ಗುರುಕುಲ ಶಿಕ್ಷಣಪದ್ದತಿ ಏಕೆ ಆವಶ್ಯಕ ?

‘ಒಮ್ಮೆ ಅಗಸ್ತ್ಯಋಷಿಗಳು ತಮ್ಮ ಶಿಷ್ಯರೊಂದಿಗೆ ಯಾತ್ರೆಗೆ ಹೊರಟಿದ್ದರು. ಶಿಷ್ಯರು ಮಾರ್ಗದಲ್ಲಿ ಅನೇಕ ವಿಷಯಗಳನ್ನು ನೋಡಿದರು ಮತ್ತು ಅನೇಕ ಪ್ರಶ್ನೆಗಳನ್ನೂ ಕೇಳಿದರು. ‘ಗುರುಗಳೇ, ನಗರದಲ್ಲಿ ದೊಡ್ಡ ದೊಡ್ಡ ಭವನಗಳಿವೆ, ಬಹಳಷ್ಟು ಸೌಲಭ್ಯಗಳಿವೆ ಹಾಗೂ ಸುಖೋಪಭೋಗಗಳ ದೊಡ್ಡ ದೊಡ್ಡ ಸಾಧನಗಳಿವೆ. ಹೀಗಿದ್ದರೂ ಬುದ್ಧಿವಂತ ಜನರು ಅರಣ್ಯದಲ್ಲಿನ ಗುರುಕುಲಕ್ಕೆ ಅವರ ಮಕ್ಕಳನ್ನು ಏಕೆ ಕಳುಹಿಸುತ್ತಾರೆ ?’, ಎಂದು ಓರ್ವ ಶಿಷ್ಯನು ಪ್ರಶ್ನೆಯನ್ನು ಕೇಳಿದನು.

ಶೌರ್ಯ ಮತ್ತು ಆತ್ಮಬಲ ಇವುಗಳೊಂದಿಗೆ ಇನ್ನಿತರ ಗುಣಗಳ ವಿಕಾಸ ಗುರುಕುಲದಲ್ಲಾಗುವುದು

ಗುರು ಅಗಸ್ತ್ಯಋಷಿಗಳು, ‘ವತ್ಸ ! ಆ ಬುದ್ಧಿವಂತ ಜನರು ಮನೆಯಲ್ಲಿನ ಭೋಗವಾಸನೆಯ ವಾತಾವರಣದಲ್ಲಿ ತಮ್ಮ ಹಾಗೂ ನೆರೆಮನೆಯವರಲ್ಲಿ ಎಂತಹ ದೌರ್ಬಲ್ಯವಿದೆ ಹಾಗೂ ಎಂತಹ ಧೂರ್ತತನವಿದೆ, ಎಂಬುದನ್ನು ತಿಳಿದುಕೊಂಡಿರುತ್ತಾರೆ. ಕೋಮಲ ಚಿತ್ತದ ಮಕ್ಕಳಲ್ಲಿ ಅವುಗಳ ಕೆಟ್ಟ ಸಂಸ್ಕಾರವಾಗಬಹುದು. ಎಷ್ಟು ವಿದ್ಯೆ ಕಲಿತರೂ ಹೃದಯದಲ್ಲಿ ಶಾಂತಿ ಹಾಗೂ ಬುದ್ಧಿಯಲ್ಲಿ ಪಾವಿತ್ರ್ಯ ಬರಲಿಕ್ಕಿಲ್ಲ ಹಾಗೂ ಚಿತ್ತದಲ್ಲಿ ಚೈತನ್ಯದ ಪ್ರಕಾಶ ಕಾಣಿಸಲಿಕ್ಕಿಲ್ಲ. ಗುರುಗಳಲ್ಲಿ ಚೈತನ್ಯದ ಪ್ರಕಾಶ ಇರುತ್ತದೆ ಮತ್ತು ಬುದ್ಧಿಯಲ್ಲಿ ಸಾತ್ತ್ವಿಕತೆಯಿರುತ್ತದೆ ಹಾಗೂ ಹೃದಯದಲ್ಲಿ ಶಾಂತಿ ಇರುತ್ತದೆ.

ದಶರಥ ರಾಜನು ತನ್ನ ಸುಪುತ್ರರನ್ನು ಅರಮನೆಯಲ್ಲಿಟ್ಟು ಕಲಿಸಬಹುದಾಗಿತ್ತ್ತು, ಅದೆಷ್ಟೋ ಶಿಕ್ಷಕರನ್ನಿಡಲು ಸಾಧ್ಯವಿತ್ತು; ಆದರೆ ಅವನು ತನ್ನ ಪುತ್ರರನ್ನು ಗುರು ಮಹರ್ಷಿ ವಸಿಷ್ಠರಲ್ಲಿಗೆ ಕಳುಹಿಸಿದನು. ಗುರು ವಸಿಷ್ಠರು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಗೆ ಶಿಕ್ಷಣದ ಜೊತೆಗೆ ನೀಡಿರುವ ಬ್ರಹ್ಮರಸ, ಓಜಸ್ಸು ಅರಮನೆಯ ವಿಲಾಸಮಯ ವಾತಾವರಣದಲ್ಲಿ ಸಿಗಲು ಸಾಧ್ಯವಿಲ್ಲ; ಆದ್ದರಿಂದ ಆ ದೂರದರ್ಶಿಗಳು ತಮ್ಮ ಮಕ್ಕಳನ್ನು ಕಲಿಯಲು ಬ್ರಹ್ಮರ್ಷಿ ಋಷಿಮುನಿಗಳ ನಿರ್ವಹಣೆಯಲ್ಲಿಡುತ್ತಾರೆ. ವಿದ್ಯಾರ್ಥಿದೆಶೆಯಲ್ಲಿ ಅಡಚಣೆಗಳಿಂದ, ಸಂಯಮ-ಸದಾಚಾರ ಹಾಗೂ ಸಾದಾತನದಿಂದ ಮುಂದುವರಿಯುತ್ತಿರುವಾಗ ವಿದ್ಯಾರ್ಥಿ ಗಳಲ್ಲಿ ಸಹನಶಕ್ತಿ, ಕ್ಷಮೆ, ಶೌರ್ಯ ಮತ್ತು ಆತ್ಮಬಲ ಇವುಗಳ ವಿಕಾಸ ವಾಗುತ್ತದೆ; ಆದರೆ ಸುಖಸೌಲಭ್ಯಗಳ ಭೋಗವಿಲಾಸದಲ್ಲಿದ್ದು ಪದವಿಗಳನ್ನು ಪಡೆಯುವ ಆ ಬಡಪಾಯಿಗಳು ಒಳಗಿನಿಂದ ದುರ್ಬಲರಾಗಿರುತ್ತಾರೆ. ಆದ್ದರಿಂದಲೇ ಬುದ್ಧಿವಂತರು ತಮ್ಮ ಸುಪುತ್ರರನ್ನು ಅರಮನೆಯಲ್ಲಿಟ್ಟುಕೊಳ್ಳುವುದಿಲ್ಲ.

ತಾತ್ಪರ್ಯವೇನೆಂದರೆ ಹೇಗೆ ಶರೀರದಲ್ಲಿ ಪ್ರಾಣ (ಜೀವ) ಇಲ್ಲದಿದ್ದರೆ ಶರೀರ ವ್ಯರ್ಥವಾಗುತ್ತದೆಯೋ, ಹಾಗೆಯೇ ಆಶ್ರಮದಲ್ಲಿ ಮತ್ತು ಮಂದಿರಗಳಲ್ಲಿ ಸಂತರ ಆಗಮನ ಅಥವಾ ವಾಸವಿಲ್ಲದಿದ್ದರೆ, ಸತ್ಸಂಗವಿಲ್ಲದಿದ್ದರೆ ಆ ವಾಸ್ತುವಿನಲ್ಲಿ ಕೇವಲ ೪ ಗೋಡೆಗಳಷ್ಟೇ ಇರುತ್ತವೆ. ಗುರುಕುಲ ಶಿಕ್ಷಣಪದ್ಧತಿ ವ್ಯಕ್ತಿಗೆ ವಿಕಸಿತ ಜೀವನ ನಡೆಸಲು ದೃಷ್ಟಿಯನ್ನು ನೀಡುತ್ತದೆ. ಗುರುಕುಲ ಪರಂಪರೆಯಿಂದ ಶಿಕ್ಷಣ ಪಡೆದರೆ ಅದು ದೇಶದ ಹಾಗೂ ಮಾನವತೆಯ ಸದ್ಭಾಗ್ಯವಾಗುವುದು.’

(ಆಧಾರ : ಮಾಸಿಕ ‘ಋಷಿಪ್ರಸಾದ’, ಮೇ ೨೦೨೧)