ಚಿನ್ನದ ಬೆಲೆ ಏರಿಕೆಯ ಹಿಂದಿನ ‘ಚೀನಾ ಕನೆಕ್ಷನ್’ !

ಸದ್ಯ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನದ ಬೆಲೆ ೧೦ ಗ್ರಾಮ್‌ಗೆ ೮೮ ಸಾವಿರ ರೂಪಾಯಿಗಳಿಗೆ ತಲುಪಿದೆ. ಚಿನ್ನದ ಈ ಬೆಲೆ ಏರಿಕೆಗೆ ಅಸ್ಥಿರ ಹಾಗೂ ಒತ್ತಡಮಯ ಜಾಗತಿಕ ಪರಿಸ್ಥಿತಿಯ ಜೊತೆಗೆ ಚೀನಾದಿಂದ ಮಿತಿಮೀರಿ ಚಿನ್ನ ಖರೀದಿಯೂ ಒಂದು ಮಹತ್ವದ ಕಾರಣವಾಗಿದೆ. ಚೀನಾದ ಚಿನ್ನ ಖರೀದಿಯು ಅಪಾಯದ ಸಂಕೇತವನ್ನು ತೋರಿಸುತ್ತದೆ. ಅದರಿಂದ ಭಾರತ ಸಹಿತ ಅನೇಕ ದೇಶಗಳ ಚಿಂತೆ ಹೆಚ್ಚಾಗಲಿದ್ದು ಭಾರತಸಹಿತ ೭೦ ಕ್ಕಿಂತಲೂ ಹೆಚ್ಚು ದೇಶಗಳು ಚಿನ್ನವನ್ನು ಖರೀದಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ಭವಿಷ್ಯದಲ್ಲಿಯೂ ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆ ಕಾಣಿಸುವುದಿಲ್ಲ.

– ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ಧೋರಣೆಗಳ ವಿಶ್ಲೇಷಕರು ಪುಣೆ. 

ಚೀನಾದ ಪ್ರಚಂಡ ಚಿನ್ನ ಖರೀದಿ 

ಏಷ್ಶಾ ಖಂಡದಲ್ಲಿ ಕಳೆದ ವರ್ಷದ ವರೆಗೆ ಚಿನ್ನದ ಆಮದಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿತ್ತು. ಈಗ ಚೀನಾದ ಕೈ ಮೇಲಾಗಿರುವುದು ಕಾಣಿಸುತ್ತಿದೆ. ಚೀನಾ ಕೇವಲ ಮಾರ್ಚ್ ೨೦೨೪ ರಲ್ಲಿ ೫ ಟನ್‌ ಚಿನ್ನವನ್ನು ಆಮದು ಮಾಡಿದೆ. ೨೦೨೪ ರ ಮೊದಲ ೬ ತಿಂಗಳಲ್ಲಿ ಚೀನಾ ೩೦ ಟನ್‌ ಚಿನ್ನವನ್ನು ಖರೀದಿ ಮಾಡಿತು. ಅದರ ಪರಿಣಾಮವೆಂದು ಸದ್ಯ ಸ್ಥಿತಿಯಲ್ಲಿ ಚೀನಾದ ಕೈಯಲ್ಲಿ ೨ ಸಾವಿರದ ೨೬೨ ಟನ್‌ ಚಿನ್ನದ ಸಂಗ್ರಹವಿದೆ. ಚೀನಾದ ಹೂಡಿಕೆದಾರರು ಕೂಡ ‘ಗೋಲ್ಡ್ ಇ.ಟಿ.ಎಫ್‌.ನಲ್ಲಿ ಹೂಡಿಕೆಯನ್ನು ಹೆಚ್ಚಿಸಿದ್ದಾರೆ. ಚೀನಾ ಅನಿರೀಕ್ಷಿತವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡಿರುವುದರಿಂದ ಜಗತ್ತಿನಾದ್ಯಂತದ ಚಿನ್ನದ ಬೆಲೆಯ ಮೇಲೆ ಕೂಡ ಪ್ರಭಾವ ಬೀರಿದೆ. ನೋಡು ನೋಡುತ್ತಿದ್ದಂತೆಯೆ ಪ್ರತಿ ೧೦ ಗ್ರಾಮ್‌ನ ಬೆಲೆ ೮೮ ಸಾವಿರ ರೂಪಾಯಿಗಳವರೆಗೆ ಜಿಗಿಯಿತು. ಇದರಿಂದ ಚಿನ್ನದ ಹೂಡಿಕೆದಾರರಲ್ಲಿ ಆನಂದದ ವಾತಾವರಣವಿದ್ದರೂ ಹೊಸತಾಗಿ ಖರೀದಿಸುವವರಿಗೆ ಸ್ವಲ್ಪ ನಿರಾಶೆಯುಂಟಾಗಿದೆ.

