Indian Students Died Abroad: ಕಳೆದ ೫ ವರ್ಷಗಳಲ್ಲಿ ವಿದೇಶದಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳ ಸಾವು

ಕೆನಡಾದಲ್ಲಿ ಎಲ್ಲಕ್ಕಿಂತ ಹೆಚ್ಚು ೧೭೨ ವಿದ್ಯಾರ್ಥಿಗಳ ಸಾವು

ನವ ದೆಹಲಿ – ಕಳೆದ ೫ ವರ್ಷಗಳಲ್ಲಿ ಪ್ರಪಂಚದ ೪೧ ದೇಶಗಳಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆನಡಾದಲ್ಲಿನ ಎಲ್ಲಕ್ಕಿಂತ ಹೆಚ್ಚು ೧೭೨ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ, ಹಾಗೂ ಅಮೇರಿಕಾದಲ್ಲಿ ೧೦೮, ಬ್ರಿಟನ್‌ನಲ್ಲಿ ೫೮, ಆಸ್ಟ್ರೇಲಿಯಾದಲ್ಲಿ ೫೭, ರಷ್ಯಾದಲ್ಲಿ ೩೭ ಮತ್ತು ಜರ್ಮನಿಯಲ್ಲಿ ೨೪ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೆ ಪಾಕಿಸ್ತಾನದಲ್ಲಿ ಕೂಡ ಓರ್ವ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿತು. ಕೇರಳದ ಸಂಸದ ಕೊಡಿಕೊನ್ನಿಲ್ ಸುರೇಶ ಇವರು ಈ ಸಂದರ್ಭದಲ್ಲಿ ಪ್ರಶ್ನೆ ಕೇಳಿದ್ದರು.

ಸಾವನ್ನಪ್ಪಿರುವ ಒಟ್ಟು ೬೩೩ ವಿದ್ಯಾರ್ಥಿಗಳಲ್ಲಿ ೧೯ ವಿದ್ಯಾರ್ಥಿಗಳು ಹಿಂಸಾಚಾರದ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆನಡಾದಲ್ಲಿ ಎಲ್ಲಕ್ಕಿಂತ ಹೆಚ್ಚು ೯, ಅದರ ನಂತರ ಅಮೆರಿಕದಲ್ಲಿ ೬ ಹಾಗೂ ಆಸ್ಟ್ರೇಲಿಯಾ, ಬ್ರಿಟನ್, ಚೀನಾ ಮತ್ತು ಕಿರ್ಗಿಸ್ತಾನ್ ಈ ದೇಶಗಳಲ್ಲಿ ಒಂದೊಂದು ವಿದ್ಯಾರ್ಥಿಯ ಸಾವು ಹಿಂಸಾಚಾರದ ಘಟನೆಯಲ್ಲಿ ನಡೆದಿದೆ ಎಂದು ಸರಕಾರ ಹೇಳಿತು.

ಸಧ್ಯ ವಿದೇಶಗಳಲ್ಲಿ ಶಿಕ್ಷಣ ಪಡೆಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ !

ಭಾರತ ಸರಕಾರವು ನೀಡಿರುವ ಅಂಕಿ ಸಂಖ್ಯೆಯ ಪ್ರಕಾರ ೨೦೨೪ ರಲ್ಲಿ ವಿದೇಶದಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ೧೩ ಲಕ್ಷದ ೩೫ ಸಾವಿರದಷ್ಟು ಇದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ೪ ಲಕ್ಷ ೨೭ ಸಾವಿರ ವಿದ್ಯಾರ್ಥಿ ಕೆನಡಾದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ ಅಮೇರಿಕಾದಲ್ಲಿ ೩ ಲಕ್ಷದ ೩೭ ಸಾವಿರ, ಬ್ರಿಟನ್ ನಲ್ಲಿ ೧ ಲಕ್ಷ ೮೫ ಸಾವಿರ, ಆಸ್ಟ್ರೇಲಿಯಾದಲ್ಲಿ ೧ ಲಕ್ಷ ೨೨ ಸಾವಿರ, ಜರ್ಮನಿಯಲ್ಲಿ ೪೩ ಸಾವಿರ, ಸಂಯುಕ್ತ ಅರಬ್ ಅಮೀರಾತನಲ್ಲಿ ೨೫ ಸಾವಿರ ಹಾಗೂ ರಷ್ಯಾದಲ್ಲಿ ೨೪ ಸಾವಿರದ ೯೪೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.