Bangladesh Protest: ಬಾಂಗ್ಲಾದೇಶದಲ್ಲಿ ಈಗ ರಾಷ್ಟ್ರಪತಿಗಳ ವಿರುದ್ಧವೇ ಪ್ರತಿಭಟನೆ

  • ರಾಷ್ಟ್ರಪತಿಯವರು ಶೇಖ ಹಸೀನಾ ರಾಜೀನಾಮೆಯ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದ್ದರಿಂದ ವಿವಾದ

  • ಪ್ರತಿಭಟನಾಕಾರರಿಂದ 2 ದಿನಗಳಲ್ಲಿ ರಾಷ್ಟ್ರಪತಿಗಳ ಪದಚ್ಯುತಿಗೆ ಬೇಡಿಕೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಆಗಸ್ಟ ತಿಂಗಳಿನಲ್ಲಿ ತಥಾಕಥಿತ ವಿದ್ಯಾರ್ಥಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಪ್ರಧಾನಿ ಶೇಖ ಹಸೀನಾ ಇವರಿಗೆ ದೇಶವನ್ನು ತೊರೆದು ಭಾರತದಲ್ಲಿ ಆಶ್ರಯವನ್ನು ಪಡೆಯಬೇಕಾಯಿತು. ಈಗ ಎರಡೂವರೆ ತಿಂಗಳಿನ ಬಳಿಕ ಬಾಂಗ್ಲಾದೇಶ ರಾಷ್ಟ್ರಪತಿ ಮಹಮದ ಶಹಾಬುದ್ಧೀನ ಇವರ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿದ್ದು, ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅಕ್ಟೋಬರ 22 ರ ರಾತ್ರಿ ಪ್ರತಿಭಟನಾಕಾರರು ರಾಷ್ಟ್ರಪತಿಗಳ ನಿವಾಸಸ್ಥಾನ ವಂಗಭವನವನ್ನು ತಲುಪಿದ್ದಾರೆ. ಅವರಿಗೆ ಸೇನೆಯು ದಾರಿಯಲ್ಲಿ ತಡೆಯಿತು. ಪ್ರತಿಭಟನಾಕಾರರ ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು. ಇಲ್ಲಿ ಕಾಲ್ತುಳಿತದಲ್ಲಿ ಕನಿಷ್ಟ 5 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಅವರ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗಿದೆಯೆಂದು ಪೊಲೀಸರು ಹೇಳಿದರು. ಈ ಪ್ರತಿಭಟನಾಕಾರರು 5 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. 2 ದಿನಗಳ ಹಿಂದೆ ರಾಷ್ಟ್ರಪತಿ ಮಹಮ್ಮದ ಶಹಾಬುದ್ಧೀನ ಇವರು ಒಂದು ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ, ಶೇಖ ಹಸೀನಾ ಇವರು ಪ್ರಧಾನಿ ಹುದ್ದೆಯ ರಾಜೀನಾಮೆ ನೀಡಿರುವುದನ್ನು ನಾನು ಇತ್ತೀಚೆಗೆ ಕೇಳಿದ್ದೇನೆ; ಆದರೆ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆ ನನ್ನ ಬಳಿ ಇಲ್ಲ. ಅವರ ರಾಜೀನಾಮೆಯನ್ನು ಪಡೆಯಲು ನಾನು ಬಹಳ ಸಲ ಪ್ರಯತ್ನಿಸಿದ್ದೆನು; ಆದರೆ ಬಹುಶಃ ಅವರಿಗೆ ಇದಕ್ಕೆ ಸಮಯವಿರಲಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಯಿಂದ ವಿರೋಧಿ ಪಕ್ಷ ಮತ್ತು ಸಂಘಟನೆಗಳು ಆಕ್ರೋಶಗೊಂಡರು ಮತ್ತು ಅವರು ರಾಷ್ಟ್ರಪತಿ ಶಹಾಬುದ್ಧೀನ ಇವರ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಪ್ರಾರಂಭಿಸಿದರು. `ರಾಷ್ಟ್ರಪತಿಗಳು ಹುದ್ದೆಯಲ್ಲಿ ಉಳಿಯುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅವರು 2 ದಿನದಲ್ಲಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.