ಮಹಾರಾಷ್ಟ್ರ ಸರಕಾರದಿಂದ ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಮಾನ್ಯತೆ !

ಮುಂಬಯಿ – ಮಹಾರಾಷ್ಟ್ರ ಸರಕಾರವು ಸ್ಥಳೀಯ ಗೋವುಗಳನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸಲು ಮಾನ್ಯತೆ ನೀಡಿದೆ. ಮಹಾರಾಷ್ಟ್ರ ಸರಕಾರವು ಸಪ್ಟೆಂಬರ 30 ರಂದು ಈ ವಿಷಯದ ಆದೇಶ ಹೊರಡಿಸಿದೆ.

ದೇಶಿ ಹಸುಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವೈದಿಕ ಕಾಲದಿಂದ ಇರುವ ಸ್ಥಾನ, ದೇಶಿ ಗೋವಿನ ಹಾಲು ಮಾನವನ ಆಹಾರದಲ್ಲಿ ಉಪಯುಕ್ತತೆ, ಆಯುರ್ವೇದ ಚಿಕಿತ್ಸಪದ್ಧತಿ, ಪಂಚಗವ್ಯ ಉಪಚಾರಪದ್ಧತಿ ಹಾಗೆಯೇ ಗೋವಿನ ಸೆಗಣಿ ಮತ್ತು ಗೋಮೂತ್ರ ಇವುಗಳ ಸಾವಯವ ಗೊಬ್ಬರದ ಮಹತ್ವದ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಗೋವನ್ನು `ರಾಜ್ಯಮಾತೆ- ಗೋಮಾತೆ’ ಎಂದು ಘೋಷಿಸಲಾಗಿದೆಯೆಂದು ಸರಕಾರದ ಆದೇಶದಲ್ಲಿ ನಮೂದಿಸಿದೆ.

ಪ್ರಾಚೀನ ಕಾಲದಿಂದಲೂ, ಮಾನವನ ದಿನನಿತ್ಯದ ಜೀವನದಲ್ಲಿ ಗೋವಿನ ಅಸಾಧಾರಣ ಮಹತ್ವವಿದೆ. ವೈದಿಕ ಕಾಲದಿಂದಲೂ ಗೋವಿನ ಧಾರ್ಮಿಕ, ವೈಜ್ಞಾನಿಕ ಮತ್ತು ಆರ್ಥಿಕ ಮಹತ್ವವನ್ನು ಗಮನಿಸಿ, ಅದನ್ನು `ಕಾಮಧೇನು’ ಎಂದು ಸಂಬೋಧಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಿವಿಧ ದೇಶಿ ಜಾತಿಯ ಗೋವುಗಳು ಕಂಡು ಬರುತ್ತವೆ. ಮರಾಠವಾಡಾದಲ್ಲಿ `ದೇವಣಿ’ `ಲಾಲಕಂಧಾರಿ’ ಪಶ್ಚಿಮ ಮಹಾರಾಷ್ಟ್ರದಲ್ಲಿ `ಖಿಲ್ಲಾರ’ ಉತ್ತರ ಮಹಾರಾಷ್ಟ್ರದಲ್ಲಿ `ಡಾಂಗಿ’ ಹಾಗೂ ವಿದರ್ಭದಲ್ಲಿ `ಗವಳಾವೂ’ ಈ ಪ್ರಕಾರದ ದೇಶಿ ಗೋವುಗಳು ಕಂಡು ಬರುತ್ತವೆ. ಮನುಷ್ಯರಿಗೆ ಆಹಾರದಲ್ಲಿ ಪೌಷ್ಟಿಕತೆಯ ದೃಷ್ಟಿಯಿಂದ ದೇಶಿ ಹಸುವಿನ ಹಾಲು ಮಹತ್ವವಿದೆ. ಇದರಿಂದ ಹಸುವಿನ ಹಾಲನ್ನು `ಸಂಪೂರ್ಣ ಆಹಾರ’ ಎಂದು ಹೇಳಲಾಗುತ್ತದೆ; ಆದರೆ ದಿನದಿಂದ ದಿನಕ್ಕೆ ದೇಶಿ ಹಸುವಿನ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪಾಲನೆ ಪೋಷಣೆಗೆ ಪ್ರೇರೇಪಿಸಲು ದೇಶಿ ಹಸುವನ್ನು `ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸಲಾಗಿದೆ ಎಂದು ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಂಪಾದಕೀಯ ನಿಲುವು

ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು !