ವಾಷಿಂಗ್ಟನ್ (ಅಮೇರಿಕ) – ನಾವು ಕೇವಲ ಉದ್ವಿಗ್ನತೆ ಕಡಿಮೆ ಮಾಡುವಂತೆ ಪ್ರೋತ್ಸಾಹಿಸಬಹುದು; ಆದರೆ ನಾವು ಅಂತಹ ಯುದ್ಧದಲ್ಲಿ ಸಿಲುಕುವುದಿಲ್ಲ. ಮುಖ್ಯವಾಗಿ ಯಾವುದು ನಮ್ಮ ಕೆಲಸವಲ್ಲವೊ ಅಂತಹ ವಿಷಯಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಅಮೇರಿಕಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅಮೇರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಬಗ್ಗೆ ಅಮೇರಿಕದ ನಿಲುವನ್ನು ಸ್ಪಷ್ಟಪಡಿಸಿದರು.
ನಾವು ಭಾರತ ಅಥವಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ!
ವ್ಯಾನ್ಸ್ ಅವರು ಮಾತು ಮುಂದುವರೆಸಿ, ನಾವು ಭಾರತ ಮತ್ತು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ; ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸುತ್ತೇವೆ. ಈ ಪ್ರಾದೇಶಿಕ ಯುದ್ಧವು ಅಣ್ವಸ್ತ್ರ ಸಂಘರ್ಷವಾಗಿ ಬದಲಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಒಂದು ವೇಳೆ ಹಾಗಾದಲ್ಲಿ, ಅದು ವಿನಾಶಕಾರಿಯಾಗಿರುತ್ತದೆ; ಆದರೆ ಅಂತಹದ್ದೇನಾದರೂ ಸಂಭವಿಸುವುದೆಂದು ಸದ್ಯ ನಮಗೆ ಅನಿಸುತ್ತಿಲ್ಲ ಎಂದರು.
ವ್ಯಾನ್ಸ್ ಅವರ ಹೇಳಿಕೆಗಿಂತ ಒಂದು ದಿನ ಮೊದಲು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಪ್ರತಿಕ್ರಿಯಿಸಿ, ನನ್ನ ನಿಲುವು ಸ್ಪಷ್ಟವಾಗಿದೆ, ನಾನು ಎರಡೂ ದೇಶಗಳೊಂದಿಗೆ ಸಂವಾದ ಮಾಡುತ್ತೇನೆ. ಈ ಸಮಸ್ಯೆಯನ್ನು ಉಭಯ ದೇಶಗಳೇ ಬಗೆಹರಿಸಿಕೊಳ್ಳಬೇಕು. ಈ ಎರಡು ದೇಶಗಳು ಪರಸ್ಪರ ವಿರುದ್ಧವಾಗಿವೆ; ಆದರೆ ಅವು ಈಗ ಈ ಸಂಘರ್ಷವನ್ನು ನಿಲ್ಲಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಯಾವುದೇ ಸಹಾಯ ಬೇಕಾಗಿದ್ದರೆ, ನಾನು ಅದಕ್ಕಾಗಿ ಲಭ್ಯವಿರುತ್ತೇನೆ ಎಂದಿದ್ದರು.
ಪಾಕಿಸ್ತಾನವು ‘ಬಲಿಪಶು’ ಪಾತ್ರವನ್ನು ವಹಿಸಬಾರದು ! – ಅಮೇರಿಕದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲೆ
ಭಯೋತ್ಪಾದಕರು ದಾಳಿ ಮಾಡಿ ಮುಗ್ಧ ನಾಗರಿಕರನ್ನು ಬಲಿ ತೆಗೆದುಕೊಂಡಿದ್ದಾರೆ. ಆ ದಾಳಿಯ ನಂತರ ಪ್ರತಿಕ್ರಿಯಿಸುವ ಸಂಪೂರ್ಣ ಹಕ್ಕು ಭಾರತಕ್ಕಿದೆ. ಪಾಕಿಸ್ತಾನವು ಈಗ ‘ನಾವು ದಾಳಿಗೊಳಗಾದ ಬಲಿಪಶುಗಳು’ ಎಂಬ ಪಾತ್ರ ವಹಿಸಬಾರದು, ಸುಮ್ಮನೆ ಅಳಬಾರದು. ಭಯೋತ್ಪಾದಕ ಕೃತ್ಯಗಳಿಗೆ ನೀವು ಬೆಂಬಲ ನೀಡಿದ್ದೀರಿ; ಆದ್ದರಿಂದ ನಿಮ್ಮನ್ನು ಯಾರೂ ಕ್ಷಮಿಸುವುದಿಲ್ಲ. ಭಾರತ ಮಾಡಿದ್ದು ಸರಿ ಎಂದು ಅಮೇರಿಕದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲೆ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.