ಮುಂಬಯಿ ಉಚ್ಚನ್ಯಾಯಾಲಯದ ಮಹತ್ವದ ನಿರ್ಧಾರ!
ಮುಂಬಯಿ – ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ, ಸ್ವತಃ ಬಲಾತ್ಕಾರ ಮಾಡದೇ ಇತರರಿಗೆ ಅದಕ್ಕಾಗಿ ಸಹಾಯ ಮಾಡುವವನನ್ನೂ ಬಲಾತ್ಕಾರದ ಅಪರಾಧಿಯೆಂದು ಪರಿಗಣಿಸಲಾಗುವುದು ಎಂದು ಮುಂಬಯಿ ಉಚ್ಚನ್ಯಾಯಾಲಯವು ಹೇಳಿದೆ. `ಸಮಾನ ಉದ್ದೇಶದ ದಾಖಲೆಗಳು ಶಿಕ್ಷೆಗೆ ಸಾಕಾಗುತ್ತದೆ’ ಎಂದು ನ್ಯಾಯಾಲಯ ತಿಳಿಸಿದೆ. ಮುಂಬಯಿ ಉಚ್ಚನ್ಯಾಯಾಲಯದ ನಾಗಪೂರ ಪೀಠವು ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿಸಿದ್ದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ಈ ಆದೇಶ ನೀಡಿದೆ. ಚಂದ್ರಪೂರ ಸೆಷನ್ ನ್ಯಾಯಾಲಯವು ಈ ನಾಲ್ವರು ಅಪರಾಧಿಗಳಿಗೆ ವಿಧಿಸಿರುವ ಶಿಕ್ಷೆ ಸರಿಯಾಗಿದೆಯೆಂದು ಉಚ್ಚನ್ಯಾಯಾಲಯವು ಮೊಹರು ಹಾಕಿದೆ.
1. ಜೂನ್ 14, 2015 ರಂದು, ಸಂದೀಪ ತಲಾಂಡೆ, ಕುನಾಲ್ ಘೋಡಮ್, ಶುಭಂ ಘೋಡಮ್ ಮತ್ತು ಅಶೋಕ್ ಕನ್ನಾಕೆ ಎಂಬ ಯುವಕರು ಓರ್ವ ಹುಡುಗಿಯ ಬಲಾತ್ಕಾರ ಮಾಡಿದ್ದರು. ಚಂದ್ರಪೂರ ಸೆಷನ್ ನ್ಯಾಯಾಲಯವು ಈ ನಾಲ್ವರು ಆರೋಪಿಗಳಿಗೆ 20 ಆಗಸ್ಟ್ 2018 ರಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು.
2. ಈ ನಾಲ್ವರಲ್ಲಿ ಕೇವಲ ಇಬ್ಬರು ಆರೋಪಿಗಳು ಮಾತ್ರ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದರು; ಆದರೆ ಇನ್ನಿಬ್ಬರು ಆರೋಪಿಗಳು ಅತ್ಯಾಚಾರದ ಉದ್ದೇಶ ಹೊಂದಿದ್ದ ಕಾರಣ ಅವರನ್ನು ಕೂಡ ತಪ್ಪಿತಸ್ಥರೆಂದು ನ್ಯಾಯಾಲಯವು ತೀರ್ಪು ನೀಡಿದೆ.