ಕೋಲಕಾತಾದಲ್ಲಿ ವೈದ್ಯರ ಮುಷ್ಕರ 41 ದಿನಗಳ ನಂತರ ಹಿಂಪಡೆಯಲಾಯಿತು

ಮಹಿಳಾ ವೈದ್ಯೆಯ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣ

ಕೋಲಕಾತಾ (ಬಂಗಾಳ) – ಇಲ್ಲಿನ ರಾಧಾ ಗೋಬಿಂದ ಕರ ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಬಲಾತ್ಕಾರ ಮತ್ತು ಹತ್ಯೆಯ ನಂತರ ಕಿರಿಯ ವೈದ್ಯರು ಮತ್ತು ಇತರ ಸಹೋದ್ಯೋಗಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಕಳೆದ 41 ದಿನಗಳಿಂದ ನಡೆಯುತ್ತಿದ್ದ ಈ ಮುಷ್ಕರವನ್ನು ಇದೀಗ ಹಿಂಪಡೆಯಲಾಗಿದೆ. ಸೆಪ್ಟೆಂಬರ್ 21 ರಿಂದ ಎಲ್ಲಾ ವೈದ್ಯರು ಕೆಲಸಕ್ಕೆ ಹಿಂತಿರುಗಲಿದ್ದಾರೆ. 2 ದಿನಗಳ ಹಿಂದೆ ಈ ವೈದ್ಯರ ನಿಯೋಗ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚೆ ನಡೆಸಿತ್ತು. ತದನಂತರ ವೈದ್ಯರು ಮುಷ್ಕರ ಹಿಂಪಡೆಯುವುದಾಗಿ ಘೋಷಿಸಿದರು. ಈ ವೈದ್ಯರ ಹೆಚ್ಚಿನ ಬೇಡಿಕೆಗಳನ್ನು ಮಮತಾ ಬ್ಯಾನರ್ಜಿ ಸರಕಾರ ಒಪ್ಪಿಕೊಂಡಿದೆ.

ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರಲ್ಲಿ ಡಾ. ಅಕಿಬ್ ಅವರು ಮಾತನಾಡಿ, ಪ್ರತಿಭಟನೆಯ ಅವಧಿಯಲ್ಲಿ ಕಿರಿಯ ವೈದ್ಯರ ಒಕ್ಕೂಟವು ಅನೇಕ ವಿಷಯಗಳಿಗೆ ಸರಕಾರದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನಾವು ಕೋಲಕಾತಾ ಪೊಲೀಸ್ ಆಯುಕ್ತರು, ಆರೋಗ್ಯ ಇಲಾಖೆಯ ಮಹಾನಿರ್ದೇಶಕರು ಮತ್ತು ಇತರ ಅಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಮಾಡಿದೆವು. ನಾವು ಮುಷ್ಕರವನ್ನು ಹಿಂಪಡೆದಿದ್ದೇವೆ ಆದರೆ ನಮ್ಮ ಪ್ರತಿಭಟನೆ ಮುಗಿದಿಲ್ಲ. ಪ್ರತಿಭಟನೆಯನ್ನು ಹೊಸ ರೀತಿಯಲ್ಲಿ ಮುನ್ನಡೆಸುತ್ತೇವೆ. ಸೆಪ್ಟೆಂಬರ್ 21 ರಿಂದ ನಾವು ಆಸ್ಪತ್ರೆಯಲ್ಲಿ ಕೆಲಸಕ್ಕೆ ಮರಳುತ್ತೇವೆ. ಕೆಲಸ ಆರಂಭಿಸಿದನಂತರ ಆಡಳಿತದ ಕಡೆ ನಮ್ಮ ಗಮನ ಇರಲಿದೆ. ನಮಗೆ ಏನಾದರೂ ತಪ್ಪು ಕಂಡು ಬಂದರೆ ಹೊಸ ಹುರುಪಿನಿಂದ ಮತ್ತೆ ಮೈದಾನಕ್ಕೆ ಇಳಿಯುತ್ತೇವೆ ಎಂದು ಹೇಳಿದ್ದಾರೆ.