ಅಮೇರಿಕಾದ ‘ರಟ್‌ಜರ್ಸ್ ವಿಶ್ವವಿದ್ಯಾಲಯ’ದ ಕುತಂತ್ರದ ಹಿಂದೂ ವಿರೋಧಿ ಮುಖವಾಡವನ್ನು ಬಿಚ್ಚಿದ ‘ಹಿಂದೂಪ್ಯಾಕ್ಟ್’ ಸಂಸ್ಥೆ

  • ಅಮೇರಿಕಾದ ಹಿಂದೂಗಳು ದೇಶಕ್ಕೆ ಅಪಾಯಕಾರಿ ಎನ್ನುವ ಪಕ್ಷಪಾತದ ವರದಿ ಪ್ರಸಾರ ಮಾಡಿದ ವಿಶ್ವವಿದ್ಯಾಲಯ!

  • ‘ಹಿಂದೂಪ್ಯಾಕ್ಟ್’ ಸಂಸ್ಥೆಯಿಂದ ಪ್ರತ್ಯುತ್ತರ ವರದಿ ಪ್ರಕಟ!

(‘ಹಿಂದೂಪ್ಯಾಕ್ಟ್’ ಎಂದರೆ ‘ಹಿಂದೂ ಪಾಲಿಸಿ ರಿಸರ್ಚ್ ಅಂಡ್ ಅಡ್ವೊಕಸಿ ಕಲೆಕ್ಟಿವ್’ ಅಂದರೆ ಹಿಂದೂ ನೀತಿ ಸಂಶೋಧನೆ ಮತ್ತು ಪ್ರತಿಪಾದನೆ ಸಂಸ್ಥೆ)

ಸ್ಯಾನ್ ರಾಮನ್ (ಅಮೇರಿಕಾ) – ಕೆಲವು ದಿನಗಳ ಹಿಂದೆ, ಅಮೇರಿಕಾದ ಕಟ್ಟಾ ಹಿಂದೂ ವಿರೋಧಿ ‘ರಟ್‌ ಜರ್ಸ್ ವಿಶ್ವವಿದ್ಯಾಲಯ’ವು “ಅಮೇರಿಕಾದಲ್ಲಿ ಹಿಂದುತ್ವ: ಸಮಾನತೆ ಮತ್ತು ಧಾರ್ಮಿಕ ಬಹುತ್ವಕ್ಕೆ ಜನಾಂಗೀಯ ರಾಷ್ಟ್ರೀಯತೆಯಿಂದ ಅಪಾಯ!” ಎಂಬ ಶೀರ್ಷಿಕೆಯಡಿಯಲ್ಲಿ ತೀವ್ರ ಪಕ್ಷಪಾತದಿಂದ ಕೂಡಿದ ಒಂದು ವರದಿಯನ್ನು ಪ್ರಕಟಿಸಿತ್ತು. ಈ ದ್ವೇಷಪೂರಿತ ವರದಿಗೆ ‘ಹಿಂದೂಪ್ಯಾಕ್ಟ್’ ಎಂಬ ಹಿಂದೂ ಪರ ಸಂಘಟನೆಯು ಅತ್ಯಾಧುನಿಕ ‘ಎಐ’ ಆಧಾರಿತ ವ್ಯವಸ್ಥೆಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ‘ಹಿಂದೂಪ್ಯಾಕ್ಟ್’ನ ‘ಅಮೇರಿಕನ್ ಹಿಂದೂಸ್ ಅಗೇನಸ್ಟ್ ಡಿಫಮೇಶನ್’ (ಅಪಪ್ರಚಾರದ ವಿರುದ್ಧ ಅಮೇರಿಕನ್ ಹಿಂದೂಗಳು) ಉಪಕ್ರಮದ ಅಡಿಯಲ್ಲಿ ಪ್ರಸಾರ ಮಾಡಿದ ಈ ವರದಿಯನ್ನು ‘ಎಐ’ ಬಳಸಿ ತಯಾರಿಸಲಾಗಿದೆ. ಈ ವರದಿಯು “ಹಿಂದುತ್ವ ಮತ್ತು ಅಮೇರಿಕನ್ ಕನಸು: ರಟ್‌ಜರ್ಸ್ ವಿಶ್ವವಿದ್ಯಾಲಯದ ವರದಿಯ ಹಿಂದುತ್ವದ ಪ್ರತ್ಯುತ್ತರ ಕಥೆ (ಕೌಂಟರ್-ನರೇಟಿವ್ ರಿಪೋರ್ಟ್)” ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

