ಶ್ರೀ ಗಣೇಶನ ವಿವಿಧ ವ್ರತಗಳು ಮತ್ತು ಸ್ತೋತ್ರಗಳು

ಶ್ರೀ ಗಣೇಶನ ‘ಸಂಕಷ್ಟಿ ಚತುರ್ಥಿ ವ್ರತ’, ‘ದೂರ್ವಾ (ಗರಿಕೆ) ಗಣಪತಿ ವ್ರತ’, ‘ಸಿದ್ಧಿವಿನಾಯಕ ವ್ರತ’, ‘ವರದ ಚತುರ್ಥಿ ವ್ರತ’, ‘ಸಂಕಷ್ಟಹರ ಗಣಪತಿ ವ್ರತ’, ‘ಅಂಗಾರಕಿ ಚತುರ್ಥಿ ವ್ರತ’ ಇತ್ಯಾದಿ ವ್ರತಗಳು ಪ್ರಸಿದ್ಧವಾಗಿವೆ. ‘ಅಥರ್ವಶೀರ್ಷ’ ಸಂಕಟನಾಶಕ ಸ್ತೋತ್ರವನ್ನು ಪ್ರತಿದಿನ ಭಕ್ತಿಭಾವದಿಂದ ಹೇಳಿದರೆ ೬ ತಿಂಗಳುಗಳಲ್ಲಿ ಫಲಪ್ರಾಪ್ತಿಯಾಗುತ್ತದೆ’, ಎಂಬ ಉಲ್ಲೇಖವಿದೆ. ‘ಗಣಪತಿಯ ೨೧, ೧೦೮ ಅಥವಾ ಸಾವಿರ ಹೆಸರುಗಳನ್ನು ಸಂಕಲ್ಪಪೂರ್ವಕ ಹೇಳಿ ಹೋಮಹವನ ಮಾಡಿದರೆ ಇಚ್ಛಿತ ಫಲಪ್ರಾಪ್ತಿಯಾಗುವುದು’, ಎಂಬ ಉಲ್ಲೇಖವೂ ಇದೆ. ‘ಗಣೇಶ ಉಪನಿಷದ್‌’ನಲ್ಲಿ ‘ವಿನಾಯಕ ಮಂತ್ರ’ವನ್ನು ಹೇಳಲಾಗಿದೆ. ಅದರ ವಿಧಿಪೂರ್ವಕ ಪೂಜೆಯನ್ನು ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ, ಎಂದು ಅದರಲ್ಲಿ ಉಲ್ಲೇಖವಿದೆ. ಗಣೇಶಮಾಲಾ ಮಂತ್ರ, ಗಣೇಶಸಾಮ, ಗಣೇಶ ಅನುಷ್ಟುಭು ಮಂತ್ರದ ಜಪ, ಇವು ಸಹ ಪ್ರಭಾವಿ ಸಾಧನಗಳಾಗಿವೆ.

