ಶ್ರೀ ಗಣೇಶನ ಆಧ್ಯಾತ್ಮಿಕ ಮಾಹಿತಿ

ಶ್ರೀ ಗಣೇಶ ಮತ್ತು ೨೧ ಸಂಖ್ಯೆ

‘ಶ್ರೀ ಗಣೇಶನ ಭಕ್ತಿಯನ್ನು ಮಾಡುವಾಗ ೨೧ ಗರಿಕೆ, ೨೧ ಕೆಂಪು ಹೂವುಗಳು, ೨೧ ಮೋದಕ ಗಳನ್ನು ಅರ್ಪಿಸಲಾಗುತ್ತದೆ. ಇದು ಯಾವುದರ ಪ್ರತೀಕವಾಗಿದೆ ? ಗಣೇಶನು ಪರಾಕ್ರಮದ ದೇವತೆಯಾಗಿದ್ದು ಅವನು ದೇವ-ದಾನವರ ಪ್ರತಿಯೊಂದು ಯುದ್ಧದಲ್ಲಿ ಸೇನಾಪತಿಯಾಗಿದ್ದನು ಮತ್ತು ಅವನ ಸೈನ್ಯವು ೨೦ ಸೈನಿಕರು ಮತ್ತು ಅವರ ಮೇಲೆ ೨೧ ನೇ ನಾಯಕ ಹೀಗೆ ಇತ್ತು. ಆ ಪರಾಕ್ರಮದ ಪ್ರತೀಕವೆಂದೇ ಅವನಿಗೆ ೨೧ ಸಂಖ್ಯೆಯಲ್ಲಿ ವಸ್ತುಗಳನ್ನು ಅರ್ಪಿಸಲಾಗುತ್ತದೆ.

ಶ್ರೀ ಗಣೇಶನಿಗೆ ಮೊದಲ ನಮಸ್ಕಾರ ಏಕೆ ?

ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವಾಗ ನಾವು ‘ಶ್ರೀ ಗಣೇಶಾಯ ನಮಃ |’, ಎಂದು ಹೇಳುತ್ತಾ ಗಣಪತಿಯನ್ನು ಸ್ಮರಿಸುತ್ತೇವೆ. ಸ್ವರ್ಗದ ದೇವಿದೇವತೆಗಳು ತಮ್ಮ ಶ್ರೇಷ್ಠತ್ವವನ್ನು ಸಿದ್ಧ ಪಡಿಸಲು ಬ್ರಹ್ಮದೇವರ ಹೇಳಿಕೆಗನುಸಾರ ಪೃಥ್ವಿಗೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಯಲ್ಲಿ ಭಾಗವಹಿಸಲು ಹೊರಟರು. ಗಣಪತಿಯು ತನ್ನ ಯುಕ್ತಿಚಾತುರ್ಯದಿಂದ ಶಾಸ್ತ್ರಾನುಸಾರವಾಗಿ ೭ ಬಾರಿ ತನ್ನ ತಾಯಿ-ತಂದೆಗೆ ಪ್ರದಕ್ಷಿಣೆಯನ್ನು ಹಾಕಿ ಮೊತ್ತಮೊದಲು ಭೂಮಿಗೆ ಪ್ರದಕ್ಷಿಣೆ ಹಾಕಿ ಅಗ್ರಪೂಜೆಯ ಗೌರವಕ್ಕೆ ಪಾತ್ರನಾದನು. ಅಂದಿನಿಂದ ಗಣಪತಿಗೆ ಮೊದಲ ಪೂಜೆ ಮತ್ತು ಮೊದಲು ನಮಸ್ಕಾರವನ್ನು ಮಾಡುತ್ತಾರೆ.

ಅಂಗಾರಕೀಯ ವಿಶೇಷ ಮಹತ್ವ

ಮೊದಲು ಉಜ್ಜಯಿನಿ ನಗರದಲ್ಲಿ ಭಾರದ್ವಾಜ ಎಂಬ ಓರ್ವ ವೇದಶಾಸ್ತ್ರಸಂಪನ್ನ ಋಷಿಗಳು ಇರುತ್ತಿದ್ದರು. ಅವರು ಅಗ್ನಿಹೋತ್ರಿಯಾಗಿದ್ದರು. ಭಾರದ್ವಾಜ ಋಷಿಗಳು ಓರ್ವ ‘ಮಂಗಲ’ನೆಂಬ ಹೆಸರಿನ ಕೆಂಪು ಬಣ್ಣದ ಹುಡುಗನಿಗೆ ಗಜಾನನನ ಅನುಷ್ಠಾನ ಮಾಡಲು ಹೇಳಿದರು. ಆಗ ಆ ಹುಡುಗನು ನರ್ಮದಾ ತಟದಲ್ಲಿದ್ದು ಗಜಾನನನ ಅನುಷ್ಠಾನ ಮತ್ತು ಕಠಿಣ ತಪಸ್ಸು ಮಾಡಿದನು. ಅದರಿಂದ ಶ್ರೀ ಗಣೇಶನು ಪ್ರಸನ್ನನಾದನು ಮತ್ತು ಅವನು ಆ ಹುಡುಗನಿಗೆ ವರ ಬೇಡಲು ಹೇಳಿದನು. ಆ ಸಮಯದಲ್ಲಿ ಮಂಗಲನು ಅಮೃತ ಪ್ರಾಶನದ ಇಚ್ಛೆಯನ್ನು ವ್ಯಕ್ತ ಪಡಿಸಿ ‘ನನ್ನ ಹೆಸರು ಪ್ರಸಿದ್ಧಿಯಾಗಬೇಕು’, ಎಂಬ ವರ ಬೇಡಿದನು. ಆ ದಿನ ಚತುರ್ಥಿ ಇತ್ತು. ಅದಕ್ಕೆ ಶ್ರೀ ಗಣೇಶನು ಆಶೀರ್ವಾದ ನೀಡುತ್ತಾ, ”ಮಂಗಳವಾರ ಚತುರ್ಥಿ ಬಂದರೆ, ಅದಕ್ಕೆ ವಿಶೇಷ ಮಹತ್ವವು ಬಂದು ಅದು ‘ಅಂಗಾರಕಿ ಚತುರ್ಥಿ’ ಆಗುತ್ತದೆ. ನಿನ್ನ ಬಣ್ಣ ಕೆಂಪು ಇದೆ, ಆದುದರಿಂದ ನೀನು ‘ಮಂಗಲ’ನೆಂದು ಪ್ರಸಿದ್ಧನಾಗುವೆ”, ಎಂದು ಹೇಳಿದನು. ಈ ಮಂಗಲನು ಅಲ್ಲಿಯೇ ದೇವಸ್ಥಾನವನ್ನು ಕಟ್ಟಿದನು (ಇಂದು ಆ ದೇವಸ್ಥಾನ ‘ಮಂಗಲನಾಥ’ ಈ ಹೆಸರಿನಿಂದ ಪ್ರಸಿದ್ಧವಾಗಿದೆ.) ಮತ್ತು ಆ ಮೂರ್ತಿಗೆ ‘ಮಂಗಲಮೂರ್ತಿ’ ಎಂದು ಹೆಸರಿದೆ .

(ಆಧಾರ : ಮಾಸಿಕ ‘ಸದಾಚಾರ ಮತ್ತು ಸಂಸ್ಕೃತಿ’, ಸೆಪ್ಟೆಂಬರ್‌ ೨೦೧೪)