ನವದೆಹಲಿ ರೈಲು ನಿಲ್ದಾಣದಲ್ಲಿ ನೂಕುನುಗ್ಗಲು: 18 ಯಾತ್ರಿಕರು ಸಾವು!

  • ಮಹಾಕುಂಭಕ್ಕೆ ತೆರಳಲು ವಿಶೇಷ ರೈಲುಗಾಡಿ ಘೋಷಿಸಿದ್ದರಿಂದ ಅವಘಡ !

  • 20 ಕ್ಕೂ ಹೆಚ್ಚು ಜನರಿಗೆ ಗಾಯ !

ನವದೆಹಲಿ – ಜನವರಿ 15 ರ ರಾತ್ರಿ ತಡವಾಗಿ ನವದೆಹಲಿ ರೈಲು ನಿಲ್ದಾಣದಲ್ಲಿ ರೈಲು ಹತ್ತಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದರಲ್ಲಿ 18 ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗುವ ಪ್ರಯಾಣಿಕರು ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಜಮಾಯಿಸಿದ್ದರು. ಪ್ಲಾಟ್‌ಫಾರ್ಮ್ ಸಂಖ್ಯೆ 14 ರಲ್ಲಿ ಮಗಧ್ ಎಕ್ಸ್‌ಪ್ರೆಸ್ ಮತ್ತು 15 ರಲ್ಲಿ ಉತ್ತರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಮೊದಲೇ ನಿಂತಿದ್ದವು. ಪ್ರಯಾಗರಾಜ್‌ಗೆ ಹೋಗುವ ಎರಡು ರೈಲುಗಳು ತಡವಾಗಿ ಚಲಿಸುತ್ತಿದ್ದರಿಂದ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಯುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ವಿಶೇಷ ರೈಲಿನ ಘೋಷಣೆ ಮಾಡಿದ್ದರಿಂದ ಅದರ ಕಡೆಗೆ ಓಡುವಾಗ ಪ್ರಯಾಣಿಕರ ಕಾಲ್ತುಳಿತ ಸಂಭವಿಸಿದೆ. ಈ ದುರದೃಷ್ಟಕರ ಅಪಘಾತದಿಂದಾಗಿ ದೆಹಲಿ ಪೊಲೀಸರು ಮತ್ತು ರೈಲ್ವೆ ಆಡಳಿತ ಪರಸ್ಪರ ಆರೋಪ ಮಾಡುತ್ತಿದ್ದಾರೆ.

ಕಾಲ್ತುಳಿತದ ಮುಂಚಿನ ಪರಿಸ್ಥಿತಿ ಹೀಗಿತ್ತು…!

1. ಪ್ರಯಾಣಿಕರು ಪ್ರಯಾಗರಾಜ್‌ಗೆ ಮಹಾಕುಂಭಕ್ಕೆ ಹೋಗುವ ರೈಲುಗಳಿಗಾಗಿ ಕಾಯುತ್ತಿದ್ದರು.

2. ಪ್ರಯಾಗರಾಜ್‌ಗೆ ಹೋಗುವ 2 ರೈಲುಗಳು ಈಗಾಗಲೇ ತಡವಾಗಿ ಚಲಿಸುತ್ತಿದ್ದವು. ಇದರಿಂದ ಅಸ್ವಸ್ಥರಾದ ಭಕ್ತರು ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಕಾಯುತ್ತಿದ್ದರು.

3. ಇದ್ದಕ್ಕಿದ್ದಂತೆ ರೈಲ್ವೆ ಆಡಳಿತವು ನವದೆಹಲಿಯಿಂದ ಪ್ರಯಾಗರಾಜ್‌ಗೆ ವಿಶೇಷ ರೈಲು ಬಿಡುವ ಘೋಷಣೆ ಮಾಡಿತು. ಘೋಷಣೆ ಮಾಡಿದ ತಕ್ಷಣ ಪ್ರಯಾಣಿಕರು ಪ್ಲಾಟ್‌ಫಾರ್ಮ್ ಸಂಖ್ಯೆ 14 ರಿಂದ 16 ರವರೆಗೆ ಓಡಲು ಪ್ರಾರಂಭಿಸಿದರು. ಇದರಿಂದ ಕಾಲ್ತುಳಿತ ಉಂಟಾಯಿತು.