೧. ಸಂಕಷ್ಟಿ ಚತುರ್ಥಿಯ ವ್ರತ

ನೀರಿನಲ್ಲಿ ಬಿಳಿ ಎಳ್ಳು ಹಾಕಿ ಸ್ನಾನ ಮಾಡಿದ ನಂತರ ಸಂಕಲ್ಪ ಮಾಡಿ ಗಣೇಶನ ಧ್ಯಾನವನ್ನು ಮಾಡಬೇಕು. ಗೋಮಯದಿಂದ ಸಾರಿಸಿದ ಭೂಮಿಯ ಮೇಲೆ ಗಣೇಶಪೀಠವನ್ನು ತಯಾರಿಸ ಬೇಕು. ಅಲ್ಲಿ ಪಂಚರತ್ನಯುಕ್ತ ಕಲಶವನ್ನು ಸ್ಥಾಪಿಸಬೇಕು. ಅದರ ಮೇಲೆ ಒಂದು ಪಾತ್ರೆಯನ್ನಿಟ್ಟು ಅದನ್ನು ಬಟ್ಟೆಯಿಂದ ಮುಚ್ಚ ಬೇಕು ಮತ್ತು ಅದರ ಮೇಲೆ ಗಣೇಶನ ಮೂರ್ತಿಯನ್ನಿಡಬೇಕು. ಪುರುಷಸೂಕ್ತವನ್ನು ಹೇಳಿ ಪೂಜೆಯನ್ನು ಮಾಡಬೇಕು. ಗಣೇಶನ ೨೧ ಹೆಸರುಗಳನ್ನು ಉಚ್ಚರಿಸಿ ೨೧ ಗರಿಕೆಗಳನ್ನು ಅರ್ಪಿಸಬೇಕು. ಆರತಿ, ಮಂತ್ರಪುಷ್ಪ, ೨೧ ಪ್ರದಕ್ಷಿಣೆ, ಅರ್ಘ್ಯಪ್ರದಾನ ಮತ್ತು ಮಹಾಪ್ರಸಾದ ಮಾಡಬೇಕು. ‘ಪಾರ್ವತಿ, ಅಗಸ್ತಿ, ದಮಯಂತಿ, ಪ್ರದ್ಯುಮ್ನ, ಶ್ರೀಕೃಷ್ಣ ಮುಂತಾದವರು ಈ ‘ಸಂಕಷ್ಟ ಚತುರ್ಥಿ ವ್ರತ’ ಮಾಡಿದ್ದರು’, ಎಂದು ಹೇಳಲಾಗುತ್ತದೆ. ಒಂದನೇ, ಐದನೇ ಅಥವಾ ಏಳನೇ ತಿಂಗಳಲ್ಲಿ ಈ ವ್ರತದ ಉದ್ಯಾಪನೆ ಮಾಡಬೇಕು.

೨. ಅಂಗಾರಕಿ ಚತುರ್ಥಿ ವ್ರತ

ಸಂಕಷ್ಟಿಯ ಉಪವಾಸವನ್ನು ಚಂದ್ರೋದಯ ಆದನಂತರ ಬಿಡುವುದಿರುತ್ತದೆ. ಪ್ರತಿಯೊಂದು ಊರಿನ ಚಂದ್ರೋದಯದ ಸಮಯವು ಬೇರೆ ಬೇರೆಯಾಗಿರುತ್ತದೆ. ‘ದಿನವಿಡಿ ಉಪವಾಸ ಮಾಡಿ ಚಂದ್ರದರ್ಶನದ ನಂತರ ಗಣಪತಿಯ ಪೂಜೆ ಮತ್ತು ಸ್ಮರಣೆ ಮಾಡಿ ಉಪವಾಸವನ್ನು ಬಿಡಬೇಕು’, ಇದು ಅಂಗಾರಕಿ ಚತುರ್ಥಿ ವ್ರತದ ವಿಧಿಯಾಗಿದೆ.

೩. ದೂರ್ವೆ (ಗರಿಕೆ) ಗಣಪತಿ ವ್ರತ

ರವಿವಾರದಂದು ವಿನಾಯಕಿ ಚತುರ್ಥಿ ಬಂದರೆ, ಅಂದರೆ ಆ ದಿನದಿಂದ ಮುಂದೆ ೬ ತಿಂಗಳು ಅಥವಾ ಶ್ರಾವಣ ಶುಕ್ಲ ಚತುರ್ಥಿಯವರೆಗೆ ಈ ವ್ರತವನ್ನು ಮಾಡುತ್ತಾರೆ. ಈ ೬ ತಿಂಗಳು ಗಳಲ್ಲಿ ಪ್ರತಿ ವಿನಾಯಕಿ ಚತುರ್ಥಿಗೆ ೨೧ ಅಥವಾ ೨೧ ಸಾವಿರಗರಿಕೆ ಅಥವಾ ಅಷ್ಟು ಗರಿಕೆಗಳ ಕಟ್ಟುಗಳನ್ನು ಗಣಪತಿಗೆ ಅರ್ಪಿಸುತ್ತಾರೆ.

