SC Judges Property Declarations : ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಘೋಷಿಸುವರು !

ನವದೆಹಲಿ – ಪಾರದರ್ಶಕತೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳಲು, ಸರ್ವೋಚ್ಚ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು ಅಧಿಕಾರ ವಹಿಸಿಕೊಳ್ಳುವಾಗ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 1, 2025 ರಂದು ನಡೆದ ಸರ್ವೋಚ್ಚ ನ್ಯಾಯಾಲಯದ ಸಭೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸಮ್ಮುಖದಲ್ಲಿ ಎಲ್ಲಾ 34 ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಘೋಷಿಸಲು ನಿರ್ಧರಿಸಿದರು. ನ್ಯಾಯಾಧೀಶರ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಗುವುದು, ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

1. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿಗದಿತ ಸಂಖ್ಯೆ 34 ಇದೆ. ಪ್ರಸ್ತುತ ಇಲ್ಲಿ 33 ನ್ಯಾಯಾಧೀಶರಿದ್ದಾರೆ, ಒಂದು ಹುದ್ದೆ ಖಾಲಿ ಇದೆ. ಇವರಲ್ಲಿ 30 ನ್ಯಾಯಾಧೀಶರು ತಮ್ಮ ಆಸ್ತಿಯ ಘೋಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ; ಆದರೆ ಅದನ್ನು ಸಾರ್ವಜನಿಕಗೊಳಿಸಲಾಗಿಲ್ಲ.

2. ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಯಶವಂತ ವರ್ಮಾ ಅವರ ಮನೆಯಿಂದ ನಗದು ವಶಪಡಿಸಿಕೊಂಡ ನಂತರ ಹೊಸ ವಿವಾದ ಭುಗಿಲೆದ್ದಿದೆ.

3. 2009 ರಲ್ಲಿ, ‘ನ್ಯಾಯಾಧೀಶರ ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು, ಇದರಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಘೋಷಿಸಲು ತಿಳಿಸಲಾಗಿತ್ತು; ಆದರೆ ಈ ಘೋಷಣೆಯನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂಬ ನಿಬಂಧನೆ ಇತ್ತು. ಈ ನಿಬಂಧನೆಯಿಂದಾಗಿ ಮಸೂದೆಗೆ ವಿರೋಧ ವ್ಯಕ್ತವಾಗಿ ಅದನ್ನು ಹಿಂಪಡೆಯಲಾಗಿತ್ತು.

4. 2009 ರಲ್ಲಿ, ಮಾಹಿತಿ ಹಕ್ಕು ಕಾಯಿದೆಯಡಿ ಹೆಚ್ಚುತ್ತಿರುವ ಪಾರದರ್ಶಕತೆಯ ಬೇಡಿಕೆಯಿಂದಾಗಿ, ಕೆಲವು ನ್ಯಾಯಾಧೀಶರು ಸ್ವಯಂಪ್ರೇರಿತವಾಗಿ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕಗೊಳಿಸಿದರು.

5. ನಗದು ಪ್ರಕರಣದಲ್ಲಿ ಸಿಲುಕಿರುವ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ದೆಹಲಿ ಉಚ್ಚ ನ್ಯಾಯಾಲಯದಿಂದ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಆದಾಗ್ಯೂ, ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಮೂರ್ತಿ ವರ್ಮಾ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯವನ್ನು ನೀಡಬಾರದು ಎಂದು ಸೂಚಿಸಿದ್ದಾರೆ.