ಪ.ಪ. ಶ್ರೀಧರಸ್ವಾಮೀಜಿಯವರು ಗುರುಭಕ್ತರಿಗೆ ನೀಡಿದ ಬೋಧಾಮೃತ ಮತ್ತು ಆಶೀರ್ವಚನ !

1. ಗುರುನಿಷ್ಠೆ ಮತ್ತು ಗುರುಕೃಪೆಯ ಮಹತ್ವ

ಅ. `ಗುರುನಿಷ್ಠೆ ಶಾಶ್ವತವಾಗಿರುತ್ತದೆ. `ಈ ಗುರುನಿಷ್ಠೆಗಾಗಿ ದೇಹ ಮತ್ತು ಮಮತೆಯನ್ನು ಮರೆಯಬೇಕು’ ಎಂದೆನಿಸುತ್ತದೆ. `ಮಾನ-ಅಪಮಾನಗಳ ಬಗ್ಗೆ ಚಿಂತೆ ಮಾಡಬೇಕು’ ಎಂದೆನಿಸುವುದಿಲ್ಲ. ದಯೆ, ಕ್ಷಮೆ ಮತ್ತು ಶಾಂತಿ ಈ ಭಾವನೆಗಳು ತಾವಾಗಿಯೇ ಜಾಗೃತಗೊಳ್ಳುತ್ತವೆ.

ಆ. ಶ್ರೀ ಗುರುಗಳ ಆಶ್ರಯ ದೊರೆತಾಗ ಅಖಂಡ ಸಮಾಧಾನ ಲಭಿಸುತ್ತದೆ ಮತ್ತು ನಿಸ್ವಾರ್ಥ ಬುದ್ಧಿಯು ತಾನಾಗಿ ಸ್ಥಿರಗೊಳ್ಳುತ್ತದೆ.

ಇ. ಎಲ್ಲ ಸದ್ಗುಣಗಳಿಂದ ಕೂಡಿದವನಾಗಿದ್ದರಿಂದ ಎಲ್ಲರ ಪ್ರೇಮ ಲಭಿಸುತ್ತದೆ. ವಾಣಿ ಮೃದುವಾಗುತ್ತದೆ. ತನ್ನ ಮತ್ತು ಪರರ ಬಗ್ಗೆ ಸಹಜವಾಗಿಯೇ ಸಮದೃಷ್ಟಿಕೋನ ನಿರ್ಮಾಣವಾಗುತ್ತದೆ. `ನಾವು ಹೇಗೋ ಹಾಗೆಯೇ ಜಗತ್ತು’ ಎಂಬ ಭಾವನೆ ಮೂಡುವುದರಿಂದ `ಇತರರ ಕಷ್ಟಗಳಲ್ಲಿ ಭಾಗಿಯಾಗಬೇಕು’ ಎಂದೆನಿಸುತ್ತದೆ.

ಈ. ವಿಷಯ ಮತ್ತು ಮೋಹ ಇವುಗಳಿಂದ ದೂರ ಹೋಗುವ ಇಚ್ಛೆ ಉಂಟಾಗುತ್ತದೆ. ಕಾಮ-ಕ್ರೋಧಗಳ ಮೇಲೆ ಜಯ ಸಾಧಿಸುವ ಇಚ್ಛೆ ಜಾಗೃತವಾಗುತ್ತದೆ. ಬ್ರಹ್ಮರೂಪದ ಸತತ ಧ್ಯಾಸವಾಗುತ್ತದೆ. ಗುರುಕೃಪೆಯೇ ನಮಗೆ ಬ್ರಹ್ಮಸ್ವರೂಪ ಜ್ಞಾನವನ್ನು ದೊರಕಿಸಿಕೊಟ್ಟು ಜೀವನ್ಮುಕ್ತರಾಗಲು ಸಹಾಯ ಮಾಡುತ್ತದೆ.

2. `ಗುರುಕೃಪೆ’ಯು ಹೇಗೆ ಕಾರ್ಯವನ್ನು ಮಾಡುತ್ತದೆ ?

