ಭಾರತ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಪಾಕಿಸ್ತಾನ! – ಟರ್ಕಿಯೆ ಪಿತೂರಿ ಬಯಲು!

  • ‘ಡಿಸ್ಇನ್ಫೋ ಲ್ಯಾಬ್’ ಎಂಬ ಅಂತರರಾಷ್ಟ್ರೀಯ ಸಂಸ್ಥೆಯ ವಿಸ್ತೃತ ವರದಿಯ ನಿಷ್ಕರ್ಷ

  • ಇಸ್ರೇಲ್‌ನಂತೆ ಭಾರತದ ಮೇಲೆ ಬಹಿಷ್ಕಾರಕ್ಕೆ ಉತ್ತೇಜನ ನೀಡುವ ಪ್ರಯತ್ನ

ನವದೆಹಲಿ – ಪಾಕಿಸ್ತಾನ ಮತ್ತು ಟರ್ಕಿಯೆ ಮೈತ್ರಿಯ ಮೂಲಕ ಭಾರತವನ್ನು ರಾಜತಾಂತ್ರಿಕ, ಮಾಧ್ಯಮ ಮತ್ತು ಸೈದ್ಧಾಂತಿಕ ಮಟ್ಟದಲ್ಲಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಸಾಮಾನ್ಯ ಇಸ್ಲಾಮಿಕ್ ಸಿದ್ಧಾಂತ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳನ್ನು ಆಧರಿಸಿದ ಈ ಮೈತ್ರಿಯು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ‘ಆಪರೇಷನ್ ಸಿಂದೂರ್’ ನಂತರ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ‘ಡಿಸ್ಇನ್ಫೋ ಲ್ಯಾಬ್’ ಎಂಬ ಅಂತರರಾಷ್ಟ್ರೀಯ ಸಂಸ್ಥೆ ಪ್ರಕಟಿಸಿದ ವರದಿಯಿಂದ ಈ ಮಾಹಿತಿ ಹೊರಬಿದ್ದಿದೆ.

ಈ ವರದಿಯು ಟರ್ಕಿಯೆ ಮತ್ತು ಪಾಕಿಸ್ತಾನದ ನಡುವಿನ ಕಾರ್ಯತಂತ್ರದ ಸಹಭಾಗಿತ್ವವು ಭಾರತದ ಜಾಗತಿಕ ಪ್ರತಿಷ್ಠೆಯನ್ನು ಹಾಳುಮಾಡಲು ಮತ್ತು ಭಾರತದ ನೀತಿಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಲು ಸರಕಾರ, ಮಾಧ್ಯಮಗಳು, ಎನ್‌ಜಿಒಗಳು ಮತ್ತು ಕಾನೂನು ಸಾಧನಗಳನ್ನು ಬಳಸಿಕೊಂಡು ರೂಪಿಸಲಾದ ಸುಸಂಘಟಿತ ಅಭಿಯಾನ ಎಂದು ಸ್ಪಷ್ಟಪಡಿಸುತ್ತದೆ.

ವರದಿಯ ಪ್ರಮುಖ ಆವಿಷ್ಕಾರಗಳು!

೧. ಉನ್ನತ ಮಟ್ಟದ ಚರ್ಚೆಗಳು: ಪಹಲ್ಗಾಮ್ ದಾಳಿಯ ನಂತರ ಒಂದು ತಿಂಗಳೊಳಗೆ ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಅವರು ಟರ್ಕಿಯೆ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

೨. ಮಾಧ್ಯಮ ಸಹಕಾರ: ಟರ್ಕಿಯೆ ಸರಕಾರಿ ಮಾಧ್ಯಮಗಳಾದ ‘ಟಿ.ಆರ್.ಟಿ. ವರ್ಲ್ಡ್’ ಮತ್ತು ‘ಅನಡೋಲು ಏಜೆನ್ಸಿ’ ಭಾರತ ವಿರೋಧಿ ಪ್ರಚಾರದಲ್ಲಿ ಮುಂಚೂಣಿಯಲ್ಲಿವೆ. ವಿಶೇಷವಾಗಿ, ‘ಟಿ.ಆರ್.ಟಿ. ವರ್ಲ್ಡ್’ ೫೦ ಕ್ಕೂ ಹೆಚ್ಚು ಪಾಕಿಸ್ತಾನಿ ಪ್ರಜೆಗಳನ್ನು ನೇಮಿಸಿಕೊಂಡಿದೆ, ಇದರಿಂದಾಗಿ ಪಾಕಿಸ್ತಾನದ ಪರ ವರದಿಗಳು ನಿರಂತರವಾಗಿ ಪ್ರಸಾರವಾಗುತ್ತವೆ.

