ಮಹಿಳೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಲಾತ್ಕಾರವಲ್ಲ !

  • ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯ !

  • ಅಗತ್ಯವಿದ್ದರೆ ಸಂಸತ್ತು ಕಾನೂನಿಗೆ ಬದಲಾವಣೆಗಳನ್ನು ತರುವಂತೆ ಸೂಚಿಸಿತು !

ನವದೆಹಲಿ – ಒಂದು ಮಹತ್ವದ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಾಲಯವು ‘ನೆಕ್ರೋಫಿಲಿಯಾ’ (ಶವದೊಂದಿಗೆ ಲೈಂಗಿಕ ಸಂಬಂಧ ಹೊಂದುವ ವಿಕೃತಿ) ಅನ್ನು ಬಲಾತ್ಕಾರವೆಂದು ಪರಿಗಣಿಸಲು ನಿರಾಕರಿಸಿದೆ. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ ಅತ್ಯಾಚಾರಕ್ಕೆ ಒಳಪಡುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಈ ಪ್ರಕರಣದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು, ಈ ಅಂಶವನ್ನು ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಕಾನೂನಿನಲ್ಲಿ ಸಂಬಂಧಿತ ಬದಲಾವಣೆಗಳನ್ನು ಮಾಡುವುದು ಸಂಸತ್ತಿನ ಕೆಲಸ’, ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯವು, ಕಾನೂನು ‘ನೆಕ್ರೋಫಿಲಿಯಾ’ವನ್ನು ಅಪರಾಧವೆಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ. ಆದ್ದರಿಂದ, ಆರೋಪಿಯನ್ನು ಮಹಿಳೆಯ ಶವದೊಂದಿಗೆ ಬಲಾತ್ಕಾರದ ಆರೋಪದಿಂದ ಖುಲಾಸೆಗೊಳಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ಆದೇಶದಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಹೇಳಿದೆ.

ಕರ್ನಾಟಕ ಸರಕಾರದ ವಾದ !

ಕರ್ನಾಟಕ ಸರಕಾರದ ಪರವಾಗಿ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ ಪನವಾರ ಅವರು ತಮ್ಮ ವಾದವನ್ನು ಮಂಡಿಸುತ್ತಾ, ಕಲಂ 375(ಎ) ಅಡಿಯಲ್ಲಿ ‘ಬಾಡಿ’ ಎಂಬ ಪದವು ಮೃತ ದೇಹವನ್ನು ಸಹ ಒಳಗೊಂಡಿರಬೇಕು’, ಎಂದು ಹೇಳಿದರು. ಅವರು, ಬಲಾತ್ಕಾರದ ವ್ಯಾಖ್ಯಾನದ 7 ನೇ ವಿವರಣೆಯಲ್ಲಿ ಎಲ್ಲಿ ಮಹಿಳೆಗೆ ಒಪ್ಪಿಗೆ ನೀಡಲು ಸಾಧ್ಯವಾಗುವುದಿಲ್ಲವೋ, ಆ ಪರಿಸ್ಥಿತಿಯನ್ನು ಬಲಾತ್ಕಾರವೆಂದು ಪರಿಗಣಿಸಲಾಗುತ್ತದೆ ಎಂದು ಹೇಳುತ್ತದೆ, ಎಂದು ಹೇಳಿದರು. ಹೀಗಾಗಿ, ಇಲ್ಲಿಯೂ ಸಹ, ಶವವು ಒಪ್ಪಿಗೆ ನೀಡಲು ಸಾಧ್ಯವಾಗುವುದಿಲ್ಲ.

ನ್ಯಾಯವಾದಿ ಪನವಾರ ಅವರು, ನ್ಯಾಯಾಲಯವು ಕಲಂ 375 ಅನ್ನು ಉದಾರವಾಗಿ ಅರ್ಥೈಸಿಕೊಂಡು ಮೃತ ದೇಹಗಳನ್ನು ಸೇರಿಸಬೇಕು ಎಂದು ಹೇಳಿದರು. ಅವರು ಪಂಡಿತ್ ಪರಮಾನಂದ ಕಟಾರಾ ವಿರುದ್ಧ ಭಾರತ ಸಂಘ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ 1995 ರ ತೀರ್ಪನ್ನು ಅವರು ಉಲ್ಲೇಖಿಸಿದರು, ಅದರಲ್ಲಿ ಗೌರವ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವ ಹಕ್ಕು ಮೃತ ದೇಹಗಳಿಗೂ ಅನ್ವಯಿಸಬೇಕು ಎಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ಪೀಠವು ಹೆಚ್ಚುವರಿ ಅಡ್ವೊಕೇಟ್ ಜನರಲ ಅಮನ ಪನವಾರ ಅವರ ವಾದಗಳಿಂದ ಸಮಾಧಾನ ವ್ಯಕ್ತಪಡಿಸಲಿಲ್ಲ ಮತ್ತು ಕರ್ನಾಟಕ ಸರಕಾರದ ಅರ್ಜಿಯನ್ನು ವಜಾಗೊಳಿಸಿತು.

ಯಾವ ಪ್ರಕರಣ ?

ಕರ್ನಾಟಕದಲ್ಲಿ ನಡೆದ ಈ ಪ್ರಕರಣದಲ್ಲಿ, ಆರೋಪಿಯು 21 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದನು. ನಂತರ ಅವನು ಶವದೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ಕೆಳ ನ್ಯಾಯಾಲಯವು ಆರೋಪಿಯನ್ನು ಐಪಿಸಿ ಸೆಕ್ಷನ್( ಭಾ.ದಂ.ವಿ.) 302 ರ ಅಡಿಯಲ್ಲಿ ಕೊಲೆ ಮತ್ತು ಕಲಂ 375 ರ ಅಡಿಯಲ್ಲಿ ಬಲಾತ್ಕಾರದ ಆರೋಪದಲ್ಲಿ ದೋಷಿಯೆಂದು ತೀರ್ಪು ನೀಡಿತ್ತು.

ಇದಾದ ನಂತರ, ಪ್ರಕರಣ ಉಚ್ಚನ್ಯಾಯಾಲಯಕ್ಕೆ ಹೋಯಿತು. ಕರ್ನಾಟಕ ಉಚ್ಚನ್ಯಾಯಾಲಯವು ಮೇ 2023 ರಲ್ಲಿ ತೀರ್ಪು ನೀಡಿದ್ದು, ‘ನೆಕ್ರೋಫಿಲಿಯಾ’ ಭಾರತೀಯ ದಂಡ ಸಂಹಿತೆಯ ಕಲಂ 375 ರ ಅಡಿಯಲ್ಲಿ ಬಲಾತ್ಕಾರದ ಶ್ರೇಣಿಯಲ್ಲಿ ಅಥವಾ ಕಲಂ 377 ರ ಅಡಿಯಲ್ಲಿ ಅಸ್ವಾಭಾವಿಕ ಲೈಂಗಿಕತೆಯ ಅಪರಾಧದಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ನಂತರ ಉಚ್ಚನ್ಯಾಯಾಲಯವು ಆರೋಪಿಯನ್ನು ಕೊಲೆಯ ಅಪರಾಧಿ ಎಂದು ತೀರ್ಪು ನೀಡಿತು; ಆದರೆ ಅವನನ್ನು ಬಲಾತ್ಕಾರದ ಆರೋಪದಿಂದ ಮುಕ್ತಗೊಳಿಸಿತ್ತು.

ಬಲಾತ್ಕಾರದ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ ಉಚ್ಚನ್ಯಾಯಾಲಯದ ತೀರ್ಪನ್ನು ಕರ್ನಾಟಕ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.