Mahakumbh Stampede : ಮಹಾಕುಂಭ ದುರಂತ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ನ್ಯಾಯಾಂಗ ತನಿಖೆಗೆ ಆದೇಶ !

ಮೃತರ ಕುಟುಂಬಗಳಿಗೆ ತಲಾ ೨೫ ಲಕ್ಷ ರೂಪಾಯಿ ನೆರವು ಘೋಷಣೆ !

ಪ್ರಯಾಗರಾಜ – ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ೩ ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಾಹಿತಿ ನೀಡಿದ್ದಾರೆ. ಮಾಜಿ ನ್ಯಾಯಾಧೀಶ ಹರ್ಷ ಕುಮಾರ ಇವರು ಈ ವಿಚಾರಣಾ ಆಯೋಗದ ಅಧ್ಯಕ್ಷರಾಗಿರುತ್ತಾರೆ ಹಾಗೂ ಮಾಜಿ ಮಹಾನಿರ್ದೇಶಕ ವಿ.ಕೆ. ಗುಪ್ತಾ ಮತ್ತು ನಿವೃತ್ತ ಐಎಎಸ್ ಡಿ.ಕೆ. ಸಿಂಗ್ ಇವರು ಆಯೋಗದಲ್ಲಿ ಇರುವರು. ಈ ಆಯೋಗವು ತನ್ನ ವರದಿಯನ್ನು ಕಾಲಮಿತಿಯೊಳಗೆ ಸಲ್ಲಿಸಲಿದೆ. ಅಪಘಾತದ ಕಾರಣಗಳ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮೃತರ ಕುಟುಂಬಗಳಿಗೆ ತಲಾ ೨೫ ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ತನಿಖೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವೆವು ! – ಮಾಜಿ ನ್ಯಾಯಾಧೀಶ ಹರ್ಷ ಕುಮಾರ

ಕಾಲ್ತುಳಿತ ಘಟನೆಯ ನ್ಯಾಯಾಂಗ ತನಿಖೆಯನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಮಾಜಿ ನ್ಯಾಯಮೂರ್ತಿ ಹರ್ಷ ಕುಮಾರ್ ಇವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸರಕಾರವು, ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆಯೋಗಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಜನವರಿ ೩೧ ರಂದು ಆಯೋಗದ ಸದಸ್ಯರು ಘಟನಾ ಸ್ಥಳಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.