೩. ಎನ್‌ಜಿಒಗಳ ಜಾಲ: ಅಧ್ಯಕ್ಷ ಎರ್ಡೋಗನ್ ಕುಟುಂಬಕ್ಕೆ ಸಂಬಂಧಿಸಿದ ‘ಟರ್ಕಿಯೆ ಯುವ ಫೌಂಡೇಶನ್’ ಮತ್ತು ‘ಇನ್ಸಾನಿ ಯಾರ್ದಿಮ್ ವಕ್ಫಿ’ ನಂತಹ ಟರ್ಕಿಶ್ ಸಂಸ್ಥೆಗಳು ಭಾರತ ವಿರೋಧಿ ನಿಲುವನ್ನು ಬಲಪಡಿಸಿವೆ. ಈ ಸಂಸ್ಥೆಗಳಿಗೆ ಕೆಲವು ಜಿಹಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆ ಎಂದು ಸಹ ಕಾಲಕಾಲಕ್ಕೆ ಶಂಕಿಸಲಾಗಿದೆ.

೪. ದುಷ್ಪ್ರಚಾರ ಅಭಿಯಾನಗಳು: ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ. ಇಸ್ರೇಲ್‌ಗೆ ಹೋಲಿಸಿ ಭಾರತದ ವಿರುದ್ಧ ಬಹಿಷ್ಕಾರ, ಹೂಡಿಕೆ ಹಿಂತೆಗೆದುಕೊಳ್ಳುವಿಕೆ ಮತ್ತು ನಿರ್ಬಂಧಗಳ (ಬಾಯ್ಕಾಟ್, ಡಿವೆಸ್ಟ್‌ಮೆಂಟ್ ಅಂಡ್ ಸ್ಯಾಂಕ್ಷನ್ಸ್) ಚಳುವಳಿಗೆ ಉತ್ತೇಜನ ನೀಡಲಾಗುತ್ತಿದೆ. ಸರಾಯೆವೊದಲ್ಲಿ ನಡೆದ ‘ರಸೆಲ್ ಟ್ರಿಬ್ಯೂನಲ್ ಆನ್ ಕಾಶ್ಮೀರ’ ಇದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ.

೫. ಕಾನೂನಿನ ಮೂಲಕ ಪಿತೂರಿ: ಬ್ರಿಟನ್ ಮೂಲದ ಕಾನೂನು ಸಂಸ್ಥೆ ಸ್ಟೋಕ್ ವೈಟ್, ಟರ್ಕಿಯೆ ಪ್ರಜೆ ಹಾಕಾನ್ ಕ್ಯಾಮುಜ್ ನೇತೃತ್ವದಲ್ಲಿ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಭಾರತೀಯ ಅಧಿಕಾರಿಗಳ ಮೇಲೆ ಆರೋಪಗಳನ್ನು ಮಾಡುತ್ತಿದೆ. ಈ ಪ್ರಯತ್ನಗಳು ಪಾಕಿಸ್ತಾನದ ‘ಲೀಗಲ್ ಫೋರಂ ಫಾರ್ ಆಪ್ರೆಸ್ಡ್ ವಾಯ್ಸಸ್ ಆಫ್ ಕಾಶ್ಮೀರ್’ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ನಡೆಯುತ್ತಿವೆ.

೬. ಸಾಮಾಜಿಕ ಮಾಧ್ಯಮಗಳ ಮೂಲಕ ಪಿತೂರಿಗಳು: ಅರಬ್ ರಾಜಮನೆತನಕ್ಕೆ ಸೇರಿದವರು ಎಂದು ತೋರಿಸಿಕೊಳ್ಳುವ ನಕಲಿ ‘ಸಾಮಾಜಿಕ ಮಾಧ್ಯಮ’ ಖಾತೆಗಳನ್ನು ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲು ಬಳಸಲಾಗಿದೆ.

ಸಂಪಾದಕೀಯ ನಿಲುವು

ಭಾರತ ಈಗ ಟರ್ಕಿಯೆ ಮೇಲೆ ವಾಣಿಜ್ಯ ನಿರ್ಬಂಧಗಳನ್ನು ಹೇರಲು ಮುಂದಾಗಬೇಕು!