ಸಿಮ್ ಕಾರ್ಡ್‌ಗಳಲ್ಲಿ ಬಳಸಲಾಗುವ ‘ಚಿಪ್‌ಸೆಟ್’ ಚೀನಾದಿಂದ ಬಂದಿರುವುದು ಬಹಿರಂಗವಾದ ನಂತರ ನಿರ್ಧಾರ!
ನವದೆಹಲಿ – ಭಾರತ ಸರಕಾರವು ಮೊಬೈಲ್‌ನಲ್ಲಿ ಬಳಸಲಾಗುವ ಹಳೆಯ ಸಿಮ್ ಕಾರ್ಡ್‌ಗಳನ್ನು ಬದಲಾಯಿಸುವ ಬಗ್ಗೆ ಚಿಂತಿಸುತ್ತಿದೆ. ಕೆಲವು ಸಿಮ್ ಕಾರ್ಡ್‌ಗಳಲ್ಲಿ ಬಳಸಲಾಗುವ ‘ಚಿಪ್‌ಸೆಟ್’ ಚೀನಾದಿಂದ ಬಂದಿರುವುದು ‘ಸೈಬರ್ ಭದ್ರತಾ ಏಜೆನ್ಸಿ’ ನಡೆಸಿದ ತನಿಖೆಯಲ್ಲಿ ಬಹಿರಂಗವಾದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕರು (ಎನ್.ಸಿ.ಎಸ್.ಸಿ.) ಮತ್ತು ಗೃಹ ಸಚಿವಾಲಯವು ಜಂಟಿಯಾಗಿ ಈ ತನಿಖೆ ನಡೆಸಿದೆ. ಸರಕಾರವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದೆ.
೧. ‘ಎನ್.ಸಿ.ಎಸ್.ಸಿ.’ಯು ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐ) ನಂತಹ ದೇಶದ ಪ್ರಮುಖ ‘ಟೆಲಿಕಾಂ ಆಪರೇಟರ್’ಗಳ ಹಿರಿಯ ಅಧಿಕಾರಿಗಳು ಮತ್ತು ದೂರಸಂಪರ್ಕ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ. ಈ ಸಭೆಯಲ್ಲಿ ಸಿಮ್ ಕಾರ್ಡ್ ಪೂರೈಕೆ ಪ್ರಕ್ರಿಯೆಯ ದೋಷಗಳು ಮತ್ತು ಹಳೆಯ ಸಿಮ್ ಕಾರ್ಡ್‌ಗಳನ್ನು ಬದಲಾಯಿಸುವ ಅಂಶಗಳ ಬಗ್ಗೆ ಚರ್ಚಿಸಲಾಗಿದೆ.
೨. ಭಾರತವು ‘ಹುವೈ’ ಮತ್ತು ‘ಝೆಡ್‌ಟಿಇ’ ನಂತಹ ಚೀನೀ ಉಪಕರಣ ತಯಾರಕರನ್ನು ನಿಷೇಧಿಸಿದೆ.
೩. ಈಗ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ಸರಕಾರವು ದೇಶದಲ್ಲಿ ದೂರಸಂಪರ್ಕ ಉಪಕರಣಗಳ ಆಮದು, ಮಾರಾಟ ಮತ್ತು ಬಳಕೆಗೆ ಮೊದಲು ಅವುಗಳನ್ನು ಕಡ್ಡಾಯವಾಗಿ ಪರೀಕ್ಷಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯ ಮೂಲಕ, ಭಾರತದಲ್ಲಿ ಬಳಸಲಾಗುವ ಎಲ್ಲಾ ದೂರಸಂಪರ್ಕ ಉಪಕರಣಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ.
೪. ಸಾಮಾನ್ಯವಾಗಿ ದೂರಸಂಪರ್ಕ ಸಂಸ್ಥೆಗಳು ಪ್ರಮಾಣೀಕೃತ ಮಾರಾಟಗಾರರಿಂದ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತವೆ. ಈ ಮಾರಾಟಗಾರರು ವಿಯೆಟ್ನಾಂ ಅಥವಾ ತೈವಾನ್‌ನ ವಿಶ್ವಾಸಾರ್ಹ ಮೂಲಗಳಿಂದ ಚಿಪ್‌ಗಳನ್ನು ಖರೀದಿಸುತ್ತಾರೆ; ಆದರೆ ಕೆಲವು ಮಾರಾಟಗಾರರು ವಿಶ್ವಾಸಾರ್ಹ ಮೂಲ ಪ್ರಮಾಣಪತ್ರವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವರು ಬಳಸಿದ ಚಿಪ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಬಹಿರಂಗವಾಗಿದೆ.