ಡಾ. ಶೈಲೇಂದ್ರ ದೇವಳಾಣಕರ್‌

೧. ಚಿನ್ನದ ಹೂಡಿಕೆಯಲ್ಲಿ ಹೆಚ್ಚಳ

ರಷ್ಯಾ-ಯುಕ್ರೇನ್‌ ಯುದ್ಧಕ್ಕೆ ೩ ವರ್ಷಗಳು ಪೂರ್ಣವಾಗುತ್ತಿದ್ದು ಅದು ಇನ್ನೂ ಮುಂದುವರಿಯುತ್ತಲೇ ಇದೆ. ಕೊರೋನಾ ಮಹಾಮಾರಿಯ ಪರಿಣಾಮವು ಇನ್ನೂ ಜಾಗತಿಕ ಮಟ್ಟದಲ್ಲಿ ಕಾಣಿಸುತ್ತಿದೆ. ಭಾರತದ ಹೊರತು ಉಳಿದ ಯಾವುದೇ ದೇಶದ ಆರ್ಥಿಕ ವಿಕಾಸದ ದರ ಶೇ. ೪ ಕ್ಕಿಂತ ಮುಂದೆ ಹೋಗಿಲ್ಲ. ಇಂದು ಕೂಡ ಜಾಗತಿಕ ಪೂರೈಕೆಯ ಸ್ಥಿತಿ ಸುಧಾರಣೆಯಾಗಿಲ್ಲ. ಅನೇಕ ದೇಶಗಳ ಚಲನಿನ ಬೆಲೆ ಕುಸಿದಿರುವುದು ಕಾಣಿಸುತ್ತಿದೆ. ವೈಶ್ವಿಕ ಸ್ತರದಲ್ಲಿ ಹೆಚ್ಚುತ್ತಿರುವ ಈ ಅಸುರಕ್ಷಿತೆಯಿಂದ ಕೇವಲ ಭಾರತ ಮಾತ್ರವಲ್ಲದೇ, ಅನೇಕ ದೇಶಗಳು ಚಿನ್ನವನ್ನು ಖರೀದಿಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ‘ಭಾರತೀಯ ರಿಸರ್ವ್ ಬ್ಯಾಂಕ್’ ಕೂಡ ಸುಮಾರು ೧೪ ಟನ್‌ ಚಿನ್ನವನ್ನು ಖರೀದಿಸಿದೆ.

