ಭಗವಾನ ಮಹಾದೇವನಲ್ಲಿರುವ ಸಾಧನಗಳ ಅರ್ಥ

ತಮ್ಮ ಭಕ್ತರ ಉದ್ಧಾರಕ್ಕಾಗಿ ವಿರಕ್ತ ಮತ್ತು ವಿರಾಗಿಯಾಗಿರುವ ಮಹಾದೇವನು ಕೆಲವು ಸಾಧನಗಳನ್ನು ಅಂಗೀಕರಿಸಿದ್ದಾನೆ. ಆ ಸಾಧನಗಳು ಯಾವುದರ ಪ್ರತೀಕಗಳಾಗಿವೆ ? ಎಂಬುದನ್ನು ನಾವು ತಿಳಿದುಕೊಳ್ಳೋಣ.

ತ್ರಿಶೂಲ

ಮಹಾದೇವನು ನ್ಯಾಯ, ನೀತಿ ಮತ್ತು ಧರ್ಮ ಇವುಗಳಿಂದ ಕೂಡಿದ ತ್ರಿಶೂಲವನ್ನು ತನ್ನ ಕೈಯಲ್ಲಿ ಹಿಡಿದಿದ್ದಾನೆ. ಈ ತ್ರಿಶೂಲದ ಸಹಾಯದಿಂದ ಮಹಾದೇವನು ಸಜ್ಜನರ ರಕ್ಷಣೆ ಮತ್ತು ದುಷ್ಟರ ನಾಶ ಮಾಡುತ್ತಾನೆ. ತ್ರಿಶೂಲವು ಮಹಾದೇವನ ಕೈಯಲ್ಲಿರುವ ಸಂಹಾರಕ ಆಯುಧವಾಗಿದೆ.

ಡಮರು

ಇದು ಸಂಗೀತದ ಪ್ರತೀಕವಾಗಿದೆ. ಅದೇ ರೀತಿ ಡಮರು ಜ್ಞಾನದ ಪ್ರವರ್ತಕ ಆಗಿದೆ. ಮಹಾದೇವನು ಡಮರುವನ್ನು ಬಾರಿಸಿ ಮಹರ್ಷಿ ಪಾಣಿನಿ ಇವರಿಗೆ ವ್ಯಾಕರಣದ ಬೀಜಮಂತ್ರವನ್ನು ಹೇಳಿ ಜ್ಞಾನವನ್ನು ನೀಡಿದನು. ಇದೇ ಮಹರ್ಷಿ ಪಾಣಿನಿ ಇವರನ್ನು ‘ಆದಿ ವ್ಯಾಕರಣಕಾರ’ರೆಂದು ಗುರುತಿಸಲಾಗುತ್ತದೆ.

ನಾಗ

ಕಾಮ, ಕ್ರೋಧ, ಲೋಭ, ಮದ, ಮೋಹ ಮತ್ತು ಮತ್ಸರ ಈ ೬ ವಿಕಾರಗಳು (ಷಡ್ರಿಪುಗಳು) ನಾಗನಂತೆ ಅತ್ಯಂತ ವಿಷಕಾರಿಯಾಗಿವೆ. ಈ ೬ ರಿಪುಗಳು (ವಿಕಾರಗಳು) ಮಾನವನ ಜೀವನವನ್ನು ನಾಶ ಮಾಡುತ್ತವೆ. ಅವುಗಳ ಹಲ್ಲುಗಳನ್ನು ಕಿತ್ತು ಅವುಗಳನ್ನು ನಾವು ನಮ್ಮ ಆಜ್ಞೆಯಲ್ಲಿ ಮತ್ತು ನಿಯಂತ್ರಣದಲ್ಲಿಟ್ಟುಕೊಂಡು ಕೊರಳಲ್ಲಿ ಧರಿಸಿ ತಿರುಗಾಡಿದರೆ, ಈ ನಾಗ ಅಂದರೆ ೬ ಶತ್ರುಗಳು ಅಪಾಯವನ್ನುಂಟು ಮಾಡುವುದಿಲ್ಲ. ಅದಕ್ಕಾಗಿ ಉಪಯುಕ್ತವಾಗಿದೆ ಆ ತೇಜಸ್ವಿ ಜ್ಞಾನ !

