ಸಾಧು-ಸಂತರ ಸಾಧನೆಯ ಒಂದು ವಿಭಿನ್ನ ವಿಶ್ವ !

೧. ಸಾಧು ಮತ್ತು ಸಂತರ ಕೆಲವು ಪ್ರಮುಖ ಸಾಧನೆಗಳು : ‘ಸಾಧು-ಸಂತರ ಜಗತ್ತು ವಿಭಿನ್ನವಾಗಿರುತ್ತದೆ. ಹೊರಗಿನಿಂದ ನೋಡಲು ಅವರು ಸಾಮಾನ್ಯ ಜನರಂತೆ ಕಂಡರೂ ಈ ಸಾಧುಗಳ ಅನೇಕ ಹೆಸರುಗಳು ಹಾಗೂ ಪ್ರಕಾರಗಳಿವೆ. ಕೆಲವು ಸಾಧುಗಳು ಅವರ ಹಠಯೋಗಕ್ಕಾಗಿ, ಕೆಲವರು ಅವರ ಸಂಪ್ರದಾಯಗಳ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಸಾಧುಗಳು ಮತ್ತು ಸಂತರು ತಮ್ಮ ದೇಹವನ್ನು ದಂಡಿಸಿ ಹಗಲಿರುಳು ಈಶ್ವರನ ಉಪಾಸನೆಯಲ್ಲಿ ಲೀನರಾಗಿರುತ್ತಾರೆ. ಸಾಧು-ಸಂತರು ಅನೇಕ ಪ್ರಕಾರದ ಸಾಧನೆಯನ್ನು ಮಾಡುತ್ತಾರೆ. ಅವುಗಳಲ್ಲಿ ಕೆಲವು ಪ್ರಮುಖ ಸಾಧನೆಗಳು ಈ ಮುಂದಿನಂತಿವೆ.

ಅ. ದಂಡೀ : ಈ ಸಾಧುಗಳು ಅವರ ಜೊತೆಗೆ ಒಂದು ದಂಡ (ಕೇಸರಿ ವಸ್ತ್ರದಿಂದ ಮುಚ್ಚಿದ ಮರದ ಕೋಲು) ಹಾಗೂ ಕಮಂಡಲ (ನೀರಿನ ಪಾತ್ರೆ) ಇಟ್ಟುಕೊಳ್ಳುತ್ತಾರೆ. ಅವರು ಯಾವುದೇ ಧಾತುವಿನ ವಸ್ತುವನ್ನು ಸ್ಪರ್ಶಿಸುವುದಿಲ್ಲ. ಅವರು ಪ್ರತಿದಿನ ಒಮ್ಮೆ ಮಾತ್ರ ಭಿಕ್ಷೆ ಬೇಡಲು ಹೋಗುತ್ತಾರೆ.

ಆ. ಅಲೆಸ್ಬಿಯಾ : ಈ ಶಬ್ದ ಆಲೇಖದಲ್ಲಿ ಬರುತ್ತದೆ. ಸನ್ಯಾಸಿಗಳು ಭಿಕ್ಷೆ ಬೇಡುವಾಗ ಈ ಶಬ್ದವನ್ನು ಉಚ್ಚರಿಸುತ್ತಾರೆ. ಅವರು ಕಡಗ, ಛಲಾ(ಉಂಗುರ) ಇತ್ಯಾದಿ ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದಿಂದ ತಯಾರಿಸಿದ ವಿಶಿಷ್ಟ ಆಭರಣಗಳನ್ನು ಧರಿಸುತ್ತಾರೆ. ಇದರ ಹೊರತು ಜನರನ್ನು ಆಕರ್ಷಿಸಲು ಅವರು ತಮ್ಮ ಸೊಂಟದ ಸುತ್ತಲೂ ಸಣ್ಣ ಗಂಟೆಗಳನ್ನೂ ಕಟ್ಟಿಕೊಳ್ಳುತ್ತಾರೆ.