ಇದು ಇತ್ತೀಚೆಗಿನ ವರ್ಷಗಳಲ್ಲಾದ ದೊಡ್ಡ ಖರೀದಿ ಎನ್ನ ಬಹುದು. ರಕ್ಷಣಾ ಸಾಮಗ್ರಿಗಳ ಖರೀದಿಯಂತೆಯೇ ಅನೇಕ ದೇಶಗಳ ಒಲವು  ಈಗ ಚಿನ್ನದ ಖರೀದಿಯ ಕಡೆಗಿದೆ. ಆಫ್ರಿಕಾದ ಅನೇಕ ದೇಶಗಳು, ಲ್ಯಾಟೀನ್‌ ಅಮೇರಿಕಾ ಹಾಗೂ ಇಸ್ಲಾಮೀ ದೇಶಗಳು ಚಿನ್ನದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದು ಕಾಣಿಸುತ್ತದೆ. ಸದ್ಯದ ಸ್ಥಿತಿಯಲ್ಲಿ ಅನೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿವೆ. ಇದರಲ್ಲಿ ಪ್ರಾಮುಖ್ಯವಾಗಿ ರಷ್ಯಾ ಮತ್ತು ಚೀನಾ ಇವೆರಡು ದೇಶ ಗಳ ಬ್ಯಾಂಕ್‌ಗಳು ಮುಂಚೂಣಿಯಲ್ಲಿವೆ. ‘ಪೀಪಲ್ಸ್ ಬ್ಯಾಂಕ್‌ ಆಫ್‌ ಚೈನಾ’ ಚೀನಾದ ಈ ಸರಕಾರಿ ಬ್ಯಾಂಕ್‌ ಕಳೆದ ೧೭ ತಿಂಗಳು ಗಳಲ್ಲಿ ಮಿತಿಮೀರಿ, ಅಂದರೆ ಸುಮಾರು ೧೦೦ ಟನ್‌ ಚಿನ್ನವನ್ನು ಖರೀದಿಸಿದೆ. ಚೀನಾಗೆ ‘ಪೀಪಲ್ಸ್ ಬ್ಯಾಂಕ್‌ ಆಫ್‌ ಚೈನಾ’ದ ವಿದೇಶಿ ಚಲನದ ಕೋಶದಲ್ಲಿ ಚಿನ್ನದ ಪಾಲನ್ನು ಹೆಚ್ಚಿಸ ಲಿಕ್ಕಿದೆ. ಇದರ ಪರಿಣಾಮದಿಂದ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ ೧೦ ಗ್ರಾಮ್‌ಗೆ ೮೮ ಸಾವಿರ ರೂಪಾಯಿಯ ವರೆಗೆ ತಲುಪಿದೆ.

