ಪ್ರಭು ಶ್ರೀರಾಮನ ಬುದ್ಧಿ ಕೌಶಲ್ಯ ಮತ್ತು ರಾಜ್ಯವಾಳಲು ಅವನು ನೀಡಿದ ಉಪದೇಶ

‘ವಾಲ್ಮೀಕಿ ರಾಮಾಯಣ’ದಲ್ಲಿ ಪ್ರಭು ಶ್ರೀರಾಮನ ಬುದ್ಧಿವಂತಿಕೆಗೆ ಸಾಕ್ಷಿಯಾಗುವಂತಹ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಇಷ್ಟೇ ಅಲ್ಲದೇ, ಅವನ ಚರಿತ್ರೆಯಿಂದ ಸಾಕಷ್ಟು ಪಾಠವನ್ನು ಕಲಿಯಬಹುದು. ಪ್ರಭು ಶ್ರೀರಾಮನಲ್ಲಿರುವ ೧೬ ಗುಣಗಳನ್ನು ವಾಲ್ಮೀಕಿ ಋಷಿಗಳು ವಿವರಿಸಿದ್ದಾರೆ. ನಂತರ ನಾರದರು ೭೦ ಕ್ಕೂ ಹೆಚ್ಚು ಗುಣಗಳನ್ನು ವರ್ಣಿಸಿದ್ದಾರೆ; ಅವುಗಳಲ್ಲಿ ಪ್ರತಿಯೊಂದು ಗುಣಕ್ಕೂ ಒಂದು ಜನ್ಮ ಸಾಕಾಗಲಾರದು. ಪ್ರಸಿದ್ಧ ವ್ಯಕ್ತಿಗಳಲ್ಲಿ ಈ ಗುಣಗಳಲ್ಲಿನ ಒಂದೆರಡು ಗುಣಗಳು ಕಂಡುಬರುತ್ತವೆ. ಆದಾಗ್ಯೂ ಎಲ್ಲಾ ಗುಣಗಳನ್ನು ಹೊಂದಿರುವ ಬೇರಿನ್ನಾರೂ ಸಿಗಲಾರರು. ಅವನು ಭರತನಿಗೆ ಮಾಡಿದ ಉಪದೇಶವನ್ನು ಓದಿದರೆ, ರಾಜ್ಯವನ್ನು ಹೇಗೆ ನಡೆಸಬೇಕು ? ಎಂಬುದರ ಅನೇಕ ವಿಷಯಗಳು ಗಮನಕ್ಕೆ ಬರುತ್ತವೆ. ರಾಮಾಯಣದಲ್ಲಿ ಇಂತಹ ಸಲಹೆಗಳ ಅನೇಕ ಕಥೆಗಳು ಕಂಡುಬರುತ್ತವೆ. ನಾವು ಅದರಿಂದ ಎಷ್ಟು ತೆಗೆದುಕೊಳ್ಳುತ್ತಿದ್ದೇವೆ, ಇದೊಂದೇ ಪ್ರಶ್ನೆಯಿದೆ.

೧. ಶ್ರೀರಾಮನಿಂದ ಭರತೋಪದೇಶ

ಕೈಕೇಯಿಯ (ಅಸೂಯೆಯಿಂದ) ರಾಜ್ಯಾಭಿಷೇಕ ರದ್ದಾಗುತ್ತದೆ. ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಇವರು ವನವಾಸಕ್ಕೆ ಹೋಗುತ್ತಾರೆ. ದಶರಥನು ನಿಧನನಾಗುತ್ತಾನೆ. ಭರತನು ಅಯೋಧ್ಯೆಗೆ ಬಂದ ಬಳಿಕ, ಎಲ್ಲಾ ವಿಷಯ ತಿಳಿದು ಕೋಪಗೊಳ್ಳುತ್ತಾನೆ ಮತ್ತು ರಾಜ್ಯವನ್ನು ನಿರಾಕರಿಸುತ್ತಾನೆ. ಪ್ರಭು ಶ್ರೀರಾಮನನ್ನು ಮರಳಿ ಕರೆತರಲು ಅವನು ಚತುರಂಗ ಸೈನ್ಯ, ತಾಯಿ, ಶ್ರೇಷ್ಟುರೊಂದಿಗೆ ಮತ್ತು ಹಿರಿಯರೊಂದಿಗೆ ಅರಣ್ಯಕ್ಕೆ ಹೋಗುತ್ತಾನೆ. ಅಲ್ಲಿ ಶ್ರೀರಾಮನನ್ನು ಹುಡುಕಿ, ದುಃಖದಿಂದ ಭೇಟಿಯಾಗಿ ಅಯೋಧ್ಯೆಗೆ ಬರುವಂತೆ ಒತ್ತಾಯಿಸುತ್ತಾನೆ. ಆಗ ಪ್ರಭು ಶ್ರೀರಾಮನು ಅವನಿಗೆ ಮಾಡಿದ ಉಪದೇಶವನ್ನು ನೋಡಿದರೆ, ಅವನ ಬುದ್ಧಿಕೌಶಲ್ಯ ತಿಳಿಯುತ್ತದೆ. ಅದೇ ರೀತಿ, ರಾಜ್ಯಭಾರ ಮಾಡುವವನು ಹೇಗಿರಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾನೆ.