ಇ. ಊರ್ಧ್ವಮುಖಿ : ಈ ಸಾಧುಗಳು ಅವರ ಕಾಲುಗಳನ್ನು ಮೇಲೆ ಹಾಗೂ ತಲೆಯನ್ನು ಕೆಳಗೆ ಮಾಡಿ ಮರದ ಕೊಂಬೆಗೆ ಕಾಲುಗಳನ್ನು ಕಟ್ಟಿಕೊಂಡು ನೇತಾಡುತ್ತಾರೆ.

ಈ. ಧಾರೇಶ್ವರೀ : ಈ ಸಾಧುಗಳು ಹಗಲಿರುಳು ನಿಂತಿರುತ್ತಾರೆ, ನಿಂತೇ ಊಟ ಮಾಡುತ್ತಾರೆ ಹಾಗೂ ಅದೇ ಸ್ಥಿತಿಯಲ್ಲಿ ನಿದ್ರಿಸುತ್ತಾರೆ. ಇಂತಹ ಸಂತರಿಗೆ ‘ಹಠಯೋಗಿ’ಗಳು ಎನ್ನುತ್ತಾರೆ.

ಉ. ಊರ್ಧ್ವಬಾಹು : ಇವರು ಇಷ್ಟ ದೇವತೆಯನ್ನು ಪ್ರಸನ್ನ ಗೊಳಿಸಲು ಒಂದು ಅಥವಾ ಎರಡೂ ಕೈಗಳನ್ನು ಮೇಲೆತ್ತಿರುತ್ತಾರೆ.

ಊ. ನಕ್ಖೀ : ಅನೇಕ ಕಾಲದ ವರೆಗೆ ಉಗುರುಗಳನ್ನು ಕತ್ತರಿಸದ ಸಾಧುಗಳನ್ನು ‘ನಕ್ಖೀ’ ಸಾಧುಗಳೆನ್ನುತ್ತಾರೆ. ಅವರ ಉಗುರುಗಳು ಸಾಮಾನ್ಯ ಜನರ ಉಗುರುಗಳಿಗಿಂತ ಅನೇಕ ಪಟ್ಟು ಉದ್ದವಿರುತ್ತವೆ.

ಎ. ಮೌನವ್ರತಸ್ತ : ಈ ಸಾಧುಗಳು ಮೌನವಾಗಿದ್ದು ಧ್ಯಾನ ಮಾಡುತ್ತಾರೆ. ಅವರಿಗೆ ಏನಾದರೂ ಹೇಳಲಿಕ್ಕಿದ್ದರೆ, ಅವರು ಕಾಗದದ ಮೆಲೆ ಬರೆಯುತ್ತಾರೆ.

ಏ. ಜಲಸಾಜೀವಿ : ಈ ಸಾಧುಗಳು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನದಿ ಅಥವಾ ಕೆರೆಯ ನೀರಿನಲ್ಲಿ ನಿಂತುಕೊಂಡು ತಪಶ್ಚರ್ಯ ಮಾಡುತ್ತಾರೆ.

ಓ. ಜಲಧಾರಾ ತಪಸ್ವಿ : ಈ ಸಾಧುಗಳು ಹೊಂಡದೊಳಗೆ ಕುಳಿತಿರುತ್ತಾರೆ ಹಾಗೂ ಅವರ ತಲೆಯ ಮೇಲೆ ಒಂದು ಕೊಡಪಾನ ಇಡುತ್ತಾರೆ. ಅದಕ್ಕೆ ತೂತುಗಳಿರುತ್ತವೆ. ಈ ಕೊಡಪಾನದ ನೀರು ತೂತುಗಳಿಂದ ಅವರ ಮೇಲೆ ನಿರಂತರ ಬೀಳುತ್ತಿರುತ್ತವೆ.