೨. ಚೀನಾದ ಮಹತ್ವಾಕಾಂಕ್ಷೆ

ಜಾಗತಿಕ ಆರ್ಥಿಕತೆಯಲ್ಲಿ ಅಮೇರಿಕಾ ಅತೀ ದೊಡ್ಡ ಅರ್ಥವ್ಯವಸ್ಥೆಯಾಗಿದ್ದು ಚೀನಾ ಎರಡನೆಯ ಸ್ಥಾನದಲ್ಲಿದೆ. ೨೦೪೯ ರ ವರೆಗೆ ಚೀನಾಗೆ ‘ಜಗತ್ತಿನ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಮಹಾಶಕ್ತಿ’ ಆಗಲಿಕ್ಕಿದೆ. ಶಿ ಜಿನ್‌ಪಿಂಗ್‌ ಚೀನಾದ ರಾಷ್ಟ್ರಾಧ್ಯಕ್ಷರಾದ ನಂತರ ೨೦೧೨ ರಲ್ಲಿ ಚೀನಾ ಅದಕ್ಕಾಗಿ ವ್ಯಾಪಕ ಯೋಜನೆಗಳನ್ನು ಹಮ್ಮಿಕೊಂಡಿತು. ಅದಕ್ಕಾಗಿ ೨೦೨೩, ೨೦೩೫ ಮತ್ತು ೨೦೪೯ ಈ ರೀತಿಯಲ್ಲಿ ನಿಯೋಜನೆ ಮಾಡಿಕೊಂಡಿದೆ. ಅಮೇರಿಕಾದ ಅರ್ಥವ್ಯವಸ್ಥೆಗೆ ಆಘಾತ ನೀಡಲು ಚೀನಾ ‘ಡೀ ಡಾಲರೈಸೇಶನ್‌’ನ ಪ್ರವಾಹದಲ್ಲಿ ಮುನ್ನುಗ್ಗುತ್ತಿದ್ದು (‘ಡೀ ಡಾಲರೈಸೇಶನ್’ ಅಂದರೆ ಅಮೇರಿಕಾದ ‘ಡಾಲರ್‌’ನ ಬದಲು ಚೀನಾ ಅಂತಾರಾಷ್ಟ್ರೀಯ ಸ್ತರದಲ್ಲಿ ತನ್ನದೆ ಚಲನ ‘ಯುಆನ’ಅನ್ನು ಹೆಚ್ಚೆಚ್ಚು ಬಳಸುವುದು) ಡಾಲರ್ಸ್‌ನ ಮೂಲಕ ನಡೆಯುವ ಜಾಗತಿಕ ವ್ಯವಹಾರವನ್ನು ಹೇಗೆ ಕಡಿಮೆಗೊಳಿಸಬಹುದು, ಎಂಬುದಕ್ಕಾಗಿ ಚೀನಾ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಯುಆನ್‌ನ ಅಪಮೌಲ್ಯದಿಂದ (ಬೆಲೆ ಕುಸಿತದಿಂದ) ಚೀನಾವು ಆರ್ಥಿಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿದೆ. ಕೊರೊನಾ ಮಹಾಮಾರಿಯ ನಂತರ ವಿದೇಶಿ ಚಲನದ ಕೋಶವನ್ನೇ ಕಬಳಿಸಲು ಪ್ರಾರಂಭಿಸಿದ ಚೀನಾದ ಅರ್ಥವ್ಯವಸ್ಥೆ ಪೂರ್ವಸ್ಥಿತಿಗೆ ಬಂದಿಲ್ಲ. ಚೀನಾದಲ್ಲಿ ಬೇಡಿಕೆ ತುಂಬಾ ಕುಸಿದಿದೆ. ಔದ್ಯೋಗೀಕರಣದ ಚಕ್ರವೂ ‘ಕೊವಿಡ್’ ಮಹಾಮಾರಿಯ ಪೂರ್ವಸ್ಥಿತಿಗೆ ಬಂದಿಲ್ಲ. ಚೀನಾದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿರುವ ನಿರ್ಮಾಣಕಾರ್ಯದ ಉದ್ಯೋಗ ಆರ್ಥಿಕ ಸಂಕಟಕ್ಕೆ ಸಿಲುಕಿದೆ. ಎಲ್ಲ ಇಂತಹ ಸ್ಥಿತಿ ಯಲ್ಲಿಯೆ ಚೀನಾ ಬೃಹತ್ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿದೆ. ೨೦೧೪ ರಿಂದ ೨೦೨೪ ಈ ೧೦ ವರ್ಷಗಳ ಕಾಲಘಟ್ಟವನ್ನು ನೋಡಿದರೆ ಇಂದು ಚಿನ್ನದ ಬೆಲೆ ಎರಡುಪಟ್ಟಿಗಿಂತ ಹೆಚ್ಚಾಗಿದೆ. ಚೀನಾದ ಅಪಾರ ಖರೀದಿಯೇ ಈ ಬೆಲೆ ಏರಿಕೆಗೆ ಕಾರಣವಾಗಿದೆ; ಆದರೆ ಈ ವಿಷಯದಲ್ಲಿ ಚಿಂತೆಯೂ ವ್ಯಕ್ತವಾಗುತ್ತಿದೆ.