1. ವರದಿಯನ್ನು ತಯಾರಿಸಲು ‘Tattwa.AI’ ಎಂಬ ‘ಹಿಂದೂಹೇಟ್ ಡಿಟೆಕ್ಟರ್ ಆಂಡ್ ಕೌಂಟರ್-ನರೇಟಿವ್ ಜನರೇಟರ್’ (ಹಿಂದೂ ದ್ವೇಷವನ್ನು ಪತ್ತೆಹಚ್ಚುವ ಮತ್ತು ಅದಕ್ಕೆ ಪ್ರತ್ಯುತ್ತರ ನೀಡುವ ಕಥಾ ವ್ಯವಸ್ಥೆ) ಬಳಸಲಾಗಿದೆ. 150ಕ್ಕೂ ಹೆಚ್ಚು ಪುಸ್ತಕಗಳು, ಅಧ್ಯಯನ ವರದಿಗಳು, ತನಿಖಾ ವರದಿಗಳು ಮತ್ತು ಜಾಗತಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಈ ವ್ಯವಸ್ಥೆಯು ಭಾವನೆಗಳು, ಪಕ್ಷಪಾತ, ಕಥೆಗಳ ಕುಶಲ ನಿರ್ವಹಣೆ, ಅನುಕೂಲಕರವಾಗಿ ಸತ್ಯಗಳನ್ನು ಹೇಳುವುದು ಮತ್ತು ಮೂಲಗಳ ಪಕ್ಷಪಾತವನ್ನು ಅಭೂತಪೂರ್ವ ನಿಖರತೆಯೊಂದಿಗೆ ವಿಶ್ಲೇಷಿಸುತ್ತದೆ.

2. ‘ಹಿಂದೂಪ್ಯಾಕ್ಟ್’ನ ಸ್ಥಾಪಕ ಅಜಯ್ ಶಾ ಅವರು ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಅದರಲ್ಲಿ ಅವರು, “ನಕಾರಾತ್ಮಕ ಪದಗಳನ್ನು ಮಾತ್ರವಲ್ಲದೆ, ವ್ಯವಸ್ಥಿತವಾಗಿ ಕಥೆಗಳನ್ನು ವಿರೂಪಗೊಳಿಸುವ ‘ಎಐ’ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಈ ಮೂಲಕ ಸತ್ಯವನ್ನು ರಕ್ಷಿಸುವುದು ನಮ್ಮ ಉಪಕ್ರಮದ ಉದ್ದೇಶವಾಗಿದೆ. ಶಿಕ್ಷಣ ತಜ್ಞರು ತಾರತಮ್ಯದ ಎಲ್ಲೆ ಮೀರಿದಾಗ ಮತ್ತು ಹಿಂದೂ ವಿರೋಧಿ ಕಥೆಗಳನ್ನು ರಚಿಸಿದಾಗ, ಅವರನ್ನು ಹೊಣೆಗಾರರನ್ನಾಗಿ ಮಾಡಲು ಈ ವ್ಯವಸ್ಥೆಯು ಸಮರ್ಥವಾಗಿದೆ” ಎಂದು ಶಾ ಹೇಳಿದ್ದಾರೆ.

‘ಹಿಂದೂಪ್ಯಾಕ್ಟ್’ ಹಿಂದೂ ವಿರೋಧಿ ಪಿತೂರಿಯನ್ನು ಬಯಲು ಮಾಡಿದೆ!

‘ರಟ್‌ ಜರ್ಸ್ ವಿಶ್ವವಿದ್ಯಾಲಯ’ದ ವರದಿಯು ‘ಹಿಂದುತ್ವ’ ಅಥವಾ ‘ಹಿಂದೂ ಧರ್ಮದ ಸಾರ’ ಎಂಬ ಪದಗಳನ್ನು ನಿರಂತರವಾಗಿ ನಿಂದನೀಯ ರೀತಿಯಲ್ಲಿ ಬಳಸುತ್ತದೆ. ವರದಿಯು ‘ಫ್ಯಾಸಿಸ್ಟ್’ (ಧರ್ಮಾಂಧ) ಮತ್ತು ‘ಸುಪ್ರೀಮಸಿಸ್ಟ್’ (ಶ್ರೇಷ್ಠತಾ-ವಾದಿ) ನಂತಹ ಉದ್ರೇಕಕಾರಿ ಪದಗಳನ್ನು ಯಾವುದೇ ಪುರಾವೆ ಇಲ್ಲದೆ ಹಿಂದೂಗಳ ಮೇಲೆ ಆರೋಪಿಸಿದೆ. ವರದಿಯ ತೀರ್ಮಾನಗಳನ್ನು ಮಂಡಿಸುವಾಗ, ಸಮತೋಲಿತ ದೃಷ್ಟಿಕೋನವನ್ನು ನೀಡಲು ಒಂದೇ ಒಂದು ಪ್ರಮುಖ ಹಿಂದೂಪರ ಸಂಸ್ಥೆಯ ಅಭಿಪ್ರಾಯವನ್ನು ಪಡೆಯಲಿಲ್ಲ. ಈ ವರದಿಯು ಸೈದ್ಧಾಂತಿಕವಾಗಿ ಪಕ್ಷಪಾತದಿಂದ ಕೂಡಿದೆ, ವ್ಯವಸ್ಥಿತವಾಗಿ ದೋಷಪೂರಿತವಾಗಿದೆ ಮತ್ತು ಇಡೀ ಹಿಂದೂ ಸಮುದಾಯಕ್ಕೆ ಕಳಂಕ ತರಲು ರಚಿಸಲಾಗಿದೆ. ಈ ಮಾಹಿತಿಯನ್ನು ‘ಎಐ’ ಮೂಲಕ ಅಧ್ಯಯನ ಮಾಡಿದಾಗ, ಅದರ ‘ಹಿಂದೂಫೋಬಿಯಾ ರಿಸ್ಕ್ ಸ್ಕೋರ್’ (ಹಿಂದೂ ದ್ವೇಷದ ಅಂಶ) ಗರಿಷ್ಠ ಅಪಾಯದ ಮಟ್ಟವನ್ನು ತಲುಪಿತು ಎಂದು ‘ಹಿಂದೂಪ್ಯಾಕ್ಟ್’ನ ಅಧ್ಯಕ್ಷೆ ದೀಪ್ತಿ ಮಹಾಜನ್ ತಿಳಿಸಿದರು.