4. ಮೊದಲು ತಲುಪಲು ಜನರು ಪರಸ್ಪರರನ್ನು ತುಳಿದರು. ಅನೇಕ ಜನರು ಪ್ಲಾಟ್‌ಫಾರ್ಮ್‌ಗಳ ಮೆಟ್ಟಿಲುಗಳು ಮತ್ತು ರೈಲು ಹಳಿಗಳ ಮೇಲೆ ಬಿದ್ದರು.

ಪೊಲೀಸ್ ಅಧಿಕಾರಿಗಳ ಹೇಳಿಕೆಗಳು!

ರೈಲ್ವೆ ಪೊಲೀಸ್ ಉಪ ಆಯುಕ್ತ ಕೆ.ಪಿ.ಎಸ್. ಮಲ್ಹೋತ್ರಾ ಅವರು, ಪ್ರಯಾಗರಾಜ್‌ಗೆ ಹೋಗಲು ಎರಡು ರೈಲುಗಳಿಗಾಗಿ ಸುಮಾರು 8 ರಿಂದ 10 ಸಾವಿರ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಹಾಜರಿದ್ದರು. ಅದರಲ್ಲಿ ಹೊಸ ರೈಲಿನ ಘೋಷಣೆಯಾಯಿತು. ಆ ರೈಲಿನಲ್ಲಿ ಹೋಗಲು ಮೊದಲೇ 6 ಸಾವಿರ ಪ್ರಯಾಣಿಕರು ಅಲ್ಲಿ ಹಾಜರಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಜಮಾಯಿಸಿದ್ದರು. 15-20 ನಿಮಿಷಗಳಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ.

ಇನ್ನೊಬ್ಬ ಅಧಿಕಾರಿ, ಮಧ್ಯಾಹ್ನ 3 ಗಂಟೆಯಿಂದ ರೈಲು ನಿಲ್ದಾಣದ ಪರಿಸ್ಥಿತಿ ಹದಗೆಡಲು ಪ್ರಾರಂಭವಾಯಿತು. ಜನಸಂದಣಿಯಲ್ಲಿ ಜನರಿಗೆ ಮುಂದೆ ಅಥವಾ ಹಿಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ರೈಲು ತಪ್ಪಿ ಹೋಗುವ ಭಯವೂ ಇತ್ತು. ಕಾಲ್ತುಳಿತಕ್ಕೆ ಇದು ಮತ್ತೊಂದು ಕಾರಣವಾಗಿತ್ತು ಎಂದು ಹೇಳಿದರು.

ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ!

ಘಟನಾ ಸ್ಥಳದಲ್ಲಿ ಹಾಜರಿದ್ದ ಜನರು, ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಮತ್ತು ರೈಲ್ವೆ ಆಡಳಿತದಿಂದ ಯಾವುದೇ ವ್ಯವಸ್ಥೆ ಇರಲಿಲ್ಲ. ಕೆಲವೇ ಕೆಲವು ಪೊಲೀಸರು ಕಾಣುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದರು. ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಪೊಲೀಸರು ಇದ್ದಿದ್ದರೆ, ಬಹುಶಃ ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾಲ್ತುಳಿತದ ಘಟನೆಗಳು ಪದೇ ಪದೇ ಸಂಭವಿಸುತ್ತಿರುವುದನ್ನು ನೋಡಿದರೆ, ಇದರ ಹಿಂದೆ ಯಾವುದೇ ಷಡ್ಯಂತ್ರವಿದೆಯೇ ಎಂದು ತನಿಖೆ ನಡೆಸುವ ಜೊತೆಗೆ ಭಾರತೀಯರಲ್ಲಿನ ಅಶಿಸ್ತನ್ನು ಸಹ ಇದಕ್ಕೆ ಕಾರಣವೆಂದು ಪರಿಗಣಿಸಬೇಕು ! ಇದರೊಂದಿಗೆ, ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜವಾಬ್ದಾರರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!
  • ಲಕ್ಷಾಂತರ ಜನರು ಒಂದೇ ಸಮಯದಲ್ಲಿ ಇಂತಹ ಯಾತ್ರೆಗಳಿಗೆ ಹೋಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ಸರಿಯಾದ ನಿರ್ವಹಣೆ ಆಗಬೇಕು. ಇದಕ್ಕಾಗಿ ಸರಕಾರ ಮತ್ತು ಆಡಳಿತವು ಪ್ರಯತ್ನಿಸಬೇಕು!