ಬಾಂಬ್ ಸ್ಫೋಟದ ಹೊಣೆ ವಹಿಸಿಕೊಂಡ ಬಲೂಚ್ ಲಿಬರೇಶನ್ ಆರ್ಮಿ !
ಕರಾಚಿ (ಪಾಕಿಸ್ತಾನ) – ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಲ್ಲಿ ಹಲವು ವಾಹನಗಳಿಗೆ ಹಾನಿಯಾಗಿದೆ. ‘ಪೋರ್ಟ್ ಖಾಸಿಮ್ ಎಲೆಕ್ಟ್ರಿಕ್ ಪವರ್ ಕಂಪನಿ (ಪ್ರೈ) ಲಿಮಿಟೆಡ್’ನ ಚೀನಾದ ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನದ ಮೇಲೆ ರಾತ್ರಿ 11 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿದೆ, ಎಂದು ಚೀನಾ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಈ ಸ್ಫೋಟದಲ್ಲಿ ಪಾಕಿಸ್ತಾನದ ಕೆಲವು ಸೈನಿಕರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ವರದಿಯಲ್ಲಿ ಚೀನಾದ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗಿದೆ. ಪಾಕಿಸ್ತಾನಿ ಅಧಿಕಾರಿಗಳು ಆರಂಭದಲ್ಲಿ ಸ್ಫೋಟಕ್ಕೆ ತೈಲ ಟ್ಯಾಂಕರ್ ಕಾರಣವೆಂದು ಹೇಳಿದರು; ಆದರೆ ಬಲೂಚ್ ಲಿಬರೇಶನ್ ಆರ್ಮಿ ಈ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಅವರ ಸದಸ್ಯರೊಬ್ಬರು ಆತ್ಮಘಾತುಕ ಸ್ಫೋಟ ಘಟಿಸಲು ಕಾರಣರಾಗಿದ್ದರು ಎಂದು ಹೇಳಿದರು.