೩. ಕೊರೊನಾ ಮಹಾಮಾರಿಯ ಮೊದಲಿನ ಸ್ಥಿತಿಯ ನೆನಪು 

ಈ ಚಿಂತೆಯ ಹಿನ್ನೆಲೆಯೆಂದರೆ ‘ಕೋವಿಡ್’ ಮಹಾಮಾರಿಯ ಪೂರ್ವ ಕಾಲಘಟ್ಟ ! ಕೊರೊನಾ ಮಹಾಮಾರಿಯ ಉದ್ರೇಕ ಜಗತ್ತಿನಾದ್ಯಂತ ಹರಡುವ ಮೊದಲು ಚೀನಾ ಸಂಪೂರ್ಣ ಜಗತ್ತಿನಿಂದ ವೈದ್ಯಕೀಯ ಸಾಧನಗಳನ್ನು, ‘ಪಿಪೀ ಕಿಟ್‌’ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿತ್ತು. ಆಗ ಅದರ ಮಹತ್ವ ಯಾವುದೇ ದೇಶಕ್ಕೆ ತಿಳಿದಿರಲಿಲ್ಲ ಅಥವಾ ಅದರ ಕಡೆಗೆ ಗಮನವೂ ಹೋಗಿರಲಿಲ್ಲ; ಆದರೆ ಕೊರೊನಾದ ಸೋಂಕು ಹೆಚ್ಚುತ್ತಾ ಹೋದಂತೆ ಚೀನಾದ ಈ ಖರೀದಿಯ ರಹಸ್ಯ ಅರಿವಾಯಿತು. ಆದರೆ ಈಗ ‘ಚೀನಾ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿದೆ, ಆದ್ದರಿಂದ ಭವಿಷ್ಯದಲ್ಲಿ ಉಂಟಾಗುವ ಯಾವುದೋ ಅಪಾಯದ ಬಗ್ಗೆ ಚೀನಾಗೆ ಸುಳಿವು ಸಿಕ್ಕಿರಬಹುದೇ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಇದು ಸ್ವಾಭಾವಿಕವಾಗಿದೆ. ಚಿನ್ನ ಸಂಗ್ರಹವು ಯಾವುದೇ ದೇಶದ ಅರ್ಥವ್ಯವಸ್ಥೆಯ ಮುಖ್ಯ ಆಧಾರವಾಗಿರುತ್ತದೆ. ಯಾವುದೇ ಚಲನಿನ ಮೌಲ್ಯ ಪ್ರಾಮುಖ್ಯ ವಾಗಿ ಆ ದೇಶದಲ್ಲಿರುವ ಚಿನ್ನದ ಸಂಗ್ರಹದಿಂದ ನಿರ್ಧರಿಸಲಾಗುತ್ತದೆ. ಯಾವಾಗ ಈ ಚಲನ್‌ನ ಬೆಲೆ ಕುಸಿಯುತ್ತದೆಯೋ, ಆಗ ವಿನಿಮಯದ ಸಮಸ್ಯೆ ಉದ್ಭವಿಸುತ್ತದೆ. ಆ ಸಂದರ್ಭದಲ್ಲಿ ದೇಶ ಹಾಗೂ ನಾಗರಿಕರಿಂದ ಚಿನ್ನದಲ್ಲಿ ಹೂಡಿಕೆಯಾಗುತ್ತದೆ. ಚಿನ್ನ ಇದು ವೈಯಕ್ತಿಕ ಮಟ್ಟದೊಂದಿಗೆ ದೇಶಕ್ಕೂ ಆರ್ಥಿಕ ಭದ್ರತೆಯನ್ನು ಪ್ರದಾನಿಸುವುದಾಗಿದೆ; ಆದ್ದರಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್‌ ೧೪ ಟನ್‌ ಚಿನ್ನವನ್ನು ಖರೀದಿಸಿದೆ. ಜಾಗತಿಕ ಸ್ತರದ ಅಸುರಕ್ಷಿತತೆ ಹಾಗೂ ಅಸ್ಥಿರತೆಯೇ ಇದರ ಕಾರಣವಾಗಿದೆ. ಇಂತಹ ಪ್ರತಿಕೂಲ ವಾತಾವರಣದಲ್ಲಿ ವ್ಯವಸ್ಥಾಪನೆಯ ರಣನೀತಿಯೆಂದು ಚಿನ್ನ ಸಂಗ್ರಹದ ವಿಚಾರ ಮಾಡಲಾಗುತ್ತದೆ.

೪. ಡಾಲರ್ಸ್‌ನ ವರ್ಚಸ್ಸಿಗೆ ಆಘಾತ ?