ಔ. ಫಲಧಾರಿ (ಫಲಹಾರಿ) : ಈ ಸಾಧುಗಳು ಕೇವಲ ಹಣ್ಣುಗಳನ್ನು ತಿಂದು ಜೀವಿಸುತ್ತಾರೆ. ಆಹಾರ ಸೇವನೆಯನ್ನು ನಿಯಂತ್ರಿಸುವುದು ಅವರ ಮುಖ್ಯ ಉದ್ದೇಶವಾಗಿರುತ್ತದೆ

ಅಂ. ದೂಧಧಾರಿ : ಈ ಸಾಧುಗಳು ಹಾಲು ಕುಡಿದು ಜೀವಿಸುತ್ತಾರೆ.

ಕ. ಅಲುನಾ : ಈ ಸಾಧುಗಳು ಊಟದಲ್ಲಿ ಉಪ್ಪು ಸೇವಿಸುವುದಿಲ್ಲ.
ಖ. ಸುಸ್ವರ : ಈ ಸಾಧುಗಳು ಭಿಕ್ಷೆ ಬೇಡಲು ತೆಂಗಿನ ಚಿಪ್ಪಿನ ಪಾತ್ರೆ ಅಥವಾ ಮಣ್ಣಿನ ಪಾತ್ರೆಯನ್ನು ಉಪಯೋಗಿಸುತ್ತಾರೆ ಹಾಗೂ ಭಿಕ್ಷೆ ನೀಡುವಾಗ ವಿಶಿಷ್ಟ ಪದಾರ್ಥವನ್ನು ಸುಡುತ್ತಾರೆ.
ಗ. ತ್ಯಾಗಿ : ಈ ಸಾಧುಗಳು ಭಿಕ್ಷೆ ಬೇಡುವುದಿಲ್ಲ. ಅವರಿಗೆ ಏನು ಸಿಗುತ್ತದೆಯೋ, ಅದರಿಂದಲೇ ಜೀವಿಸುತ್ತಾರೆ.
ಘ. ಅಬಧುತನೀ : ಇವರು ಮಹಿಳಾ ಸಂತರಾಗಿರುತ್ತಾರೆ. ಇವರು ಮಾಲೆಗಳನ್ನು ಹಾಕಿಕೊಳ್ಳುತ್ತಾರೆ ಹಾಗೂ ತ್ರಿಪುಂಡ್ರ ಹಚ್ಚುತ್ತಾರೆ ಹಾಗೂ ಭಿಕ್ಷೆ ಬೇಡಿ ಉದರ ನಿರ್ವಾಹ ಮಾಡುತ್ತಾರೆ.
ಚ. ಟಿಕರನಾಥ : ಈ ಸಾಧುಗಳು ಭೈರವನ ಪೂಜೆಯನ್ನು ಮಾಡುತ್ತಾರೆ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸೇವಿಸುತ್ತಾರೆ.
ಛ. ಭೋಪಾ : ಈ ಸಾಧುಗಳು ಭಿಕ್ಷೆ ಬೇಡುವಾಗ ಅವರ ಸೊಂಟ ಅಥವಾ ಕಾಲಿಗೆ ಘಂಟೆಯನ್ನು ಕಟ್ಟಿಕೊಳ್ಳುತ್ತಾರೆ, ಭೈರವನ ಸ್ತುತಿ ಮಾಡುತ್ತಾ ಕುಣಿಯುತ್ತಾರೆ ಮತ್ತು ಹಾಡುತ್ತಾರೆ.

ಇನ್ನು ಪರಮಹಂಸ, ದಶನಾಮೀ ನಗರ, ಡಂಗಾಲಿ, ಅಘೋರಿ, ಆಕಾಶಮುಖಿ, ಕರಲಿಂಗೀ, ಔಧಡ, ಗುಂಧಾರ, ಭೂಖರ, ಕುರುರ, ಘರಬಾರಿ ಸನ್ಯಾಸಿ, ತೂರ ಸನ್ಯಾಸಿ, ಮಾನಸ ಸನ್ಯಾಸಿ, ಅಂತ ಸನ್ಯಾಸಿ, ಕ್ಷೇತ್ರ ಸನ್ಯಾಸಿ, ದಶನಾಮಿ ಘಾಟ ಹಾಗೂ ಚಂದ್ರವತ್‌ ಈ ರೀತಿ ಸಾಧುಗಳ ಸಾಧನೆಯ ಪ್ರಕಾರಗಳಿವೆ.