೧ ಅ. ಪ್ರಭು ಶ್ರೀರಾಮನು ಹೇಳಿದ ಮಂತ್ರಿಗಳ ಲಕ್ಷಣ : ಭರತನಿಗೆ ಶ್ರೀರಾಮನು ‘ತಾತ್’ (ತಂದೆ) ಎಂದು ಸಂಬೋಧಿಸಿ ಕೇಳುತ್ತಾನೆ,

ಕಚ್ಚಿದಾತ್ಮಸಮಾಃ ಶೂರಾಃ ಶ್ರುತವಂತೊ ಜಿತೇಂದ್ರಿಯಾಃ |

ಕುಲೀನಾಶ್ಚೇಂಗಿತಜ್ಞಾಶ್ಚ ಕೃತಾಸ್ತೇ ತಾತ ಮಂತ್ರಿಣಃ | |

– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೧೦೦, ಶ್ಲೋಕ ೧೫

ಅರ್ಥ : ತಾತ್, ನೀನು ನಿನ್ನಂತಹ ಶೂರ, ಶಾಸ್ತ್ರಜ್ಞ, ಜಿತೇಂದ್ರಿಯ, ಕುಲೀನ ಮತ್ತು ಬಾಹ್ಯ ಚಲನವಲನಗಳಿಂದ ಮನಸ್ಸಿನ ಅಂತರಂಗದ ಆಲೋಚನೆಗಳನ್ನು ತಿಳಿದುಕೊಳ್ಳುವ ಯೋಗ್ಯ ವ್ಯಕ್ತಿಗಳನ್ನೇ ಮಂತ್ರಿಗಳನ್ನಾಗಿ ನೇಮಿಸಿದ್ದೀಯಲ್ಲ ?

ಮಂತ್ರೊ ವಿಜಯಮೂಲಂ ಹಿ ರಾಜ್ಞಾಂ ಭವತಿ ರಾಘವ | ಸುಸಂವೃತೋ ಮಂತ್ರಿಧುರೈರಮಾತ್ಯೈಃ ಶಾಸ್ರ್ತಕೋವಿದೈಃ | |

– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೧೦೦, ಶ್ಲೋಕ ೧೬

ಅರ್ಥ : ಹೇ ರಾಘವಾ (ಭರತಾ), ಉತ್ತಮ ಸಲಹೆಗಾರರು (ಮಂತ್ರಿಗಳು) ಇವರೇ ರಾಜರ ವಿಜಯಕ್ಕೆ ಮೂಲ ಕಾರಣವಾಗಿರುತ್ತಾರೆ. ಅದೂ ನೀತಿಶಾಸ್ತ್ರ ನಿಪುಣ ಮಂತ್ರಿ ಶಿರೋಮಣಿ ಅಮಾತ್ಯರು ಅದನ್ನು ಸಂಪೂರ್ಣವಾಗಿ ರಹಸ್ಯವಾಗಿಟ್ಟಾಗ ಮಾತ್ರ ಅದು ಯಶಸ್ವಿಯಾಗುತ್ತದೆ.

ಭರತನಿಗೆ ‘ಮಂತ್ರಿಗಳು ಹೇಗಿರಬೇಕು ?’ ಎಂದು ಸೂಚಿಸು ವಾಗ ಪ್ರಭು ಶ್ರೀರಾಮನು ಮಂತ್ರಿಗಳ ಲಕ್ಷಣಗಳನ್ನು ಹೇಳಿದ್ದಾನೆ. ಮುಂದೆ ಶ್ರೀರಾಮನು ಭರತನಿಗೆ ಕೇಳುತ್ತಾನೆ, ‘ನೀನು ಅಸಮಯದಲ್ಲಿ ನಿದ್ರೆ ಮಾಡುತ್ತಿಲ್ಲ ತಾನೇ ? ಹೇ ರಘುನಂದನ, ನಿನ್ನ ಸಮಾಲೋಚನೆ ಎರಡು ಅಥವಾ ನಾಲ್ಕು ಕಿವಿಗಳಿಗೆ ಮಾತ್ರ ಸೀಮಿತವಾಗಿದೆಯಲ್ಲವೇ ? ಅದು ಷಟ್ಕರ್ಣಿ (ಅನೇಕ ಕಿವಿಗಳಿಗೆ ಅರ್ಥಾತ್‌ ಅನೇಕ ಜನರ ವರೆಗೆ ತಲುಪುವುದು) ಆಗುತ್ತಿಲ್ಲ ತಾನೇ ? ಏಕೆಂದರೆ ಹಾಗೇನಾದರೂ ಆದರೆ ನಿನ್ನ ರಹಸ್ಯ ಶತ್ರುಗಳಿಗೆ ತಿಳಿಯಬಹುದು.