ಚೀನಾದ ಚಿನ್ನ ಖರೀದಿಯ ಹಿಂದೆ ಆರ್ಥಿಕ ಭದ್ರತೆಯ ಜೊತೆಗೆ ಇನ್ನೊಂದು ಮಹತ್ವದ ಕಾರಣವಿದೆ. ಅದೇನೆಂದರೆ, ಪ್ರಾರಂಭದಲ್ಲಿ ಹೇಳಿದಂತೆ ಡಾಲರ್ಸ್‌ಗೆ ಆಘಾತ ನೀಡುವುದು ! ಏಷ್ಶಾ ಖಂಡದಲ್ಲಿ ಇಂದು ಅತೀ ಹೆಚ್ಚು ಚಿನ್ನ ಖರೀದಿಸುವ ದೇಶ ಚೀನಾ. ಚೀನಾದ ಚಿನ್ನ ಖರೀದಿಯ ಪ್ರಮಾಣ ಶೇ. ೩೦ ರಷ್ಟು ಹೆಚ್ಚಾಗಿದೆ. ಇದರ ಹಿಂದೆ ಪ್ರಾಮುಖ್ಯವಾಗಿ ಅಮೇರಿಕಾ ಮತ್ತು ಚೀನಾದ ನಡುವಿನ ಸಂಘರ್ಷವೇ ಕಾರಣವಾಗಿದೆ. ಈಗ ಈ ಸಂಘರ್ಷ ಕೇವಲ ರಕ್ಷಣೆ ಅಥವಾ ಸಾಮಗ್ರಿಯ ಮಟ್ಟದಲ್ಲಿ ಉಳಿದಿಲ್ಲ, ಅದು ಆರ್ಥಿಕ ಮಟ್ಟದಲ್ಲಿ ಬಂದು ನಿಂತಿದೆ. ಡಾಲರ್‌ ಇದು ಅಮೇರಿಕಾದ ಸಂಪೂರ್ಣ ಸಾಮರ್ಥ್ಯದ ಮೂಲವಾಗಿದೆ. ಡಾಲರ್ಸ್ ಮೂಲಕ ಅಮೇರಿಕಾ ಅಂತಾರಾಷ್ಟ್ರೀಯ ಅರ್ಥಕಾರಣದ ಜೊತೆಗೆ ರಾಜಕಾರಣದ ಮೇಲೆಯೂ ಪ್ರಭಾವ ಬೀರಿದೆ. ಆದ್ದರಿಂದ ಅಮೇರಿಕಾದ ಡಾಲರ್ಸ್‌ನ ವರ್ಚಸ್ಸಿಗೆ ಸವಾಲೊಡ್ಡಲು ಪ್ರಾಮುಖ್ಯವಾಗಿ ಚೀನಾ ಸಿದ್ಧತೆ ಮಾಡುತ್ತಿದೆ. ಆ ಸವಾಲನ್ನು ಮುಂದಿಟ್ಟು ಯುಆನ್‌ನ ಮೂಲಕ ವ್ಯಾಪಾರ ಹೆಚ್ಚಿಸುವುದೇ ಚೀನಾದ ಉದ್ದೇಶವಾಗಿದೆ. ಇದರಲ್ಲಿ ಇನ್ನಿತರ ದೇಶಗಳಿಗೂ ಯುಆನ್‌ ಮೂಲಕ ವ್ಯಾಪಾರ ಮಾಡಲು ಉತ್ತೇಜಿಸುತ್ತಿದೆ. ಚೀನಾಗೆ ಚಿನ್ನದ ಸಂಗ್ರಹವನ್ನು ಹೆಚ್ಚಿಸಿ ಆ ಸಂಗ್ರಹದ ಆಧಾರದಲ್ಲಿ ಯುಆನ್‌ನ ಬೆಲೆ ಹೆಚ್ಚಿಸಲಿಕ್ಕಿದೆ ಹಾಗೂ ಅಮೇರಿಕಾಗೆ ಸವಾಲೊಡ್ಡಲಿಕ್ಕಿದೆ. ಕೊರೋನಾ ಮಹಾಮಾರಿಯ ನಂತರ ಅಮೇರಿಕಾ ಮತ್ತು ಯುರೋಪ್‌ ದೇಶಗಳಲ್ಲಿ ಚೀನಾದ ಮೇಲಿನ ವಿಶ್ವಾಸ ಕುಸಿದಿದೆ. ಆದ್ದರಿಂದ ಚೀನಾದ ಮೇಲೆ ಎಷ್ಟು ವಿಶ್ವಾಸವಿಡುವುದು, ಎಷ್ಟು ಅವಲಂಬಿಸುವುದು, ಎಂಬ ವಿಷಯದಲ್ಲಿ ಜಗತ್ತು ಪುನರ್ವಿಚಾರ ಮಾಡುತ್ತಿದೆ. ಇಂತಹ ಸ್ಥಿತಿಯನ್ನು ಸುಧಾರಣೆ ಮಾಡಲಿಕ್ಕಿದ್ದರೆ ಹಾಗೂ ಡಾಲರ್‌ಗೆ ಸವಾಲೆಸಗಲಿದ್ದರೆ, ಯುಆನ್‌ನಿಂದ ನಡೆಯುವ ವ್ಯಾಪಾರವನ್ನೂ ಹೆಚ್ಚಿಸಬೇಕಾಗಿದೆ. ಆದ್ದರಿಂದ ಚೀನಾ ಚಿನ್ನದ ಖರೀದಿಯನ್ನು ಹೆಚ್ಚಿಸಿರುವುದು ಕಾಣಿಸುತ್ತಿದೆ.