೨. ಸಂಪ್ರದಾಯಕ್ಕನುಸಾರ ಹಣೆಗೆ ತಿಲಕ ಹಚ್ಚುವ ವಿವಿಧ ಪ್ರಕಾರಗಳು

ಸಾಧು-ಸಂತರಲ್ಲಿ ಶೃಂಗಾರಕ್ಕೆ ಒಂದು ವಿಶೇಷ ಮಹತ್ವವಿದೆ, ವಿಶೇಷವಾಗಿ ತಿಲಕ ಹಚ್ಚುವುದಕ್ಕೆ ! ವೈಷ್ಣವ ಸಂಪ್ರದಾಯದ ಸಾಧು-ಸಂತರು ಉದ್ದನೆಯ ತಿಲಕವನ್ನು ಹಚ್ಚುತ್ತಾರೆ. ಇದರಲ್ಲಿ ಆಖಾಡಾಗಳು ಮತ್ತು ಉಪ ಪಂಥಕ್ಕನುಸಾರ ಆಕಾರ ಅಥವಾ ಬಣ್ಣದಲ್ಲಿ ಬದಲಾವಣೆ ಇರುತ್ತದೆ. ವೈಷ್ಣವ ಸಂಪ್ರದಾಯದಲ್ಲಿ ತಿಲಕದ ಅನೇಕ ಪ್ರಕಾರಗಳಿವೆ. ಶೈವ ಪಂಥದಲ್ಲಿ ಅಡ್ಡ ತಿಲಕ ಹಚ್ಚುತ್ತಾರೆ. ಉದಾಸೀನದಲ್ಲಿ ಉದ್ದ ಹಾಗೂ ಅಡ್ಡ ಎರಡೂ ಪ್ರಕಾರದ ತಿಲಕಗಳನ್ನು ಹಚ್ಚುತ್ತಾರೆ. ಸಾಧು ಮತ್ತು ಸಂತರು ತಿಲಕವನ್ನು ಹಚ್ಚುವಾಗ ವಿಶೇಷ ಎಕಾಗ್ರತೆಯನ್ನು ತೋರಿಸುತ್ತಾರೆ. ಅವರು ಕೌಶಲ್ಯಪೂರ್ಣವಾಗಿ ತಿಲಕ ಹಚ್ಚಿಕೊಳ್ಳುತ್ತಾರೆ. ಅವರು ಪ್ರತಿದಿನ ಹಚ್ಚುವ ತಿಲಕದಲ್ಲಿ ಸ್ವಲ್ಪವೂ ವ್ಯತ್ಯಾಸವಿರುವುದಿಲ್ಲ. ಈ ಸಾಧು-ಸಂತರ ತಿಲಕದಿಂದ ಅವರ ಪರಿಚಯವಾಗುತ್ತದೆ. ಇದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಹಣೆಗೆ ತಿಲಕ ಹಚ್ಚುವ ಪರಂಪರೆ ಪ್ರಾಚೀನ ಕಾಲದಿಂದ ರೂಢಿಯಲ್ಲಿದೆ. ತಿಲಕ ಹಚ್ಚುವುದನ್ನು ಹಿಂದೂ ಸಂಸ್ಕೃತಿಯ ಗುರುತು ಎಂದು ಪರಿಗಣಿಸಲಾಗುತ್ತದೆ. ಈ ತಿಲಕ ಒಂದೆರಡು ಪ್ರಕಾರದ್ದಲ್ಲ, ಅವುಗಳಲ್ಲಿ ೮೦ ಕ್ಕಿಂತಲೂ ಹೆಚ್ಚು ಪ್ರಕಾರಗಳಿವೆ. ಅವುಗಳಲ್ಲಿ ವೈಷ್ಣವ ಸಾಧುಗಳು ಸುಮಾರು ೬೪ ಪ್ರಕಾರದ ತಿಲಕಗಳನ್ನು ಹಚ್ಚುತ್ತಾರೆ. ಹಿಂದೂ ಧರ್ಮದಲ್ಲಿ ಅನೇಕ ಸಂತರ ವಿಚಾರಶೈಲಿ, ಪಂಥ ಹಾಗೂ ಸಂಪ್ರದಾಯಗಳಿವೆ. ಅವರ ತಿಲಕ ಹಚ್ಚುವ ಪದ್ಧತಿಯೂ ಬೇರೆ ಬೇರೆಬೇರೆಯಾಗಿದೆ.