೪. ಸಿದ್ಧಿವಿನಾಯಕ ವ್ರತ

ಬಲಸೊಂಡಿಲ ಗಣಪತಿಗೆ ‘ಸಿದ್ಧಿವಿನಾಯಕ’ ಎಂದು ಕರೆಯುತ್ತಾರೆ. ‘ಸಿದ್ಧಿವಿನಾಯಕ’ ಹೆಸರಿನ ವ್ರತವಿದೆ. ಶುಕ್ಲ ಚತುರ್ಥಿಗೆ ವ್ರತಧಾರಕನು ನೀರಿನಲ್ಲಿ ಎಳ್ಳು ಹಾಕಿ ಸ್ನಾನ ಮಾಡ ಬೇಕು. ಬಂಗಾರದ ಅಥವಾ ಬೆಳ್ಳಿಯ ಗಣೇಶನ ವಿಗ್ರಹಕ್ಕೆ ಗಣಪತಿ, ಗಣರಾಜ, ಗಣಾಧ್ಯಕ್ಷ, ವಿನಾಯಕ, ವಿಘ್ನಹರ, ಉಮಾಪ್ರಿಯ, ರುದ್ರಪ್ರಿಯ ಮುಂತಾದ ಹೆಸರುಗಳಿಂದ ಯಥಾವಿಧಿ ಪೂಜೆ ಯನ್ನು ಮಾಡಬೇಕು. ಅವನಿಗೆ ೨೧ ಮೋದಕಗಳ ನೈವೇದ್ಯವನ್ನು ಅರ್ಪಿಸಬೇಕು. ಮಹಾಭಾರತದ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನ ಹೇಳಿಕೆಯ ಮೇರೆಗೆ ಧರ್ಮರಾಜನು ಅಂದರೆ ಯುಧಿಷ್ಠಿರನು, ಈ ವ್ರತವನ್ನು ಮಾಡಿದ್ದನು.

೫. ವರದ ವ್ರತ

ಶ್ರಾವಣ ಶುಕ್ಲ ಚತುರ್ಥಿಯಿಂದ ಈ ವ್ರತದ ಶುಭಾರಂಭ ಆಗುತ್ತದೆ ಮತ್ತು ಭಾದ್ರಪದ ಶುಕ್ಲ ಪಂಚಮಿಯಂದು ಕೊನೆಗೊಳ್ಳುತ್ತದೆ. ಇದು ೨೧ ದಿನಗಳ ಗಣಪತಿ ವ್ರತವಾಗಿದೆ. ಇದು ಶ್ರಾವಣ ಶುಕ್ಲ ಚತುರ್ಥಿಗೆ ಪ್ರಾರಂಭವಾಗಿ ಶ್ರಾವಣ ಕೃಷ್ಣ ದಶಮಿಗೆ ಕೊನೆಗೊಳ್ಳುತ್ತದೆ.

೬. ವಟಗಣೇಶ ವ್ರತ

ಕಾರ್ತಿಕ ಶುಕ್ಲ ಚತುರ್ಥಿಯಂದು ಈ ವ್ರತದ ಶುಭಾರಂಭವನ್ನು ಮಾಡುತ್ತಾರೆ. ಇದು ಮಾಘ ಶುಕ್ಲ ಚತುರ್ಥಿಗೆ ಕೊನೆಗೊಳ್ಳುತ್ತದೆ.

೭. ಗಣೇಶ ಮೂರ್ತಿಯ ಪೂಜಾ ವ್ರತ

ಈ ವ್ರತವು ಶ್ರಾವಣ ಶುಕ್ಲ ಚುತುರ್ಥಿಯಂದು ಪ್ರಾರಂಭವಾಗಿ, ಭಾದ್ರಪದ ಶುಕ್ಲ ಚತುರ್ಥಿಗೆ ಕೊನೆಗೊಳ್ಳುತ್ತದೆ. ಶ್ರಾವಣ ಶುಕ್ಲ ಚತುರ್ಥಿಯಂದು ಬೆಳಗ್ಗೆ ಸ್ನಾನಾದಿ ಕರ್ಮಗಳನ್ನು ಮಾಡಿದ ನಂತರ ಒಳ್ಳೆಯ ಜಿಗುಟು ಕಪ್ಪು ಮಣ್ಣನ್ನು ತೆಗೆದುಕೊಂಡು ಎಲ್ಲ ಅವಯವಗಳಿಂದ ಪೂರ್ಣ ನಾಲ್ಕುಭುಜಗಳಿಂದ ಸುಶೋಭಿತ, ಪರಶು ಇತ್ಯಾದಿ ಆಯುಧಗಳನ್ನು ಧಾರಣೆ ಮಾಡಿದ ರಮಣೀಯ ಮತ್ತು ಪುಷ್ಟ ಗಣೇಶನ ಮೂರ್ತಿಯನ್ನು ತಯಾರಿಸಿ ಅದನ್ನು ಮಣೆಯ ಮೇಲಿಡಬೇಕು. ವಿದ್ಯುಕ್ತವಾಗಿ ಆ ಮೂರ್ತಿಯ ಪೂಜೆಯನ್ನು ಮಾಡಬೇಕು. ಪೂಜೆಯ ನಂತರ ಪದ್ಮಾಸನ ಹಾಕಿ ಕುಳಿತು ತಮ್ಮ ಇಚ್ಛೆಗನುಸಾರ ಜಪವನ್ನು ಮಾಡಬೇಕು. ಎಕಾಕ್ಷರಿ ಮಂತ್ರವನ್ನು ೧ ಲಕ್ಷ ಅಥವಾ ಅರ್ಧ ಲಕ್ಷ, ಷಡಕ್ಷರಿ, ದಶಾಕ್ಷರಿ ಮತ್ತು ಅಷ್ಟಾಕ್ಷರಿ ಮಂತ್ರವನ್ನು ಮತ್ತು ೨೮ ವರ್ಣಗಳ ಮಂತ್ರಗಳನ್ನೂ ೧೦ ಸಾವಿರ ಬಾರಿ ಜಪ ಮಾಡಬೇಕು. ವ್ರತಸಮಾಪ್ತಿಯ ನಂತರ ಋಷಿಪಂಚಮಿಯ ಹತ್ತನೇಯ ಒಂದು ಭಾಗದ ಜಪವನ್ನು ಹೋಮಹವನಾದಿಗಳಿಂದ ಗಣೇಶಯಾಗವನ್ನು ಮಾಡಬೇಕು. ಯಥಾಶಕ್ತಿ ಬ್ರಾಹ್ಮಣ-ಮುತ್ತೈದೆಯರಿಗೆ ಭೋಜನ-ವಸ್ತ್ರದಾನ ಮತ್ತು ದಕ್ಷಿಣೆಯನ್ನು ನೀಡಿ ಅವರನ್ನು ತೃಪ್ತಿಪಡಿಸಬೇಕು. ಷಷ್ಠಿಯಂದು ಶ್ರೀ ಗಣೇಶನ ಮಣ್ಣಿನ ಮೂರ್ತಿ ಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಜಲಾಶಯದ ಸ್ಥಳದಲ್ಲಿ ವಿಸರ್ಜಿಸಬೇಕು ಮತ್ತು ವ್ರತವನ್ನು ಮುಕ್ತಾಯಗೊಳಿಸಬೇಕು.

೮. ಸತ್ಯವಿನಾಯಕ ವ್ರತ

ಇದು ಒಂದು ಕಾಮ್ಯ (ಸಕಾಮ) ವ್ರತವಾಗಿದೆ. ವೈಶಾಖ ಹುಣ್ಣಿಮೆಯಂದು ವಿನಾಯಕನ ಜನ್ಮ ಆಯಿತು. ಆ ದಿನ ಅಥವಾ ಭಾದ್ರಪದ ಶುಕ್ಲ ಚತುರ್ಥಿ ಅಥವಾ ಸೋಮವಾರ ಅಥವಾ ಶುಕ್ರವಾರ ಸತ್ಯವಿನಾಯಕನ ಪೂಜೆಯನ್ನು ಮಾಡುತ್ತಾರೆ. ಸತ್ಯನಾರಾಯಣನ ಪೂಜೆಯ ಹಾಗೆ ಚೌರಂಗಕ್ಕೆ ನಾಲ್ಕೂ ಬದಿಗೆ ಬಾಳೆ ಗಿಡಗಳನ್ನು ಕಟ್ಟಿ ಮಧ್ಯಭಾಗದಲ್ಲಿ ನೀರಿನಿಂದ ತುಂಬಿದ ತಾಮ್ರದ ಕಲಶವನ್ನು ಇಡುತ್ತಾರೆ. ಅದರ ಮೇಲೆ ಶ್ರೀ ಗಣೇಶನ ಮೂರ್ತಿಯನ್ನು ಇಡುತ್ತಾರೆ. ಅದರ ಷೋಡಶೋಪಚಾರ ಪೂಜೆ ಮಾಡಿ ಗ್ರಂಥ ಓದುತ್ತಾರೆ. ಈ ವ್ರತದಿಂದ ಧನಧಾನ್ಯ, ವೈಭವ, ಪುತ್ರ, ಆರೋಗ್ಯ ಮತ್ತು ಆಯುಷ್ಯದ ಫಲಪ್ರಾಪ್ತಿಯಾಗುತ್ತದೆ.

ಸತ್ಯವಿನಾಯಕ ವ್ರತದ ಬಗ್ಗೆ ‘ಬ್ರಹ್ಮಾಂಡ ಪುರಾಣ’ದಲ್ಲಿ ಒಂದು ಕಥೆ ಇದೆ. ಮಣಿ ಎಂಬ ಓರ್ವ ಶ್ರೀಮಂತನನ್ನು ಕಳ್ಳರು ದೋಚುತ್ತಾರೆ. ಶ್ರೀಕೃಷ್ಣನ ಮಿತ್ರನಾದ ಸುದಾಮನಿಗೆ ಈ ವಿಷಯ ದಾರಿಯಲ್ಲಿ ತಿಳಿಯಿತು. ಸುದಾಮನು ಅವನಿಗೆ ಸತ್ಯವಿನಾಯಕನ ವ್ರತವನ್ನು ಮಾಡಲು ಹೇಳುತ್ತಾನೆ. ಅದರಿಂದ ಶ್ರೀಮಂತನಿಗೆ ಕಳ್ಳತನವಾದ ಹಣ ಪುನಃ ಸಿಗುತ್ತದೆ. ಅವನು ಅದರಲ್ಲಿನ ಅರ್ಧ ಹಣವನ್ನು ಸುದಾಮನಿಗೆ ನೀಡುತ್ತಾನೆ. ಸುದಾಮನು ಅಲ್ಲಿ ಸ್ವತಃ ಸತ್ಯವಿನಾಯಕನ ಪೂಜೆ, ದಾನಧರ್ಮವನ್ನು ಮಾಡಿ ಮನೆಗೆ ಬರುತ್ತಾನೆ. ನೋಡಿದರೆ ಅವನ ಹರಕುಮುರುಕು ಮನೆ ಚಿನ್ನದ ಅರಮನೆಯಾಗಿ ರೂಪಾಂತರಗೊಂಡಿರುತ್ತದೆ ಇದು ಸತ್ಯವಿನಾಯಕನ ಕೃಪೆಯಾಗಿತ್ತು. ಬ್ರಹ್ಮದೇವರು, ವಿಷ್ಣು, ಕೃಷ್ಣ ಇವರು ಸಹ ಈ ವ್ರತವನ್ನು ಮಾಡಿದ್ದರು. ಚಿತ್ರಬಾಹು ರಾಜನಿಗೆ ಈ ವ್ರತದಿಂದ ಪುತ್ರಪ್ರಾಪ್ತಿಯಾಯಿತು.

೯. ಗಣೇಶ ಯಾಗ

ವೈಶಾಖ ಹುಣ್ಣಿಮೆ, ಜ್ಯೇಷ್ಠ ಶುಕ್ಲ ಚತುರ್ಥಿ, ಭಾದ್ರಪದ ಶುಕ್ಲ ಚತುರ್ಥಿ ಮತ್ತು ಮಾಘ ಶುಕ್ಲ ಚತುರ್ಥಿ ಇವು ೪ ಗಣೇಶ ಜಯಂತಿಯ ದಿನಗಳಾದುದರಿಂದ ಈ ದಿನಗಳಂದು ಪ್ರಾಮುಖ್ಯತೆಯಿಂದ ಗಣೇಶಯಾಗವನ್ನು ಮಾಡುತ್ತಾರೆ. ಗರಿಕೆ, ಮೋದಕ, ಶಮಿಯ ಸಮಿಧೆ, ಅರಳು ಮತ್ತು ಎಳ್ಳು ಇವು ಇದರ ಆಹುತಿಗಳಾಗಿವೆ. ‘ಬ್ರಾಹ್ಮಣಸ್ಪತಿ ಸೂಕ್ತ’ ಮತ್ತು ‘ಗಣಪತಿ ಅಥರ್ವಶೀರ್ಷ’ ಈ ಎರಡೂ ಸೂಕ್ತಗಳನ್ನು ಪಠಿಸುವ ಮೂಲಕ ಈ ಯಾಗವನ್ನು ಮಾಡುತ್ತಾರೆ.’

(ಆಧಾರ : ಮಾಸಿಕ ‘ವೇಧ ಗಣೇಶಾಚಾ’)