Chhattisgarh Liquor Scam : ಮದ್ಯ ಹಗರಣ ಪ್ರಕರಣದಲ್ಲಿ ಛತ್ತೀಸಗಢ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಪುತ್ರನ ಬಂಧನ

ರಾಯಪುರ (ಛತ್ತೀಸಗಢ) – ಛತ್ತೀಸಗಡದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಭಿಲಾಯಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದ ಆರ್ಥಿಕ ಅವ್ಯವಹಾರದ ಪ್ರಕರಣದಲ್ಲಿ ಈ ಬಂಧನ ಮಾಡಲಾಗಿದೆ. ಈ ಹಿಂದೆ ಹಗರಣ 2 ಸಾವಿರ ಕೋಟಿ ರೂಪಾಯಿಗಳದ್ದು ಎಂದು ಹೇಳಲಾಗಿತ್ತು; ಆದರೆ ಇ.ಡಿ. ಸಲ್ಲಿಸಿರುವ ಆರೋಪಪತ್ರದಲ್ಲಿ ಈ ಹಗರಣ 3 ಸಾವಿರದ 200 ಕೋಟಿ ರೂಪಾಯಿಗಳದ್ದು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಛತ್ತೀಸಗಢದ ಆಗಿನ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರನ್ನು ಈಗಾಗಲೇ ಬಂಧಿಸಲಾಗಿದೆ. 2019 ರಿಂದ 2022 ರ ಅವಧಿಯಲ್ಲಿ ಮದ್ಯ ತಯಾರಿಕಾ ಕಂಪನಿಗಳಿಂದ ದೊಡ್ಡ ಪ್ರಮಾಣದಲ್ಲಿ ಲಂಚ ಸ್ವೀಕರಿಸಲಾಗುತ್ತಿತ್ತು. ಈ ಮದ್ಯವನ್ನು ಛತ್ತೀಸಗಡ ರಾಜ್ಯ ಮಾರುಕಟ್ಟೆ ನಿಗಮದ ಮೂಲಕ ಖರೀದಿಸಲಾಗುತ್ತಿತ್ತು; ಆದರೆ ಇದರಿಂದ ಸರಕಾರಕ್ಕೆ ಒಂದು ಪೈಸೆಯ ಲಾಭವೂ ಆಗಲಿಲ್ಲ. ಚೈತನ್ಯ ಬಘೇಲ ಮತ್ತು ಇತರರು ಈ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇ.ಡಿ. ಇದುವರೆಗೆ 205 ಕೋಟಿ ರೂಪಾಯಿಗಳ ಆಸ್ತಿಗಳನ್ನು ಜಪ್ತಿ ಮಾಡಿದೆ.

ಸಂಪಾದಕೀಯ ನಿಲುವು

ಹಗರಣ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಬಹಳಷ್ಟು ಜನರನ್ನು ಬಂಧಿಸಲಾಗುತ್ತಿತ್ತು; ಆದರೆ ಅವರ ಮೇಲೆ ತ್ವರಿತವಾಗಿ ಕ್ರಮ ಕೈಕೊಂಡು ಮತ್ತು ನಂತರ ಪ್ರಕರಣಗಳನ್ನು ನಡೆಸಿ ಅವರಿಗೆ ಶಿಕ್ಷೆ ನೀಡಲು ವಿಳಂಬವಾಗುತ್ತದೆ ಎಂಬುದು ಅಷ್ಟೇ ಸತ್ಯ!