ಅ. ಶೈವ : ಶೈವರು ಹಣೆಗೆ ಚಂದನದ ರೇಖೆಯನ್ನು ಓರೆಯಾಗಿ ಹಚ್ಚುತ್ತಾರೆ ಹಾಗೂ ಅದರ ಮೇಲೆ ತ್ರಿಪುಂಡ್ರವನ್ನೂ ಹಚ್ಚುತ್ತಾರೆ. ಹೆಚ್ಚಿನ ಶೈವ ಸಂತರು ಈ ಪ್ರಕಾರದ ತಿಲಕವನ್ನು ಹಚ್ಚುತ್ತಾರೆ.

ಆ. ಶಾಕ್ತ : ಶಕ್ತಿಯನ್ನು ಪೂಜಿಸುವ ಋಷಿಗಳು ಸಿಂಧೂರದ ತಿಲಕವನ್ನು ಹಚ್ಚುತ್ತಾರೆ. ಕುಂಕುಮದಿಂದ ಸಾಧಕನ ಶಕ್ತಿ ಹೆಚ್ಚಾಗುತ್ತದೆ. ಅದು ಅವನ ಉಗ್ರರೂಪದ ಸಂಕೇತವಾಗಿದೆ. ಬಹಳಷ್ಟು ಭಕ್ತರು ಕಾಮಾಖ್ಯಾದೇವಿಯ ಸಿದ್ಧಕುಂಕುಮವನ್ನು ತಿಲಕ ಹಚ್ಚಲು ಉಪಯೋಗಿಸುತ್ತಾರೆ.

ಇ. ವೈಷ್ಣವ : ತಿಲಕ ಹಚ್ಚುವ ಅತೀ ಹೆಚ್ಚು ವಿಧಗಳು ವೈಷ್ಣವರಲ್ಲಿ ಕಂಡುಬರುತ್ತದೆ. ಇದರಲ್ಲಿ ಸುಮಾರು ೬೪ ಪ್ರಕಾರದ ತಿಲಕ ಗಳನ್ನು ಹಚ್ಚಲಾಗುತ್ತಿದ್ದು ಕೆಲವು ತಿಲಕಗಳು ಈ ಮುಂದಿನಂತಿವೆ.