ಬಹಳಷ್ಟು ಸಲ ಭಾರತದ ರಾಜಕಾರಣಿಗಳು ಮತ್ತು ಪತ್ರಕರ್ತರಿಗೆ ಈ ವಿಷಯದ ಅರಿವು ಇರುವುದಿಲ್ಲ. ಅವರು ಬಹಿರಂಗವಾಗಿ ಭಾರತೀಯ ಸೇನೆಯ ತಂತ್ರಗಳು, ಯುದ್ಧ ಸಿದ್ಧತೆ ಇತ್ಯಾದಿಗಳನ್ನು ತನ್ನಿಂತಾನೇ ಶತ್ರುಗಳಿಗೆ ತಲುಪುವಂತೆ ಜಗಜ್ಜಾಹೀರು ಮಾಡುತ್ತಾರೆ, (ನೆನಪಿಸಿಕೊಳ್ಳಿರಿ, ೨೦೦೮ ರ ನವೆಂಬರ್‌ ೨೬ ರ ಜಿಹಾದಿ ದಾಳಿಯ ಸಮಯದಲ್ಲಿ ಭಾರತೀಯ ಕಮಾಂಡೋಗಳು ಹೆಲಿಕಾಪ್ಟರ್‌ನಿಂದ ಇಳಿಯುವುದನ್ನು ಸುದ್ದಿ ವಾಹಿನಿಗಳು ತೋರಿಸಿದ ಕಾರಣ ಪಾಕಿಸ್ತಾನದ ಭಯೋತ್ಪಾದಕರು ಅದನ್ನು ನೋಡಿ ದಾಳಿಕೋರ ಜಿಹಾದಿಗಳಿಗೆ ಆ ಮಾಹಿತಿ ನೀಡಿದ್ದರು.) ‘ಶತ್ರುವನ್ನು ಯಾವಾಗಲೂ ಮೋಸಗೊಳಿಸಬೇಕು ಮತ್ತು  ಅಜಾಗರೂಕರನ್ನಾಗಿರಿಸಬೇಕು’ ಎನ್ನುವುದನ್ನು ನಮಗೆ ಶಾಲೆಯಿಂದಲೇ ಕಲಿಸಬೇಕು ! ಆದರೆ ‘ಶತ್ರು ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು’ ಎಂದು ಕಲಿಸಲಾಗುತ್ತದೆ. ರಾಮಾಯಣದ ಉದಾಹರಣೆಗಳನ್ನು ಮಕ್ಕಳಿಗೆ ಕಲಿಸಿದರೆ, ಶಿಕ್ಷಣದ ‘ಕೇಸರೀಕರಣ’ ಎಂದು ಕೂಗಾಟ ಶುರುವಾಗುತ್ತದೆ.

೧ ಆ. ಶ್ರೀರಾಮನು ಭರತನಿಗೆ ರಾಜಕಾರಣ ಮತ್ತು ಸೈನ್ಯದ ಬಗ್ಗೆ ಕೇಳಿದ ಅಂಶಗಳು : ರಾಜಕಾರಣಕ್ಕೆ ಸಂಬಂಧಿತ ಅನೇಕ ಪ್ರಶ್ನೆಗಳನ್ನು ಶ್ರೀರಾಮನು ಭರತನಿಗೆ ಕೇಳಿದ್ದಾನೆ. ಇದರಲ್ಲಿ ವಿಶೇಷವೇನೆಂದರೆ, ಸೂಕ್ಷ್ಮವಾಗಿ ನೋಡಿದರೆ ಈ ಎಲ್ಲಾ ಪ್ರಶ್ನೆಗಳಲ್ಲಿಯೇ ಉತ್ತರ ಅಡಗಿದೆ.