ಚಂದ್ರಕೋರ

ಮಹಾದೇವನ ಮಸ್ತಕದ ಮೇಲೆ ಅರ್ಧಚಂದ್ರನಿದ್ದಾನೆ. ಇದರ ಅರ್ಥ ಮಹಾದೇವನು ಇತರರ ಅಂದರೆ ಉಪಾಸಕರ ಸದ್ಗುಣಗಳನ್ನು ತನ್ನ ಮಸ್ತಕದಲ್ಲಿ ಧರಿಸಿ ದ್ದಾನೆ. ಇದರ ಅರ್ಥ ಇತರರ ಸದ್ಗುಣಗಳನ್ನು ತನ್ನ ತಲೆಯ ಮೇಲೆ ಧರಿಸುವ ಶಕ್ತಿ ಯಾರಲ್ಲಿದೆಯೋ, ಅವನು ನಿಜವಾದ ಜ್ಞಾನಿಯಾಗಿದ್ದಾನೆ. ನಿಜವಾದ ಜ್ಞಾನಿ ಸದ್ಗುಣಗಳನ್ನು ಭೋಗಿಸುವವನಾಗಿರುತ್ತಾನೆ

ನಂದಿ ಮತ್ತು ಆಮೆ

ನಂದಿಯು ಶಿವನ ವಾಹನವಾಗಿದ್ದು ಮತ್ತು ಅದು ಶ್ರಮಜೀವಿಯಾಗಿದೆ. ಶಿವಭಕ್ತನು ಬೌದ್ಧಿಕವಾಗಿ ಶ್ರಮಿಸಲು ಸಿದ್ಧನಿರುತ್ತಾನೆ. ಶಿವಭಕ್ತನು ಶಿವನ ವರೆಗೆ ತಲುಪಲು ಮತ್ತು ಶಿವನಾಗಲು ಬೌದ್ಧಿಕ ಪರಿಶ್ರಮ ಪಡಲು ಸಿದ್ಧನಿರಬೇಕು. ಇದರ ಜೊತೆಗೆ ಶಿವಭಕ್ತನು ಆಮೆಯಂತೆ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿ ಜಿತೇಂದ್ರಿಯನಾಗಲು ಸಿದ್ಧನಿರಬೇಕು, ಅಂದರೆ ಮಾತ್ರ ಶಿವೋಪಾಸನೆಯು ಯಶಸ್ವಿ ಮತ್ತು ಫಲಪ್ರದವಾಗುವುದು. ಅದೇ ರೀತಿ ‘ನಿಧಾನವಾಗಿ, ಶಾಂತವಾಗಿ ಯಾವುದೇ ರೀತಿಯ ಅವಸರ, ಗಡಿಬಿಡಿ ಮಾಡದೇ ಅಖಂಡ ಜಾಗರೂಕನಾಗಿದ್ದು ಅಂತಿಮ ಧ್ಯೇಯವನ್ನು ಪ್ರಾಪ್ತಮಾಡಿಕೊಳ್ಳುವವರೆಗೆ ಸಾಧನೆಯನ್ನು ಮಾಡಬೇಕು’, ಎಂಬ ಸಂದೇಶವನ್ನು ಶಿವಲಿಂಗದ ಎದುರಿಗಿರುವ ಆಮೆಯು ನಮಗೆ ನೀಡುತ್ತದೆ. ಉಪಾಸಕನು ನಂದಿ ಮತ್ತು ಆಮೆಯ ಗುಣವನ್ನು ಸಂಪಾದಿಸಬೇಕು, ಆಗಲೇ ಅವನು ಶಿವನವರೆಗೆ ತಲುಪಿ ಶಿವನಾಗುವನು.

– ಶ್ರೀ. ದುರ್ಗೇಶ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ (೭.೨.೨೦೨೩)