ಇ ೧. ಲಾಲಶ್ರೀ ತಿಲಕ : ಈ ಪ್ರಕಾರದ ತಿಲಕದಲ್ಲಿ ಪಕ್ಕದಲ್ಲಿ ಚಂದನವನ್ನು ಹಚ್ಚಲಾಗುತ್ತದೆ ಹಾಗೂ ಮಧ್ಯಭಾಗದಲ್ಲಿ ಕುಂಕುಮ ಅಥವಾ ಅರಶಿನದಿಂದ ಒಂದು ರೇಖೆ ಎಳೆಯಲಾಗುತ್ತದೆ.
ಇ ೨. ವಿಷ್ಣುಸ್ವಾಮಿ ತಿಲಕ : ಈ ತಿಲಕದಲ್ಲಿ ಹುಬ್ಬುಗಳ ನಡುವೆ ಹಣೆಯ ಮೇಲೆ ೨ ಅಗಲ ರೇಖೆಗಳನ್ನು ಎಳೆಯಲಾಗುತ್ತದೆ.
ಇ ೩. ರಾಮಾನಂದ ತಿಲಕ : ಈ ತಿಲಕವನ್ನು ಹಚ್ಚಲು ಮೊದಲು ವಿಷ್ಣುಸ್ವಾಮಿ ತಿಲಕವನ್ನು ಹಚ್ಚಲಾಗುತ್ತದೆ. ಅನಂತರ ಮಧ್ಯಭಾಗದಲ್ಲಿ ಕುಂಕುಮ ಹಚ್ಚಿ ಒಂದು ನೇರವಾದ ರೇಖೆಯನ್ನು ಎಳೆಯಲಾಗುತ್ತದೆ.
ಇ ೪. ಶ್ಯಾಮಶ್ರೀ ತಿಲಕ : ಈ ತಿಲಕವನ್ನು ಭಗವಾನ ಶ್ರೀಕೃಷ್ಣನ ಅನುಯಾಯಿಗಳು ಹಚ್ಚುತ್ತಾರೆ. ಈ ತಿಲಕ ಹಚ್ಚಲು ಮೊದಲು ಗೋಪಿಚಂದನವನ್ನು ಹಚ್ಚಲಾಗುತ್ತದೆ ಹಾಗೂ ಮಧ್ಯಭಾಗದಲ್ಲಿ ಒಂದು ದಪ್ಪ ಕಪ್ಪು ರೇಖೆಯನ್ನು ಎಳೆಯಲಾಗುತ್ತದೆ.
ಇ ೫. ಇತರ ತಿಲಕಗಳು : ಇದರ ಹೊರತು ಇನ್ನಿತರ ಕೆಲವು ಪ್ರಮುಖ ತಿಲಕಗಳಿವೆ, ಅವುಗಳನ್ನು ಸಾಧು ಸಂತರು ಹಚ್ಚುತ್ತಾರೆ. ಅನೇಕ ಸಾಧು ಸಂತರು ಭಸ್ಮದ ತಿಲಕವನ್ನು ಹಚ್ಚುತ್ತಾರೆ.

೩. ಸಾಧು ಸಂತರ ಉಡುಗೆತೊಡುಗೆ

ಅ. ಭಾರತೀಯ ಹಿಂದೂ ಸಾಧುಗಳ ಒಂದು ವಿಶೇಷ ಉಡುಗೆ ಇದ್ದು, ಅದು ಪ್ರತಿಯೊಬ್ಬ ಸಾಧುವಿಗೆ ಬೇರೆಯೆ ಆಗಿರುತ್ತದೆ. ಕೆಲವು ಸಾಧುಗಳು ಹಣೆಯ ಮೇಲೆ ಕೇವಲ ಭಸ್ಮ ಹಚ್ಚುತ್ತಾರೆ, ಕೆಲವರು ಕಿವಿಗಳಲ್ಲಿ ಆಭರಣ ಧರಿಸುತ್ತಾರೆ, ಕೆಲವರು ಮಾಲೆಗಳನ್ನು ಹಾಕುತ್ತಾರೆ ಹಾಗೂ ಕೆಲವರು ಅಘೋರಿಯಗಳಂತೆ ಸಂಪೂರ್ಣ ನಗ್ನರಾಗಿರುತ್ತಾರೆ ಮತ್ತು ಈ ಎಲ್ಲ ವಿಷಯಗಳಿಂದ ದೂರವಿರುತ್ತಾರೆ.

ಆ. ಜಪಮಾಲೆ : ಸಾಧು ಸಮಾಜದಲ್ಲಿಯೂ ಜಪಮಾಲೆಗೆ ವಿಶೇಷ ಮಹತ್ವವಿದೆ. ವೈಷ್ಣವ ಪಂಥದ ಬಹಳಷ್ಟು ಜನರು ತುಳಸಿಯ ಮಾಲೆಯನ್ನು ಹಾಕುತ್ತಾರೆ, ಶೈವರು ರುದ್ರಾಕ್ಷಿಯ ಮಾಲೆ ಧರಿಸುತ್ತಾರೆ. ಉದಾಸೀನ ಆಖಾಡಾದಲ್ಲಿ ಯಾವುದು ಕಡ್ಡಾಯವಿಲ್ಲ. ಈ ಮಾಲೆಗಳು ಆಖಾಡಾ ಅಥವಾ ಸಂಪ್ರದಾಯಗಳ ಪರಂಪರೆಗನುಸಾರ ಬದಲಾಗುತ್ತವೆ.