`ನನಗೆ ಸೂರ್ಯನ ಪ್ರಕಾಶ ಬೇಡ’ ಎಂದು ಯಾರಾದರೂ ಕಣ್ಣುಗಳನ್ನು ಮುಚ್ಚಿಕೊಂಡು ನಡೆದರೂ, ಅವನ ಮೈಮೇಲೆ ಬಿಸಿಲು ಬಿದ್ದೇ ಬೀಳುತ್ತದೆ ! ಅವನು ಕಣ್ಣು ತೆರೆಯದ ಕಾರಣ ಅವನ ಮಾರ್ಗ ತಪ್ಪಬಹುದು, ಆದರೂ ಬಿಸಿಲು ಅವನಿಗೆ ಶಾಖ ನೀಡುವುದನ್ನು ನಿಲ್ಲಿಸುವುದಿಲ್ಲ. ಗುರುಕೃಪೆಯೂ ಅದೇ ರೀತಿ ಇದೆ. ಸಾಧಕನು ಕಣ್ಣುಗಳನ್ನು ಮುಚ್ಚದೇ ಪ್ರಾರ್ಥಿಸಿದರೂ, `ಎಲ್ಲರ ಉದ್ಧಾರವಾಗಬೇಕು’ ಎಂದು ಗುರುಗಳು ಪ್ರಾರ್ಥಿಸುತ್ತಾರೆ. ಆಗ ಆ ಸಾಧಕನ ಉದ್ಧಾರವೂ ಆಗುತ್ತದೆ, ಏಕೆಂದರೆ ಗುರುಕೃಪೆಯು ಎಲ್ಲರ ಮೇಲೆ ಆಗುತ್ತಿರುತ್ತದೆ; ಆದರೆ, `ಮೋಕ್ಷದ ಅಪೇಕ್ಷೆಯಿದ್ದರೂ ಸಾಧನೆ ಇಲ್ಲದೆ ಅದು ಸಿಗಬೇಕು’ ಎಂದು ಅವನು ಹೇಳಿದರೆ, ಅದು ಆಗುವುದಿಲ್ಲ. ಅವನಿಗೆ ಮೋಕ್ಷಮಾರ್ಗವು ಸಿಗುವುದೇ ಇಲ್ಲ.

3. ಗುರುಕೃಪೆಯಿಂದ ಜೀವನ ಬ್ರಹ್ಮಸ್ವರೂಪವಾಗುವುದು

ಎಲ್ಲಾ ಗುಣ-ಲಕ್ಷಣಗಳಲ್ಲಿ ಯಾವುದಾದರೊಂದು ಕಡಿಮೆ ಇದ್ದರೂ, ಗುರುಭಕ್ತಿಯನ್ನು ಹೆಚ್ಚಿಸಿ, ಮನಃಪೂರ್ವಕ ಶುದ್ಧ ಸೇವೆಯನ್ನು ಮಾಡಿ, ಗುರುಗಳ ಧ್ಯಾನವೇ ಜಪ ಮತ್ತು ಮೋಕ್ಷವನ್ನು ಪಡೆಯುವ ತೀವ್ರ ಬಯಕೆಯಿಂದ, ಸಾಧನೆಯ ಉತ್ಸಾಹದಿಂದ, ವಿನಯ, ಆಜ್ಞಾಪಾಲನೆ, ಶುಭ ಆಚಾರ-ವಿಚಾರ, ಉಪಚಾರ, ಶಾಂತಿ, ಸಮಾಧಾನ, ಪರೋಪಕಾರ ಮತ್ತು ಮಾತುಕತೆ
ಯಲ್ಲಿ ಸತ್ಯವನ್ನು ಪಾಲಿಸಿ ಶ್ರೀ ಗುರುಗಳಿಗೆ ಮೆಚ್ಚುಗೆಯಾಗುವಂತೆ ನಾವು ಪ್ರಯತ್ನಿಸಿ ನಡೆದುಕೊಳ್ಳಬೇಕು. ಅವರ ಕೃಪೆಯಾದಂತೆ, ನಮಗೆ ದೈವೀ ಸಂಪತ್ತು ಲಭಿಸಿ ಜೀವನ ಬ್ರಹ್ಮಸ್ವರೂಪವಾಗುವುದು.

4. ಅಖಂಡ ಆತ್ಮಾನುಸಂಧಾನದಿಂದಲೇ ಸಾಕ್ಷಾತ್ಕಾರ !

ಬಿಸಿಲಿನಲ್ಲಿ ನಡೆಯುವಾಗ ಕಣ್ಣುಗಳು ತೆರೆದಿದ್ದರೆ ಮಾತ್ರ ದಾರಿ ಕಾಣಿಸುತ್ತದೆ, ಹಾಗೆಯೇ ನಮ್ಮ ದುರ್ಗುಣಗಳನ್ನು ಗುರುತಿಸಿ, ಅವುಗಳನ್ನು ನಿರಾಕರಿಸಿ, ಅಹಂಕಾರಕ್ಕೆ ಆಸ್ಪದ ನೀಡದೆ, ಎಚ್ಚರಗೊಂಡು ಅಖಂಡ ಆತ್ಮಾನುಸಂಧಾನವನ್ನು ಇಟ್ಟುಕೊಳ್ಳುವವರಿಗೆ ಮೋಕ್ಷಮಾರ್ಗವು ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಆತ್ಮಸೂರ್ಯನ ಬೆಳಕಿನ ಸಾಕ್ಷಾತ್ಕಾರವಾಗುತ್ತದೆ.

