ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗುರುತು ಬಹಿರಂಗಪಡಿಸಿದ ‘ರಾಜಸ್ಥಾನ ಪತ್ರಿಕೆ’ಯ ಪ್ರಕಾಶಕ, ಸಂಪಾದಕ ಮತ್ತು ಪತ್ರಕರ್ತನಿಗೆ ಒಂದು ವರ್ಷ ಜೈಲು ಶಿಕ್ಷೆ !

ಭೋಪಾಲ – ಮಧ್ಯಪ್ರದೇಶದ ಒಂದು ಕಿರಿಯ ನ್ಯಾಯಾಲಯವು ಅತ್ಯಾಚಾರ ಮತ್ತು ಹತ್ಯೆಗೊಳಗಾದ 4 ವರ್ಷದ ಬಾಲಕಿಯ ಛಾಯಾಚಿತ್ರ ಮತ್ತು ಹೆಸರನ್ನು ಪ್ರಕಟಿಸಿದ ಪ್ರಕರಣದಲ್ಲಿ ‘ರಾಜಸ್ಥಾನ ಪತ್ರಿಕೆ’ಯ ಪ್ರಕಾಶಕರು, ಸಂಪಾದಕ ಮತ್ತು ಪತ್ರಕರ್ತರನ್ನು ದೋಷಿ ಎಂದು ಹೇಳಿ ನಾಲ್ವರು ಆರೋಪಿಗಳಾದ ಪ್ರಕಾಶಕ ರೂಪರಾಮ, ಇಬ್ಬರು ಸಂಪಾದಕರಾದ ಅಮಿತ್ ಮತ್ತು ಜಿನೇಶ್ ಮತ್ತು ಪತ್ರಕರ್ತ ಕೃಷ್ಣಪಾಲ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಮತ್ತು 22 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಆರೋಪಿಯ ಕೃತ್ಯ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯಿದೆ (ಪೋಕ್ಸೊ ಕಾಯ್ದೆ), 2012ರ ಸೆಕ್ಷನ್ 23 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228 (ಎ) ಅನ್ನು ಉಲ್ಲಂಘಿಸುತ್ತದೆ, ಎಂದು ಕಿರಿಯ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಇದಲ್ಲದೇ ಮಕ್ಕಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ 74 ನೇ ವಿಧಿಯು ಕಾಳಜಿ ಮತ್ತು ರಕ್ಷಣೆಯ ಆವಶ್ಯಕತೆಯಿರುವ ಯಾವುದೇ ಮಕ್ಕಳ ಹೆಸರನ್ನು ಅಥವಾ ವೈಯಕ್ತಿಕ ವಿವರಗಳನ್ನು ಪ್ರಕಟಿಸುವುದನ್ನು ನಿಷೇಧಿಸುತ್ತದೆ.

1. ವಿಶೇಷ ನ್ಯಾಯಾಧೀಶೆ ರೇಶ್ಮಿ ವಾಲ್ಟರ್ ಇವರು ಆಗಸ್ಟ್ 26 ರಂದು ತಮ್ಮ ತೀರ್ಪಿನಲ್ಲಿ, ಆರೋಪಿ ಪತ್ರಕರ್ತ ಮತ್ತು ಪ್ರಕಾಶಕರು ತಮ್ಮ ಏಪ್ರಿಲ್ 9, 2019 ರ ‘ರಾಜಸ್ಥಾನ ಪತ್ರಿಕಾ’ ಸುದ್ದಿಪತ್ರಿಕೆಯಲ್ಲಿ ಸಂತ್ರಸ್ಥೆಯ ಹೆಸರು ಮತ್ತು ಛಾಯಾಚಿತ್ರವನ್ನು ಪ್ರಕಟಿಸುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರುದಾರರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

2. ಸುದ್ದಿಪತ್ರಿಕೆಯ ಪ್ರಕಾಶಕರು ಮತ್ತು ಪತ್ರಕರ್ತರನ್ನು ಪ್ರತಿನಿಧಿಸಿದ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ, ಅಪ್ರಾಪ್ತ ಬಾಲಕಿಯ ಛಾಯಾಚಿತ್ರಗಳು, ಹೆಸರು ಮತ್ತು ಅದರೊಂದಿಗೆ ಸುದ್ದಿಯನ್ನು ಪ್ರಕಟಿಸುವುದು ಕೇವಲ ಚಿಕ್ಕ ಮಕ್ಕಳ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಾಗಿತ್ತು. ಕಾನೂನನ್ನು ಉಲ್ಲಂಘಿಸುವ ಯಾವುದೇ ಉದ್ದೇಶವಿರಲಿಲ್ಲ. ಪ್ರತಿವಾದವನ್ನು ಮಂಡಿಸುವಾಗ ಆರೋಪಿಗಳ ಪೈಕಿ ಯಾರ ಮೇಲೆಯೂ ಈ ಹಿಂದೆ ಯಾವುದೇ ಅಪರಾಧದ ದಾಖಲೆ ಇಲ್ಲ, ಎಂದು ಯುಕ್ತಿವಾದ ಮಾಡುವಾಗ ಕಡಿಮೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.

3. ಒಂದು ಸ್ವಯಂಸೇವಾ ಸಂಸ್ಥೆಯ ಕೋರಿಕೆಯ ಮೇರೆಗೆ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 228 (ಅ) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯು ಸಾಮಾಜಿಕ ಕಲ್ಯಾಣ ಉದ್ದೇಶಗಳಿಗಾಗಿ ವಿನಂತಿಸಿದ್ದರೆ, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲು ಅವಕಾಶ ನೀಡುತ್ತದೆ, ಆದರೆ ಈ ಯುಕ್ತಿವಾದವನ್ನು ಸಹ ನ್ಯಾಯಾಲಯವು ತಿರಸ್ಕರಿಸಿತು.