‘ಧರ್ಮ, ಜಾತಿ ಅಥವಾ ಪಂಥದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ!’ – ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್

ಬಾಂಗ್ಲಾದೇಶ: ಢಾಕಾ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಮೂರೂ ಸೇನಾಪಡೆಗಳ ಮುಖ್ಯಸ್ಥರ ಉಪಸ್ಥಿತಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹಿಂದೂಗಳು ಶನಿವಾರ, ಆಗಸ್ಟ್ 16 ರಂದು ಬಿಗಿ ಭದ್ರತೆಯಲ್ಲಿ ಜನ್ಮಾಷ್ಟಮಿ ಉತ್ಸವವನ್ನು ಆಚರಿಸಿದರು. ರಾಜಧಾನಿ ಢಾಕಾದ ಢಾಕೇಶ್ವರಿ ದೇವಸ್ಥಾನದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಭಾಗವಹಿಸಿದ್ದರು. ಪಲಾಶಿಯಲ್ಲಿ, ಮೆರವಣಿಗೆ ಆರಂಭವಾಗುವ ಮೊದಲು, ಹಿಂದೂಗಳು ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಎಂ. ನಜ್ಮುಲ್ ಹಸನ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಹಸನ್ ಮಹಮೂದ್ ಖಾನ್ ಅವರನ್ನು ಡೋಲು ಮತ್ತು ನಗಾರಿ ಬಾರಿಸುವ ಮೂಲಕ ಸ್ವಾಗತಿಸಿದರು.

ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಈ ಉತ್ಸವದಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡಿದ ನಿಮಗೆ ನಾನು ಆಭಾರಿಯಾಗಿದ್ದೇನೆ. ಬಾಂಗ್ಲಾದೇಶದ ಮೇಲೆ ಎಲ್ಲಾ ಧರ್ಮ ಮತ್ತು ಸಮುದಾಯಗಳ ಜನರ ಹಕ್ಕು ಸಮಾನವಾಗಿದೆ. ಇಲ್ಲಿ ಯಾವುದೇ ವಿಭಜನೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಧರ್ಮ, ಜಾತಿ ಅಥವಾ ಪಂಥದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ. ನಾವೆಲ್ಲರೂ ಈ ಭೂಮಿಯ ನಾಗರಿಕರು ಮತ್ತು ನಮಗೆಲ್ಲರಿಗೂ ಇದರ ಮೇಲೆ ಸಮಾನ ಹಕ್ಕಿದೆ. ನಾವೆಲ್ಲರೂ ಒಟ್ಟಾಗಿ ಉಜ್ವಲ ಭವಿಷ್ಯಕ್ಕಾಗಿ ಪ್ರಯತ್ನಿಸೋಣ” ಎಂದು ಹೇಳಿದರು.

ಸೇನಾ ಮುಖ್ಯಸ್ಥರು ಮಾತು ಮುಂದುವರೆಸಿ, “ಶಾಂತಿ, ಭದ್ರತೆ ಮತ್ತು ಸೌಹಾರ್ದತೆಯನ್ನು ಕಾಪಾಡಲು ಸಶಸ್ತ್ರ ಪಡೆಗಳು ಯಾವಾಗಲೂ ನಾಗರಿಕರೊಂದಿಗೆ ನಿಲ್ಲುತ್ತವೆ. ಬಾಂಗ್ಲಾದೇಶವು ಸೌಹಾರ್ದತೆಯ ದೇಶವಾಗಿದೆ, ಇಲ್ಲಿ ಹಿಂದೂ, ಮುಸ್ಲಿಂ, ಬೌದ್ಧ, ಕ್ರಿಶ್ಚಿಯನ್, ಗಿರಿಜನರು, ಮತ್ತು ಬೆಂಗಾಲಿ ಜನರು ಶತಮಾನಗಳಿಂದ ಶಾಂತಿಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದಾರೆ. ಈ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಈ ಸೌಹಾರ್ದತೆ ಕಾಯ್ದುಕೊಳ್ಳುವ ನಮ್ಮ ಸಂಕಲ್ಪ ಜೀವಂತವಾಗಿರಲಿ” ಎಂದು ಕರೆ ನೀಡಿದರು.

‘ಹಿಂದೂಗಳ ರಕ್ಷಣೆಗಾಗಿ ಸೇನೆ ನಿಯೋಜನೆಗೊಂಡಿದೆ!’