5. ಶಿಷ್ಯನಿಗೆ ಸಹಾಯ ಮಾಡುವ ಶ್ರೀ ಗುರುಗಳು

ಬ್ರಹ್ಮಸ್ವರೂಪರಾದ ಶ್ರೀ ಗುರುಗಳು ಶುದ್ಧ ಆನಂದಸ್ವರೂಪ ರಾಗಿರುತ್ತಾರೆ. ಆದ್ದರಿಂದ ಅವರು ಭೇದಭಾವ ಮಾಡುವುದಿಲ್ಲ. ಸಮುದ್ರವು ಹೇಗೆ ಅಲೆ-ನೊರೆಯಿಂದ ವ್ಯಾಪಿಸಿರುತ್ತದೆಯೋ, ಹಾಗೆಯೇ ಸದ್ಗುರುಗಳು ಸ್ಥಿರ-ಚಿರ ಪ್ರಪಂಚದಲ್ಲಿ ಒಂದೇ ರೂಪದಲ್ಲಿ ವ್ಯಾಪಿಸಿರುತ್ತಾರೆ. ಗುರುವಾತ್ಸಲ್ಯ ನಿಮಗೆ ಅಪರಿಚಿತವಲ್ಲ. ಉನ್ನತ ಕುಲದಲ್ಲಿ ಜನಿಸಿದ ಸುಸಂಸ್ಕೃತ ತಾಯಿಯು ತನ್ನ ಮಕ್ಕಳು ಒಳ್ಳೆಯವರಾಗಿ ಬೆಳೆಯಬೇಕೆಂದು, ತನ್ನ ಕ್ಷಮತೆ ಮೀರಿ ಪ್ರಯತ್ನಿಸುತ್ತಿರುತ್ತಾಳೆ, ಹಾಗೆಯೇ ಶ್ರೀ ಗುರುಗಳು ತಮ್ಮ ಶಿಷ್ಯರಿಗಾಗಿ ಮಾಡುತ್ತಿರುತ್ತಾರೆ. ನಿಜವಾದ ವೈದ್ಯರು ರೋಗಿಗೆ ಪರಿಣಾಮಕಾರಿ ಔಷಧಗಳನ್ನು ಮತ್ತು `ಇಂಜೆಕ್ಷನ್’ಗಳನ್ನು ರೋಗ ಕಡಿಮೆಯಾಗುವವರೆಗೂ ನಿರಂತರವಾಗಿ ನೀಡುತ್ತಾರೆ, ಅದೇ ರೀತಿ ಗುರುಗಳೂ ಜ್ಞಾನವುಳ್ಳ ಮತ್ತು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಶಿಷ್ಯರನ್ನು ಉದ್ಧರಿಸಲು, ಭವರೋಗದಿಂದ ಬಳಲುತ್ತಿರುವ ಶಿಷ್ಯರಿಗೆ ಜ್ಞಾನವೆಂಬ ಔಷಧಿ ಮತ್ತು ತಮ್ಮ ದೈವೀ ಶಕ್ತಿಯ `ಇಂಜೆಕ್ಷನ್’ಗಳನ್ನು ನೀಡಿ ರೋಗವನ್ನು ನಿವಾರಿಸುತ್ತಾರೆ. ಅವರು ಸಂಪೂರ್ಣ ಸಿದ್ಧರಾಗುವವರೆಗೆ ಅವರ ಔಷಧೋಪಚಾರ ಗಳು ಮುಂದುವರೆಯುತ್ತವೆ. ಇದರರ್ಥ, ಅವರು ತಮ್ಮ ಬಲದ ಮೇಲೆ ಶಿಷ್ಯರಲ್ಲಿ ಬದಲಾವಣೆ ತರುತ್ತಾರೆ, ಅವರ ತೊಂದರೆಗಳನ್ನು ದೂರ ಮಾಡುತ್ತಾರೆ, ವಿಘ್ನಗಳನ್ನು ಪರಿಹರಿಸುತ್ತಾರೆ. ಅದಕ್ಕಾಗಿ ಶಿಷ್ಯನೂ ತನ್ನ ದೇಹಸ್ಥಿತಿಯ ಅರಿವನ್ನು ಅವರಿಗೆ ನೀಡಬೇಕು, ಅಂದರೆ ಅವರು ಅದಕ್ಕೆ ಪರಿಹಾರ ಸೂಚಿಸಬಹುದು. – ಪ.ಪ. ಶ್ರೀಧರಸ್ವಾಮಿ (ಸಂದರ್ಭ: ಸದ್ಗುರುಬೋಧಾಮೃತ)