ಅನಂತ ಚತುರ್ದಶಿ ವ್ರತ

ಅನಂತ ಚತುರ್ದಶಿ ವ್ರತ (ಸೆಪ್ಟೆಂಬರ್‌ ೧೭) ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಇದರ ಅವಧಿ ೧೪ ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ. ಈ ವ್ರತವನ್ನು ಯಾರಾದರೂ ಮಾಡಲು ಸೂಚಿಸಿದರೆ ಅಥವಾ ಅನಂತ ವ್ರತದ ದಾರ ದೊರೆತರೆ ಮಾಡುತ್ತಾರೆ.

ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.

ಅ. ಲೌಕಿಕ ಇಚ್ಛೆ ಆಕಾಂಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತದೆ. ಅನಂತಪೂಜೆ ಮಾಡುವುದು ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು. ಅನಂತ ವ್ರತದ ಪ್ರಧಾನ ದೇವರು ಅನಂತ, ಅಂದರೆ ಭಗವಾನ ಶ್ರೀ ವಿಷ್ಣು. ಯಮುನಾ ಮತ್ತು ಶೇಷನಾಗ ದೇವತೆಗಳು ಈ ಪೂಜೆಯ ಗೌಣ ದೇವತೆಗಳಾಗಿರುತ್ತಾರೆ.

ಆ. ಸಾಧ್ಯವಾದಷ್ಟು ಅನಂತನ ವ್ರತದ ಪೂಜೆಯನ್ನು ದಂಪತಿಗಳು ನಡೆಸಬೇಕು. ಅಸಾಧಾರಣ ಸನ್ನಿವೇಶಗಳಲ್ಲಿ ಪುರುಷ ಅಥವಾ ಮಹಿಳೆ ಒಬ್ಬರೇ ಪೂಜೆ ಮಾಡಬಹುದು. ಪೂಜೆಯನ್ನು ಹೇಗೆ ನಡೆಸಬೇಕು ಎಂದು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ.

೧. ಕಳೆದುಹೋದ ಸಮೃದ್ಧಿಯನ್ನು ಮರಳಿ ಪಡೆಯಲು ಈ ಪೂಜೆಯ ಸಂಕಲ್ಪವನ್ನು ಮಾಡಲಾಗುತ್ತದೆ.
೨. ಶಾಸ್ತ್ರೊಕ್ತವಾಗಿ ಶ್ರೀ ಯಮುನಾ ದೇವಿಯ ಷೋಡಶೋಪಚಾರ ಪೂಜೆ ನಡೆಸಲಾಗುತ್ತದೆ.
೩. ಮೊದಲು ಶ್ರೀ ಯಮುನಾದೇವಿಗೆ ಆಸನವನ್ನು ನೀಡಬೇಕು.
೪. ಶ್ರೀ ಯಮುನಾ ದೇವಿಯ ಪವಿತ್ರ ಪಾದಗಳನ್ನು ತೊಳೆಯಬೇಕು.
೫. ನಂತರ, ಅರ್ಘ್ಯವನ್ನು ನೀಡಬೇಕು.
೬. ನಂತರ, ಐದು ಪದಾರ್ಥಗಳೊಂದಿಗೆ ಸ್ನಾನ ಅರ್ಪಿಸಬೇಕು.
೭. ದೇವಿಗೆ ಜಲಾಭಿಷೇಕ ಮಾಡಬೇಕು.
೮. ವ್ರತವನ್ನು ಆಚರಿಸುತ್ತಿರುವ ಮಹಿಳೆ ಅರಿಶಿನ-ಕುಂಕುಮವನ್ನು ಶ್ರೀ ಯಮುನಾ ದೇವಿಗೆ ಅರ್ಪಿಸಬೇಕು.
೯. ನಂತರ ಕಳಶದಲ್ಲಿ ಅಕ್ಷತೆಗಳನ್ನು ಅರ್ಪಿಸಿ ಶ್ರೀ ಯಮುನಾ ದೇವಿಯ ಅಂಗ-ಪೂಜೆ ಮಾಡಲಾಗುತ್ತದೆ.
೧೦. ಧೂಪ, ಆರತಿ, ನೈವೇದ್ಯ ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಬೇಕು.

ಇ. ಶೇಷನಾಗನ ಪೂಜೆ – ಇದರಲ್ಲಿ ದರ್ಭೆಯಿಂದ ಮಾಡಿದ ಏಳು ಹೆಡೆಗಳ ನಾಗರಹಾವನ್ನು ಶೇಷನಾಗನ ಸಂಕೇತವಾಗಿ ತಯಾರಿಸಿ ಅದರ ಶಾಸ್ತ್ರೊಕ್ತ ಪೂಜೆ ನಡೆಸಲಾಗುತ್ತದೆ.

೧. ಮೊದಲು ಶೇಷನಾಗನನ್ನು ಆಹ್ವಾನಿಸಲಾಗುತ್ತದೆ.
೨. ಶೇಷನಾಗನಿಗೆ ಆಸನವನ್ನು ನೀಡಿ ನಂತರ, ಪಾದ್ಯಪೂಜೆ, ಅರ್ಘ್ಯ ಅರ್ಪಿಸಲಾಗುತ್ತದೆ.
೩. ಶೇಷನಾಗನ ಅಂಗ-ಪೂಜೆ ಮಾಡಲಾಗುತ್ತದೆ.
೪. ಶೇಷನಾಗನ ಏಳು ಹೆಡೆಗಳನ್ನು ಪೂಜಿಸಲಾಗುತ್ತದೆ.
೫. ನಂತರ ಶೇಷನಾಗನ ನಾಮಪೂಜೆ ಮಾಡಲಾಗುತ್ತದೆ.
೬. ಕೊನೆಯಲ್ಲಿ ಧೂಪ, ದೀಪ, ನೈವೇದ್ಯ ಇತ್ಯಾದಿ ಅರ್ಪಿಸಿ ಪೂಜೆಯನ್ನು ಮುಕ್ತಾಯಗೊಳಿಸಲಾಗುತ್ತದೆ.