ಕಚ್ಚಿತ್‌ ಸಹಸ್ರೈರ್ಮೂರ್ಖಾಣಾಮೇಕಮಿಚ್ಛಸಿ ಪಂಡಿತಮ್‌ |

ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಃಶ್ರೇಯಸಂ ಮಹತ್‌ | |

– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೧೦೦, ಶ್ಲೋಕ ೨೨

ಅರ್ಥ : ನೀವು ಸಾವಿರಾರು ಮೂರ್ಖರ ಬದಲಿಗೆ ಒಬ್ಬ ಪಂಡಿತನನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ಬಯಸುತ್ತೀರಲ್ಲವೇ ? ಏಕೆಂದರೆ ವಿದ್ವಾಂಸ ಪುರುಷನೇ ಆರ್ಥಿಕ ಸಂಕಟದ  ಸಮಯದಲ್ಲಿ ಕಲ್ಯಾಣವನ್ನು ಮಾಡಬಹುದು.

ಸಹಸ್ರಾಣ್ಯಪಿ ಮೂರ್ಖಾಣಾಂ ಯದ್ಯುಪಾಸ್ಯತೇ ಮಹೀಪತಿಃ |

ಅಥವಾಪ್ಯಯುತಾನ್ಯೇವ ನಾಸ್ತಿ ತೇಷು ಸಹಾಯತಾ | |

– ವಾಲ್ಮೀಕಿ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೧೦೦, ಶ್ಲೋಕ ೨೩

ಅರ್ಥ : ರಾಜನು ಸಾವಿರ ಅಥವಾ ೧೦ ಸಾವಿರ ಮೂರ್ಖರನ್ನು ತನ್ನ ಬಳಿ ಇಟ್ಟುಕೊಂಡರೂ, ಪ್ರಸಂಗ ಬಂದಾಗ ಅವರಿಂದ ಯಾವುದೇ ಸಹಾಯ ಸಿಗುವುದಿಲ್ಲ.

ಮಹಾಭಾರತದಲ್ಲಿ ವಿದ್ಯೆಯ ೩ ಜನ ಶತ್ರುಗಳು ಯಾರು ಎಂಬುದರ ಬಗ್ಗೆ ಒಂದು ಸುಂದರ ವಚನವಿದೆ. ‘ಅಶುಶ್ರೂಷಾ ತ್ವರಾ ಶ್ಲಾಘ್ಯಾ ವಿದ್ಯಾಯಾಃ ಶತೃವಸ್ತ್ರಯಃ |’ (ಮಹಾಭಾರತ, ಪರ್ವ5, ಅಧ್ಯಾಯ ೪೦, ಶ್ಲೋಕ ೪), ಅಂದರೆ ‘ಗುರುಗಳ ಸೇವೆ ಮಾಡದಿರುವುದು, ಆತುರ ಪಡುವುದು (ಗಡಿಬಿಡಿ ಮಾಡುವುದು) ಮತ್ತು ಆತ್ಮಪ್ರಶಂಸೆ ಮಾಡಿಕೊಳ್ಳುವುದು’ ಇವು ವಿದ್ಯೆಯ ೩ ಶತ್ರುಗಳಾಗಿವೆ.

ಮುಂದೆ ಶ್ರೀರಾಮನು ಕೇಳುತ್ತಾನೆ, ‘ನೀನು ಶೂರವೀರ, ಬುದ್ಧಿವಂತ, ಕುಲೀನ, ರಣಕರ್ಮದಕ್ಷ ಮತ್ತು ನಿನ್ನನ್ನು ಪ್ರೀತಿಸುವ ವ್ಯಕ್ತಿಯನ್ನೇ ಸೇನಾಪತಿಯನ್ನಾಗಿ ನೇಮಿಸಿದ್ದೀಯಲ್ಲವೇ ? ಸೈನಿಕರಿಗೆ ಸರಿಯಾದ ವೇತನವನ್ನು ನಿಯಮಿತವಾಗಿ ನೀಡು ತ್ತಿದ್ದೀಯಲ್ಲವೇ ? ಇಲ್ಲದಿದ್ದರೆ ಅವರು ರಾಜ್ಯದ ಮೇಲೆ ಕೋಪ ಗೊಳ್ಳುತ್ತಾರೆ ಮತ್ತು ಅದರಿಂದ ಅನರ್ಥವಾಗಬಹುದು.