೫. ತೈವಾನದ ಮೇಲಿನ ಆಕ್ರಮಣದ ಅಪಾಯ 

ಚೀನಾಗೆ ಮುಂಬರುವ ಕಾಲದಲ್ಲಿ ತೈವಾನದ ಏಕೀಕರಣದ ಪ್ರಕ್ರಿಯೆಯನ್ನು ಮುಂದೆ ಕೊಂಡೊಯ್ಯುವುದಿದೆ. ‘ಅದಕ್ಕಾಗಿ ನಾವು ಸೇನಾಬಲವನ್ನು ಉಪಯೋಗಿಸಲು ಕೂಡ ಹಿಂಜರಿಯುವುದಿಲ್ಲ’, ಎಂದು ಶಿ ಜಿನ್‌ಪಿಂಗ್‌ ಇವರು ಈ ವರ್ಷದ ಪ್ರಾರಂಭದಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವುದೇ ದೇಶವು ಹಸ್ತಕ್ಷೇಪ ಮಾಡಿದರೆ, ಅದಕ್ಕೆ ನಾವು ಸುಮ್ಮನೆ ಇರಲಾರೆವು’, ಎಂಬುದನ್ನೂ ಚೀನಾ ಹೇಳಿಬಿಟ್ಟಿದೆ. ಆದರೂ ಚೀನಾಗೆ ಒಂದು ಮಹತ್ವದ ಭಯವಿದೆ, ಅದೇನೆಂದರೆ, ಯುಕ್ರೇನ್‌ ಯುದ್ಧದ ನಂತರ ಅಮೇರಿಕಾ ರಷ್ಯಾದ ಮೇಲೆ ೫ ಸಾವಿರಕ್ಕಿಂತಲೂ ಹೆಚ್ಚು ಆರ್ಥಿಕ ನಿರ್ಬಂಧಗಳನ್ನು ಹೇರಿತು, ತೈವಾನದ ಮೇಲೆ ಆಕ್ರಮಣ ಮಾಡಿದರೆ ಅದೇ ರೀತಿ ಚೀನಾದ ವಿರುದ್ಧವೂ ನಿರ್ಬಂಧ ಹೇರಬಹುದು. ಆ ಕಾಲಕ್ಕಾಗಿ ಪೂರ್ವ ಸಿದ್ಧತೆಯೆಂದು ಚೀನಾ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿದೆ. ಈ ಪ್ರಚಂಡ ಚಿನ್ನದ ಖರೀದಿಯ ಹಿಂದೆ ತೈವಾನದ ಮೇಲೆ ಆಕ್ರಮಣ ಮಾಡುವ ರಣನೀತಿಯೂ ಒಂದು ಕಾರಣವಾಗಿರಬಹುದು.

