ಭಾರತ ರಷ್ಯಾದಿಂದ ತೈಲ ಖರೀದಿಸಿ ಯುದ್ಧಕ್ಕೆ ಹಣಕಾಸು ಒದಗಿಸುವುದು ಸ್ವೀಕಾರಾರ್ಹ ಅಲ್ವಂತೆ ! US Accuses India Buying Russian Oil

ವಾಷಿಂಗ್ಟನ್ (ಅಮೆರಿಕಾ) – ರಷ್ಯಾದಿಂದ ಭಾರತ ತೈಲ ಖರೀದಿಸಿ ಯುದ್ಧಕ್ಕೆ ಹಣಕಾಸು ಒದಗಿಸುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿ ಸ್ಟೀಫನ್ ಮಿಲ್ಲರ್ ಮಾಹಿತಿ ನೀಡಿದ್ದಾರೆ.

ಸ್ಟೀಫನ್ ಮಿಲ್ಲರ್ ಮಾತು ಮುಂದುವರೆಸಿ, ಭಾರತದೊಂದಿಗೆ ಟ್ರಂಪ್ ಅವರಿಗೆ ಅಚಲ ಸಂಬಂಧ ಬೇಕಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರ ನಡುವೆ ಅಂತಹ ಸಂಬಂಧವಿದೆ; ಆದರೆ ಭಾರತದ ರಷ್ಯಾ ಜೊತೆಗಿನ ವ್ಯಾಪಾರದ ಬಗ್ಗೆ ಪುನರ್ಪರಿಶೀಲನೆ ಅಗತ್ಯವಿದೆ. ಹಾಗೆಯೇ ಭಾರತದಿಂದ ರಷ್ಯಾಕ್ಕೆ ಯುದ್ಧಕ್ಕಾಗಿ ಆಗುತ್ತಿರುವ ಹಣಕಾಸು ಪೂರೈಕೆಯ ಬಗ್ಗೆ ವಾಸ್ತವಿಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವ ಅವಶ್ಯಕತೆಯಿದೆ. ನಾವು ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಬೇಕಿದೆ. ಅದಕ್ಕಾಗಿ ಟ್ರಂಪ್ ಎಲ್ಲ ಮಿತ್ರರಾಷ್ಟ್ರಗಳಿಂದ ಸಹಕಾರ ನಿರೀಕ್ಷಿಸುತ್ತಾರೆ ಎಂದು ಹೇಳಿದರು.

ಪರಿಸ್ಥಿತಿ ಏನು?

ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಜಗತ್ತಿನ ದೇಶಗಳಲ್ಲಿ ಚೀನಾ ಮತ್ತು ಅಮೆರಿಕಾದ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. ಹಾಗೆಯೇ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಎರಡನೇ ಅತಿ ದೊಡ್ಡ ಗ್ರಾಹಕ ಭಾರತವಾಗಿದೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿವೆ. ಆದರೆ ಈ ಯುದ್ಧದ ನಂತರ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಶೇ 0.2 ರಿಂದ ಶೇ 35-40 ರಷ್ಟು ಹೆಚ್ಚಿಸಿದೆ. ಮುಖ್ಯವಾಗಿ ಕಳೆದ ಮೂರೂವರೆ ವರ್ಷಗಳಿಂದ ಭಾರತಕ್ಕೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತಿದೆ. ಒಂದು ವೇಳೆ ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ, ಅದು ಇತರ ದೇಶಗಳಿಂದ ತೈಲವನ್ನು ಖರೀದಿಸಬೇಕಾಗುತ್ತದೆ. ಅದಕ್ಕಾಗಿ ಭಾರತವು ಹೆಚ್ಚುವರಿಯಾಗಿ 9 ರಿಂದ 11 ಬಿಲಿಯನ್ ಡಾಲರ್ (ಸುಮಾರು 75 ರಿಂದ 91 ಸಾವಿರ ಕೋಟಿ ರೂಪಾಯಿ) ಪಾವತಿಸಬೇಕಾಗಬಹುದು.

ಸಂಪಾದಕೀಯ ನಿಲುವು

ಭಾರತ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅಮೆರಿಕಾ ಭಾರತಕ್ಕೆ ಹೇಳಿಕೊಡಬೇಕಾಗಿಲ್ಲ! ಟ್ರಂಪ್ ಅವರಿಗಿಂತ ಮೊದಲು ಬೈಡನ್ ಸರಕಾರಗಳು ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ, ಹಾಗಿದ್ದ ಮೇಲೆ ಟ್ರಂಪ್ ಸರಕಾರಕ್ಕೆ ಈ ಅನಗತ್ಯ ವಿಷಯ ಏಕೆ?