ಇ. ಜಟೆ : ನಾಗಾ ಸಾಧುಗಳು ಉದ್ದ ಜಟೆಗಳನ್ನಿಡುತ್ತಾರೆ, ದಪ್ಪವಾದ ಜಟೆಗಳ ಬಗ್ಗೆ ಬಹಳ ಕಾಳಜಿ ವಹಿಸಲಾಗುತ್ತದೆ. ಕೆಲವರು ಅದರ ಮೇಲೆ ರುದ್ರಾಕ್ಷಿ ಮಾಲೆಯನ್ನು ಹಾಕುತ್ತಾರೆ, ಕೆಲವರು ಹೂವಿನ ಹಾರ ಹಾಕುತ್ತಾರೆ. ಇದರಿಂದ ಅವರು ಆಕರ್ಷಕವಾಗಿ ಕಾಣಿಸುತ್ತಾರೆ.

ಈ. ಕಮಂಡಲ, ಇಕ್ಕಳ ಮತ್ತು ತ್ರಿಶೂಲ : ಕೆಲವು ಸಾಧು ಸಂತರು ಕಮಂಡಲವನ್ನು ಇಟ್ಟುಕೊಳ್ಳುತ್ತಾರೆ, ಕೆಲವರು ತ್ರಿಶೂಲ ಅಥವಾ ಇಕ್ಕಳವನ್ನು ಇಟ್ಟುಕೊಳ್ಳುತ್ತಾರೆ. ಕೆಲವರು ಧಾತುಗಳಿಂದ ತಯಾರಿಸಿದ ಕಮಂಡಲವನ್ನು ಉಪಯೋಗಿಸುತ್ತಾರೆ, ಕೆಲವರು ಕುಂಬಳಕಾಯಿಯಿಂದ ತಯಾರಿಸಿದ ಕಮಂಡಲವನ್ನು ಉಪಯೋಗಿಸುತ್ತಾರೆ. ನಾಗಾ ಸಾಧುಗಳನ್ನು ಯೋಧರೆಂದು ತಿಳಿಯಲಾಗುತ್ತದೆ. ಅನೇಕ ಸಾಧುಗಳು ಖಡ್ಗ, ತ್ರಿಶೂಲ ಹಾಗೂ ಪರಶು ಈ ಶಸ್ತ್ರಗಳನ್ನಿಟ್ಟುಕೊಳ್ಳುತ್ತಾರೆ.

ಉ. ಭಸ್ಮ : ಭಗವಾನ ಶಿವನು ಭಸ್ಮವನ್ನು ಉಪಯೋಗಿಸುತ್ತಾನೆ. ಶೈವ ಸಂಪ್ರದಾಯದ ನಾಗಾ ಸಾಧುಗಳಿಗೆ ತಮ್ಮ ದೇವತೆಗನುಸಾರ ಭಸ್ಮ ಹಚ್ಚುವುದು ಇಷ್ಟವಾಗುತ್ತದೆ. ಪ್ರತಿದಿನ ಸ್ನಾನ ಮಾಡಿದ ನಂತರ ಅವರು ತಮ್ಮ ಮೈಗೆ ಭಸ್ಮ ಹಚ್ಚಿಕೊಳ್ಳುತ್ತಾರೆ. ಉದಾಸೀನ ಆಖಾಡಾದಲ್ಲಿಯೂ ಅನೇಕ ಸಾಧುಗಳು ಮೈಗೆ ಭಸ್ಮ ಹಚ್ಚುತ್ತಾರೆ.

ಲೇಖಕರು : ಶ್ರೀ. ನಿಖಿಲೇಶ ಮಿಶ್ರಾ, ಉತ್ತರಪ್ರದೇಶ. (ಆಧಾರ : ‘ಖಬರೋಂಕಾ ಆಕಲನ’ ಬ್ಲಾಗ್)