ್ರೋತ್ಸಾಹಿಸುವ ಐತಿಹಾಸಿಕ ಜವಾಬ್ದಾರಿ ನಮ್ಮಿಬ್ಬರ ಮೇಲಿದೆ.

3. ಉತ್ತಮ ನೆರೆಹೊರೆಯವರು ಮತ್ತು ಸೌಹಾರ್ದಯುತ ಸಂಬಂಧಗಳಿರುವ ಸ್ನೇಹಿತರಾಗುವುದು, ಪರಸ್ಪರ ಯಶಸ್ಸನ್ನು ಸಶಕ್ತಗೊಳಿಸುವ ಪಾಲುದಾರರಾಗುವುದು, ಅಲ್ಲದೆ  ‘ಡ್ರ್ಯಾಗನ್’ ಮತ್ತು ‘ಆನೆ’ ಒಟ್ಟಾಗಿ ಬರುವುದು ಎರಡೂ ದೇಶಗಳಿಗೆ ಸರಿಯಾದ ಆಯ್ಕೆಯಾಗಿದೆ.

4. ಇಂದು ಜಗತ್ತು ಶತಮಾನಕ್ಕೊಮ್ಮೆ ಸಂಭವಿಸುವ ಬದಲಾವಣೆಗಳ ಮೂಲಕ ಸಾಗುತ್ತಿದೆ. ಅಂತರರಾಷ್ಟ್ರೀಯ ಪರಿಸ್ಥಿತಿ ಅಸ್ಥಿರ ಮತ್ತು ಅರಾಜಕತೆಯಿಂದ ಕೂಡಿದೆ. ಈ ವರ್ಷ ಚೀನಾ-ಭಾರತ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವ ಕೂಡ ಆಗಿದ್ದು, ಎರಡೂ ಕಡೆಯವರು ಸಂಬಂಧಗಳನ್ನು ಕಾರ್ಯತಂತ್ರದ ಎತ್ತರ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ನೋಡಬೇಕು ಮತ್ತು ನಿಭಾಯಿಸುವ ಆವಶ್ಯಕತೆ ಇದೆ.

5. ಬಹುಪಕ್ಷೀಯ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಬೇಕೆಂದು ಟ್ರಂಪ್ ಅವರ ಹೆಸರನ್ನು ಹೇಳದೆ ಜಿನ್‌ಪಿಂಗ್ ಟೀಕಿಸಿದರು .

6. ಬಹುಧ್ರುವೀಯ ಜಗತ್ತಿನಲ್ಲಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಮತ್ತು ಆ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು.

ಶಾಂಘೈ ಸಹಕಾರ ಸಂಘಟನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ!

ಶಾಂಘೈ ಸಹಕಾರ ಸಂಘಟನೆಯು 10 ಸದಸ್ಯ ದೇಶಗಳನ್ನು ಹೊಂದಿದೆ. ಇವುಗಳಲ್ಲಿ ಚೀನಾ ಮತ್ತು ಭಾರತದ ಜೊತೆಗೆ ಬೆಲಾರೂಸ್, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಾಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿವೆ. ಇದರ ಜೊತೆಗೆ, ಅನೇಕ ಸಂವಾದ ಪಾಲುದಾರರು ಮತ್ತು ವೀಕ್ಷಕ ದೇಶಗಳೂ ಕೂಡ ಇದರಲ್ಲಿವೆ.