‘ಹಿಂದೂಪ್ಯಾಕ್ಟ್’ನ ಬೇಡಿಕೆಗಳು!

1. ಇಂತಹ ಎಲ್ಲಾ ವರದಿಗಳ ಬರವಣಿಗೆಯಲ್ಲಿ ಪಾರದರ್ಶಕತೆ ಇರಬೇಕು.

2. ನಿಧಿ ಮತ್ತು ವಿದೇಶಿ ಪ್ರಭಾವವನ್ನು ಬಹಿರಂಗಪಡಿಸಬೇಕು.

3. ಅಮೇರಿಕಾದ ನ್ಯಾಯ ಇಲಾಖೆಯು ರಟ್‌ ಜರ್ಸ್, ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಡೆನ್ವರ್ ವಿಶ್ವವಿದ್ಯಾಲಯಗಳಲ್ಲಿ ನಾಗರಿಕ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಕಾನೂನು ತನಿಖೆ ಪ್ರಾರಂಭಿಸಬೇಕು.

4. ಹಿಂದೂ ವಿರೋಧಿ ಸಂಘಟನೆಗಳ ಭಯೋತ್ಪಾದಕರ ಸಂಬಂಧಗಳ ಬಗ್ಗೆ ತನಿಖೆ ನಡೆಸಬೇಕು.

5. ಹಿಂದೂ ವಿದ್ವಾಂಸರಿಗೆ ಸರಿಯಾದ ನೇಮಕಾತಿ ವಿಧಾನಗಳು ಮತ್ತು ಹಿಂದೂ ಪಠ್ಯಕ್ರಮದ ಅಭಿವೃದ್ಧಿಯಲ್ಲಿ ಅವರ ಸಹಭಾಗಿತ್ವ ಇರಬೇಕು.

‘ಹಿಂದೂಪ್ಯಾಕ್ಟ್’ ರಚಿಸಿದ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://hindupact.org/2025/08/06/response-to-rutgers-report-hindutva-in-america-an-ethnonationalist-t

ಸಂಪಾದಕೀಯ ನಿಲುವು

ಅಂತರ್ಜಾಲದಲ್ಲಿ ಹೆಚ್ಚಾಗಿರುವ ಈ ಮಾಹಿತಿ ಕಮ್ಯುನಿಸ್ಟ್ ಮತ್ತು ಹಿಂದೂ ವಿರೋಧಿ ಸಿದ್ಧಾಂತದಿಂದ ತುಂಬಿದೆ. ‘ಎಐ’ ಇಂಟರ್ನೆಟ್ ಬಳಸುವುದರಿಂದ, ಅದರಿಂದ ಬರುವ ಮಾಹಿತಿಯೂ ಹಿಂದೂ ವಿರೋಧಿಯಾಗಿರುತ್ತದೆ. ಇದಕ್ಕೆ ಪ್ರತಿಯಾಗಿ, ‘ಎಐ’ಯನ್ನು ಸರಿಯಾಗಿ ಬಳಸಿಕೊಂಡು ‘ಹಿಂದೂಪ್ಯಾಕ್ಟ್’ ವರದಿಯನ್ನು ಸಿದ್ಧಪಡಿಸಿರುವ ಪ್ರಯತ್ನವು ಭವಿಷ್ಯದಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಉಪಯೋಗವನ್ನು ಹಿಂದೂ ಕಾರ್ಯಕರ್ತರು ಹೆಚ್ಚು-ಹೆಚ್ಚು ಬಳಸಿಕೊಳ್ಳುವುದು ಈಗಿನ ಕಾಲದ ಅಗತ್ಯವಾಗಿದೆ!