‘ಸೈನ್ಯವು ವೇತನದ ಮೇಲೆ ನಡೆಯುತ್ತದೆ. ಅವರ  ಕಾಳಜಿ ವಹಿಸ ಬೇಕು’, ಇದು ರಾಜನ ಕರ್ತವ್ಯವಾಗಿದೆ. ಹೀಗೆ ಶ್ರೀರಾಮನು ಕೇಳಿದ ವಿವಿಧ ಪ್ರಶ್ನೆಗಳನ್ನು ವಿಸ್ತಾರವಾಗಿ ನೀಡಲು ಹೋದರೆ, ಸ್ಥಳ ಸಾಕಾಗುವುದಿಲ್ಲ ! ಈ ಪ್ರಶ್ನೆಗಳ ಹಿಂದೆ ಇನ್ನೊಂದು ಉದ್ದೇಶವೆಂದರೆ, ಭರತನು ರಾಜ್ಯಭಾರ ವಹಿಸಿಕೊಂಡ ನಂತರ ಹಳಬರ (ಮಂತ್ರಿ, ಸೇನಾಪತಿ, ಅಮಾತ್ಯ ಇತ್ಯಾದಿ) ಸ್ಥಾನದಲ್ಲಿ ಹೊಸ ನೇಮಕಾತಿಗಳನ್ನು ಮಾಡಿದ್ದರೆ, ಅವು ಸರಿಯಾಗಿ ಆಗಿವೆಯೇ ? ಸರಿಯಾದ ಸ್ಥಾನಕ್ಕೆ ಸರಿಯಾದ ವ್ಯಕ್ತಿಯನ್ನು ನೇಮಿಸ ಲಾಗಿದೆಯೇ ? ಎಂಬುದನ್ನು ತಿಳಿದುಕೊಳ್ಳುವುದಾಗಿತ್ತು. ಕೇವಲ ಅವನ ಜಯಘೋಷ ಮಾಡಲು ಹೊಗಳಿಕೆಗಾರರನ್ನು ನೇಮಿಲಾಗಿಲ್ಲವಷ್ಟ ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು.

೧ ಇ. ಶ್ರೀರಾಮನು ಆದರ್ಶ ರಾಜನಾಗಿದ್ದರಿಂದಲೇ ರಾಮರಾಜ್ಯ ಜನರ ನೆನಪಿನಲ್ಲಿ ! : ಶ್ರೀರಾಮನು ಅಷ್ಟಾವಧಾನಿಯಾಗಿದ್ದನು. ಧರ್ಮ, ವೇದ, ಶಾಸ್ತ್ರ, ಅರ್ಥ, ಸೈನ್ಯ, ಶಸ್ತ್ರಾಸ್ತ್ರ ಈ ಎಲ್ಲಾ ವಿಷಯಗಳಲ್ಲಿ ಅವನ ಜ್ಞಾನ ಅಪಾರವಾಗಿತ್ತು. ರಾಜನು ಹೇಗಿರಬೇಕು ? ಎಂಬುದಕ್ಕೆ ಶ್ರೀರಾಮನು ಏಕಮೇವಾದ್ವಿತೀಯ ಉದಾಹರಣೆಯಾಗಿದ್ದನು; ಆದ್ದರಿಂದಲೇ ರಾಮರಾಜ್ಯವು ಇಂದಿಗೂ ಜನರ ಸ್ಮರಣೆಯಲ್ಲಿದೆ. ಇಂತಹುದೇ ಪ್ರಶ್ನೆಯನ್ನು ಮಹಾಭಾರತದಲ್ಲಿ ನಾರದರು ಯುಧಿಷ್ಠಿರನಿಗೆ  ಕೇಳಿದ್ದಾರೆ, ‘ಕಚ್ಚಿತ್‌ ಪ್ರಶ್ನ’ ಈ ಹೆಸರಿನಿಂದ ಅದು ಪ್ರಸಿದ್ಧವಾಗಿದೆ. ರಾಮನು ಭರತನಿಗೆ ಈ ರೀತಿ ಕ್ಷೇಮದ ಪ್ರಶ್ನೆಗಳನ್ನು ಕೇಳಿ ಭರತನಿಗೆ ಒಂದು ರೀತಿ ರಾಜನೀತಿಯ ಅಭ್ಯಾಸ ತೆಗೆದುಕೊಂಡಿದ್ದನು.

– ಡಾ. ಸಚ್ಚಿದಾನಂದ ಸುರೇಶ ಶೇವಡೆ, ಹಿಂದುತ್ವನಿಷ್ಠ ವಕ್ತಾರರು ಮತ್ತು ಲೇಖಕರು, ಡೊಂಬಿವಿಲಿ (ಕೃಪೆ : ಡಾ.ಸಚ್ಚಿದಾನಂದ ಸುರೇಶ ಶೇವಡೆಯವರ ಫೇಸಬುಕ್)