೬. ಜನಸಾಮಾನ್ಯರ ಒಲವು ಚಿನ್ನದ ಕಡೆಗೆ

ಏಷ್ಶಾ ಖಂಡದಲ್ಲಿ ಚಿನ್ನ ಆಮದಿನಲ್ಲಿ ಪ್ರಥಮ ಸ್ಥಾನದಲ್ಲಿರುವ ಭಾರತವನ್ನು ಹಿಂದಿಕ್ಕಿ ಚೀನಾ ಈಗ ಚಿನ್ನದ ಎಲ್ಲಕ್ಕಿಂತ ದೊಡ್ಡ ಆಮದುಗಾರ ಆಗಿದೆ. ನಿಜವಾಗಿ ನೋಡಿದರೆ ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಉತ್ಪಾದನೆಯೂ ಆಗುತ್ತದೆ. ಆದರೂ ಚೀನಾ ಚಿನ್ನದ ಆಮದನ್ನು ಹೆಚ್ಚಿಸಿದೆ. ಚೀನೀ ಜನರ ಚಿನ್ನದಲ್ಲಿನ ಹೂಡಿಕೆಯೂ ಹೆಚ್ಚಾಗಿದೆ. ಚೀನೀ ನಾಗರಿಕರ ಮುಂದೆ ಹೂಡಿಕೆಯ ಪರ್ಯಾಯ ಸೀಮಿತವಾಗಿದೆ. ಇಂದಿನ ವರೆಗೆ ಅವರ ಹೂಡಿಕೆ ಪ್ರಾಮುಖ್ಯವಾಗಿ ‘ನಿರ್ಮಾಣ’ (ರಿಯಲ್‌ ಎಸ್ಟೇಟ್) ಕ್ಷೇತ್ರದಲ್ಲಿತ್ತು. ಅವರಿಗೆ ವಿದೇಶದಲ್ಲಿ ಹೂಡಿಕೆ ಮಾಡಲು ಅನೇಕ ನಿರ್ಬಂಧಗಳಿವೆ. ಚೀನೀ ನಾಗರಿಕರು ವಿದೇಶದಲ್ಲಿ ಎಷ್ಟು ಮೊತ್ತದ ವರೆಗೆ ಹೂಡಿಕೆ ಮಾಡಬಹುದು, ಎಂಬುದರ ಮೇಲೆ ಚೀನಾ ಸರಕಾರದ ನಿಂತ್ರಣವಿದೆ. ಆದ್ದರಿಂದ ಅಲ್ಲಿನ ನಾಗರಿಕರು ‘ರಿಯಲ್‌ ಎಸ್ಟೇಟ್’ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರು. ಕೊರೋನಾ ಮಹಾಮಾರಿಯ ನಂತರ ಚೀನಾದಲ್ಲಿನ ನಿರ್ಮಾಣ ಕಾರ್ಯದ ಉದ್ಯೋಗ ಕುಸಿಯಿತು. ಇದರ ಪರಿಣಾಮದಿಂದಲೂ ಚೀನಿಯರು ಚಿನ್ನದಲ್ಲಿ ಹೂಡಿಕೆ ಮಾಡುವುದು ಕಾಣಿಸುತ್ತಿದೆ.

(ಆಧಾರ : ಡಾ. ಶೈಲೇಂದ್ರ ದೇವಳಾಣಕರ್‌ ಇವರ ಫೇಸ್‌ಬುಕ್‌ ಹಾಗೂ ದೈನಿಕ ‘ಸರಕಾರನಾಮಾ’)