Child Watching Porn is crime : ಚಿಕ್ಕ ಮಕ್ಕಳ ಅಶ್ಲೀಲ ವಿಡಿಯೋ ಡೌನ್ಲೋಡ್ ಮಾಡುವುದು ಅಥವಾ ನೋಡುವುದು ಅಪರಾಧ

ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ !

ನವ ದೆಹಲಿ – ಚಿಕ್ಕ ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅದನ್ನು ನೋಡುವುದು ಪೊಕ್ಸೊ ಕಾಯಿದೆಯಡಿ ಅಪರಾಧವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯವು ಈ ರೀತಿ ಮಾಡುವುದು ಅಪರಾಧವಲ್ಲವೆಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಈಗ ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಹಾಗೆಯೇ ದೇಶದ ಯಾವುದೇ ನ್ಯಾಯಾಲಯವು `ಚೈಲ್ಡ್ ಪೋರ್ನೊಗ್ರಾಫಿ’ ಪದವನ್ನು ಬಳಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಇನ್ನುಮುಂದೆ ‘ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಯ ವಸ್ತು’ ಎಂದು ಉಪಯೋಗಿಸುವಂತೆ ಆದೇಶಿಸಿದೆ. ಹಾಗೆಯೇ ಈ ಶಬ್ದ ಉಪಯೋಗಿಸಲು ಪೊಕ್ಸೊ ಕಾಯ್ದೆಯಲ್ಲಿ ತಿದ್ದುಪಡಿ ತರುವುದು ಅಗತ್ಯ ಎಂದು ನ್ಯಾಯಾಲಯ ಹೇಳಿದೆ.

ನಾವು ಸಂಸತ್ತಿಗೆ ಪೋಕ್ಸೋ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ತಿಳಿಸಿದ್ದೇವೆ. ಆದ್ದರಿಂದ, `ಚೈಲ್ಡ್ ಪೊರ್ನೊಗ್ರಾಫಿ’ಯ ವ್ಯಾಖ್ಯಾನವು ಇನ್ನು ಮುಂದೆ ‘ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ವಸ್ತು’ ಎಂದು ಸಂಬೋಧಿಸಲಾಗುವುದು. ಈ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವಂತೆ ನಾವು ಸೂಚನೆ ನೀಡಿದ್ದೇವೆ. ಹಾಗೆಯೇ ಯಾವುದೇ ಆದೇಶದಲ್ಲಿ `ಚೈಲ್ಡ್ ಪೋರ್ನೊಗ್ರಾಫಿ’ ಯನ್ನು ಉಲ್ಲೇಖಿಸದಂತೆ ನಾವು ಎಲ್ಲ ನ್ಯಾಯಾಲಯಗಳಿಗೆ ತಿಳಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

28 ವರ್ಷದ ಯುವಕನೊಬ್ಬನ ವಿರುದ್ಧ ಚೈಲ್ಡ್ ಪೋರ್ನೊಗ್ರಾಫಿಗೆ ಸಂಬಂಧಿಸಿದ ಮಾಹಿತಿ ಮೊಬೈಲ್ ನಲ್ಲಿ ಇಟ್ಟಿರುವ ಸಂದರ್ಭದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನಡೆದಿತ್ತು. ಉಚ್ಚನ್ಯಾಯಾಲಯವು ಆರೋಪಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತ್ತು. ಉಚ್ಚನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಸಂಮಪಾದಕೀಯ ನಿಲುವು

ಯಾವುದೇ ಅಶ್ಲೀಲ ವಿಡಿಯೋ ನೋಡುವುದು ಮತ್ತು ಅದನ್ನು ಡೌನ್ಲೋಡ್ ಮಾಡುವುದನ್ನು ಅಪರಾಧವೆಂದು ಪರಿಗಣಿಸಬೇಕು. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿ `ಅಪ್ರಾಪ್ತ ಮಕ್ಕಳು ಕೂಡ ಯುವತಿಯರ ಮೇಲೆ ಬಲಾತ್ಕಾರ ಮಾಡಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಆದುದರಿಂದ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕವಾಗಿದೆ.