ನವ ದೆಹಲಿ – ಇಂದು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಕ್ಕಳ ಸುರಕ್ಷತೆ ಇವು ಸಮಾಜಕ್ಕೆ ಕಳವಳಕಾರಿ ವಿಷಯವಾಗಿದೆ. ಮಹಿಳೆಯರ ಸುರಕ್ಷತೆಗಾಗಿ ದೇಶದಲ್ಲಿ ಹಲವು ಕಠಿಣ ಕಾನೂನುಗಳಿದ್ದು, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಶೀಘ್ರ ತೀರ್ಪು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಆಯೋಜಿಸಿದ್ದ ದೇಶಾದ್ಯಂತದ ಜಿಲ್ಲಾ ನ್ಯಾಯಾಧೀಶರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾನೂನು ಸಚಿವ ಅರ್ಜುನ ರಾಮ ಮೇಘವಾಲ್, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಸರ್ವೋಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ ಸಿಬಲ್ ಉಪಸ್ಥಿತರಿದ್ದರು. “ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ವೇಗವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆಯೋ, ಅಷ್ಟು ಸುರಕ್ಷತೆಯು ಖಚಿತವಾಗಿರುತ್ತದೆ.” ಇದಕ್ಕಾಗಿ 2019 ರಲ್ಲಿ ಸರಕಾರವು ‘ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ’ ಗಳನ್ನು ಸ್ಥಾಪಿಸಿದೆ ಮತ್ತು ಇದರ ಅಡಿಯಲ್ಲಿ ಪ್ರಮುಖ ಸಾಕ್ಷಿಗಳಿಗಾಗಿ ಸಾಕ್ಷಿ ಕೇಂದ್ರದ ವ್ಯವಸ್ಥೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಕೋಲಕಾತಾ ಅತ್ಯಾಚಾರ-ಹತ್ಯೆ ಪ್ರಕರಣದ ನಂತರ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಕಠಿಣ ಕಾನೂನುಗಳನ್ನು ರೂಪಿಸುವಂತೆ ಒತ್ತಾಯಿಸಿ ಪ್ರಧಾನಿಯವರ ಹೆಸರಿನಲ್ಲಿ ಎರಡು ಪತ್ರಗಳನ್ನು ಬರೆದಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಮಾತು ಮುಂದುವರಿಸಿ,
1. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ‘ಜಿಲ್ಲಾ ನಿಯಂತ್ರಣ ಸಮಿತಿ’ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರು ಸೇರಿದ್ದಾರೆ. ಈ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗುವ ಆವಶ್ಯಕತೆ ಇದೆ.
2. ಭಾರತಿಯರಿಗೆ ಸರ್ವೋಚ್ಚ ನ್ಯಾಯಾಲಯದ ಮೇಲೆ, ನಮ್ಮ ನ್ಯಾಯಾಂಗದ ಮೇಲೆ ಎಂದಿಗೂ ಅವಿಶ್ವಾಸ ಇರಲಿಲ್ಲ. ಆದ್ದರಿಂದ ಈ 75 ವರ್ಷಗಳ ಸರ್ವೋಚ್ಚ ನ್ಯಾಯಾಲಯದ ‘ಪ್ರಜಾಪ್ರಭುತ್ವದ ತಾಯಿ’ ಎಂದು ಭಾರತದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದರು.