ತನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್‌ ಕೂಡ ಈ ಕ್ರಮ ಕೈಗೊಂಡಿತ್ತು – ಕೇಂದ್ರ ಸರಕಾರದ ಪ್ರತಿಕ್ರಿಯೆ !

ಆಡಳಿತಾತ್ಮಕ ಸೇವೆಗಳಿಗಾಗಿ ಪರೀಕ್ಷೆ ರಹಿತ ನೇರ ನೇಮಕಾತಿ ಮಾಡುವ ಭಾಜಪದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಟೀಕೆ

ಕೇಂದ್ರ ಸಚಿವ ಶ್ರೀ. ಅಶ್ವಿನಿ ವೈಷ್ಣವ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ

ನವ ದೆಹಲಿ – ಕೇಂದ್ರ ಸರಕಾರವು ವಿವಿಧ ಕ್ಷೇತ್ರಗಳ ತಜ್ಞರಿಗೆ ಪರೀಕ್ಷೆ ನಡೆಸದೆ ಸರಕಾರಿ ಉದ್ಯೋಗಗಳಲ್ಲಿ ನೇಮಕಾತಿ ನಡೆಸಲು ನಿರ್ಣಯ ತೆಗೆದುಕೊಂಡಿದೆ. ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿಈ ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಲೋಕಸೇವಾ ಆಯೋಗವು 45 ಖಾಲಿ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದೆ. ಕೇಂದ್ರ ಸರಕಾರದ ಈ ನಿರ್ಣಯವನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿಯವರು, ‘ಈ ನಿರ್ಣಯವು ಪರಿಶಿಷ್ಟ ಜಾತಿಗಳು, ಪಂಗಡಗಳು ಮತ್ತು ಇತರ ಜಾತಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ’ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಶ್ರೀ. ಅಶ್ವಿನಿ ವೈಷ್ಣವ ಅವರು ರಾಹುಲ್ ಗಾಂಧಿಯವರ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಅವರು ತಮ್ಮ ‘ಎಕ್ಸ್’ ಖಾತೆಯ ಮೇಲೆ ಪೋಸ್ಟ್ ಮಾಡುತ್ತಾ, ರಾಹುಲ್ ಗಾಂಧಿಯವರು ಟೀಕಿಸಿರುವ ರೀತಿಯನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿ ಕಂಡು ಬರುತ್ತದೆ. ಏಕೆಂದರೆ ತಜ್ಞರನ್ನು ನೇರವಾಗಿ ಸೇವೆಗೆ ತೆಗೆದುಕೊಳ್ಳುವ ಪರಿಕಲ್ಪನೆಯನ್ನು ಕಾಂಗ್ರೆಸ್ ಸರಕಾರವೇ ಮಂಡಿಸಿತ್ತು. 2005 ರಲ್ಲಿ, ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರಕಾರವು ಎರಡನೇ ಆಡಳಿತ ಸುಧಾರಣಾ ಆಯೋಗವನ್ನು ಸ್ಥಾಪಿಸಿತ್ತು. ಈ ಆಯೋಗದ ನಾಯಕತ್ವವನ್ನು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ವಹಿಸಿದ್ದರು. ಈ ಆಯೋಗವು ವಿವಿಧ ಕ್ಷೇತ್ರಗಳ ತಜ್ಞರನ್ನು ನೇರವಾಗಿ ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಶಿಫಾರಸು ಮಾಡಿತ್ತು. ಮೋದಿ ಸರಕಾರ ಕೇವಲ ಪಾರದರ್ಶಕವಾಗಿ ಶಿಫಾರಸುಗಳನ್ನು ಜಾರಿಗೊಳಿಸಿದೆ. ಈ ನಿರ್ಣಯದಿಂದ ಸರಕಾರದ ಕಾರ್ಯದಕ್ಷತೆ ಹೆಚ್ವಾಗುವುದೆಂದು ಅವರು ಸ್ಪಷ್ಟಪಡಿಸಿದರು.