“ಬಾಂಗ್ಲಾದೇಶದ ಸೇನೆಯು ಐಕ್ಯತೆಯ ಭಾವನೆಯನ್ನು ಕಾಪಾಡಲು ಬದ್ಧವಾಗಿದೆ. ಬಾಂಗ್ಲಾದೇಶದಾದ್ಯಂತ ಸಶಸ್ತ್ರ ಪಡೆಗಳು ಹಿಂದೂಗಳ ರಕ್ಷಣೆಗಾಗಿ ನಿಯೋಜನೆಗೊಂಡಿವೆ. ನೀವು ನಿಮ್ಮ ಧಾರ್ಮಿಕ ಉತ್ಸವಗಳನ್ನು ಸಂತೋಷದಿಂದ ಆಚರಿಸಿ, ಮತ್ತು ನಾವು ಸಹ ನಿಮ್ಮ ಸಂತೋಷದಲ್ಲಿ ಭಾಗವಹಿಸುತ್ತೇವೆ” ಎಂದು ಸೇನಾ ಮುಖ್ಯಸ್ಥರು ಹೇಳಿದರು.

“19ನೇ ಮತ್ತು 20ನೇ ಶತಮಾನದಲ್ಲಿ ಜನ್ಮಾಷ್ಟಮಿ ಮೆರವಣಿಗೆ ಢಾಕಾದ ಒಂದು ದೊಡ್ಡ ವಾರ್ಷಿಕ ಸಂಪ್ರದಾಯವಾಗಿತ್ತು; ಆದರೆ ಇತ್ತೀಚೆಗೆ ಅದನ್ನು ನಿಲ್ಲಿಸಲಾಗಿತ್ತು. ಈಗ ನನಗೆ ಖಚಿತವಾಗಿದೆ, ಈ ಮೆರವಣಿಗೆಯನ್ನು ಪ್ರತಿ ವರ್ಷವೂ ನಡೆಸಲಾಗುವುದು. ನಿಮಗೆ ನಮ್ಮ ಸಹಕಾರದ ಅವಶ್ಯಕತೆ ಇದ್ದಾಗ ನಾವು ಖಂಡಿತ ಸಹಕರಿಸುತ್ತೇವೆ” ಎಂದು ಭರವಸೆಯ ಮಾತನ್ನಾಡಿದರು.

ಭಗವಾನ್ ಶ್ರೀಕೃಷ್ಣನ ಸಂದೇಶವು ಎಲ್ಲಾ ಧರ್ಮದ ಜನರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ! – ಮಹಮದ್ ಯುನೂಸ್

ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮದ್ ಯುನೂಸ್ ಅವರು ಜನ್ಮಾಷ್ಟಮಿಯ ಶುಭಾಶಯ ಸಂದೇಶದಲ್ಲಿ, “ಭಗವಾನ್ ಶ್ರೀಕೃಷ್ಣನು ಸಮಾಜದಲ್ಲಿ ನ್ಯಾಯ, ಮಾನವ ಕರುಣೆ ಮತ್ತು ಶಾಂತಿಯ ಸಂದೇಶವನ್ನು ನೀಡಿದರು. ಎಲ್ಲಿ ಅನ್ಯಾಯ ಅಥವಾ ದೌರ್ಜನ್ಯ ಕಾಣುತ್ತದೆಯೋ, ಅಲ್ಲಿ ದುಷ್ಟರ ಸೋಲಿಗಾಗಿ ಅವರು ಸ್ವತಃ ಪ್ರಕಟವಾಗಿ ಹೋರಾಡಿದರು. ಅವರ ತತ್ವಜ್ಞಾನ ಮತ್ತು ಮೌಲ್ಯಗಳು ಕೇವಲ ಸನಾತನ ಧರ್ಮೀಯರಿಗೆ ಮಾತ್ರವಲ್ಲ, ಬದಲಾಗಿ ಎಲ್ಲಾ ಧರ್ಮಗಳ ಜನರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತವೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಾಗಿದ್ದರೆ, ಕಳೆದ ಒಂದು ವರ್ಷದಲ್ಲಿ ಹಿಂದೂಗಳ ಮೇಲೆ ಎರಡೂವರೆ ಸಾವಿರಕ್ಕೂ ಹೆಚ್ಚು ದಾಳಿಗಳು ಹೇಗೆ ನಡೆದವು? ಹಿಂದೂಗಳ ರಕ್ಷಣೆಗಾಗಿ ಅಲ್ಲಿನ ಪೋಲೀಸರು ಮತ್ತು ಸೇನೆ ಏನೂ ಮಾಡಿಲ್ಲ ಏಕೆ? ನೂರಾರು ಹಿಂದೂ ಸೇನಾ ಅಧಿಕಾರಿಗಳು, ಶಿಕ್ಷಕರು, ಸರಕಾರಿ ನೌಕರರು, ಪೋಲೀಸರನ್ನು ಬಲವಂತವಾಗಿ ಏಕೆ ವಜಾಗೊಳಿಸಲಾಗಿದೆ? ಈ ವಿಷಯಗಳ ಬಗ್ಗೆ ಬಾಂಗ್ಲಾದೇಶದ ಹಿಂದೂ ಸಮುದಾಯ ಸೇನಾ ಮುಖ್ಯಸ್ಥರನ್ನು ಪ್ರಶ್ನಿಸಬೇಕು!