Pakistan 2023 census : ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ 3 ಲಕ್ಷಗಳಷ್ಟು ಹೆಚ್ಚಳ; ಶೇಕಡಾವಾರು ಇಳಿಕೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆಸಲಾದ ಜನಗಣತಿಯ ಅಂಕಿ ಅಂಶಗಳು ಹೊರಬಂದಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದೂಗಳ ಜನಸಂಖ್ಯೆಯು 38 ಲಕ್ಷಕ್ಕೆ ಏರಿದೆ ! ಹಿಂದೂಗಳು ಈಗ ಪಾಕಿಸ್ತಾನದಲ್ಲಿರುವ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಈ ಅಂಕಿ ಅಂಶವು 2017ರ ತುಲನೆಯಲ್ಲಿ ಹೆಚ್ಚಾಗಿದೆ. 2017ರಲ್ಲಿ ಹಿಂದೂಗಳ ಸಂಖ್ಯೆ 35 ಲಕ್ಷಗಳಷ್ಟು ಇತ್ತು. ಹಿಂದೂಗಳ ಜನಸಂಖ್ಯೆಯು 3 ಲಕ್ಷದಷ್ಟು ಹೆಚ್ಚಾಗಿದ್ದರೂ, ಒಟ್ಟಾರೆ ಜನಸಂಖ್ಯೆಯಲ್ಲಿ ಅವರ ಪಾಲು ಶೇ. 1.73 ರಿಂದ ಶೇ. 1.61 ಕ್ಕೆ ಇಳಿದಿದೆ.

1. 2023ರ ಜನಗಣತಿಯಲ್ಲಿ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯು 24 ಕೋಟಿ 4 ಲಕ್ಷದ 58 ಸಾವಿರದ 89 ಆಗಿತ್ತು. 2017ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಶೇಕಡಾ 96.47 ರಷ್ಟಿತ್ತು, ಅದು 2023ರಲ್ಲಿ ಶೇಕಡಾ 96.35ರಷ್ಟಾಗಿದೆ. 2050ರ ವೇಳೆಗೆ ಪಾಕಿಸ್ತಾನದ ಜನಸಂಖ್ಯೆಯು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

2. ಅಹ್ಮದಿ ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗಿದೆ. 2017ರಲ್ಲಿ, ಇದು 1 ಲಕ್ಷದ 91 ಸಾವಿರದ 737 (ಒಟ್ಟು ಜನಸಂಖ್ಯೆಯ ಶೇಕಡಾ 0.09) ಇತ್ತು, ಆದರೀಗ 1 ಲಕ್ಷ 62 ಸಾವಿರ 684 (ಒಟ್ಟು ಜನಸಂಖ್ಯೆಯ ಶೇಕಡಾ 0.07) ರಷ್ಟಾಗಿದೆ.

ಕ್ರಿಶ್ಚಿಯನ್ನರ ಜನಸಂಖ್ಯೆಯಲ್ಲಿ ಹೆಚ್ಚಳ

ಇತರ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ಕ್ರಿಶ್ಚಿಯನ್ನರ ಜನಸಂಖ್ಯೆ 26 ಲಕ್ಷದಿಂದ 33 ಲಕ್ಷಕ್ಕೆ ತಲುಪಿದೆ. ಒಟ್ಟು ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರ ಪಾಲು 1.27 ರಿಂದ 1.37 ಕ್ಕೆ ಏರಿದೆ!