ನವ ದೆಹಲಿ – ಸಾಧುಗಳು, ಗುರುಗಳು, ಫಕೀರರು ಮತ್ತು ಇತರ ಧಾರ್ಮಿಕ ವ್ಯಕ್ತಿಗಳಿಗೆ ಸಾರ್ವಜನಿಕ ಭೂಮಿಯಲ್ಲಿ ಪ್ರಾರ್ಥನಾಸ್ಥಳಗಳು ಅಥವಾ ಸಮಾಧಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ, ಅದರ ಗಂಭೀರ ಪರಿಣಾಮಗಳಾಗಬಹುದು ಮತ್ತು ವ್ಯಾಪಕವಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ದೆಹಲಿ ಉಚ್ಚನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಂತ್ ನಾಗಾ ಬಾಬಾ ಭೋಲಾ ಗಿರಿ ಅವರು ತಮ್ಮ ಉತ್ತರಾಧಿಕಾರಿಗಳ ಮೂಲಕ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಈ ಟಿಪ್ಪಣೆ ಮಾಡಿದೆ.
ಈ ಅರ್ಜಿಯಲ್ಲಿ `ನಿಗಮ ಬೋಧ ಘಾಟ್‌ನಲ್ಲಿ ಜಾಗ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು’, ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಅರ್ಜಿದಾರರು ದೆಹಲಿ ವಿಶೇಷ ಕಾನೂನು ನಿರ್ಧರಿಸಿದಂತೆ 2006 ರ ಅವಧಿಪೂರ್ವ ಜಮೀನಿನ ಮಾಲೀಕತ್ವದ ಬಗ್ಗೆ ದಾವೆ ಮಾಡಿದ್ದರು. ಜಿಲ್ಲಾದಂಡಾಧಿಕಾರಿಗಳು ಈ ದಾವೆಯನ್ನು ಈ ಮೊದಲೇ ತಿರಸ್ಕರಿಸಿದ್ದರು. ಅವರು ಭೂಮಿಗೆ ಸಂಬಂಧಿಸಿದ ಕಂದಾಯ ದಾಖಲಾತಿಯಲ್ಲಿ ಲಭ್ಯವಿಲ್ಲವೆಂದು ತಿಳಿಸುತ್ತಾ ಮನವಿಯನ್ನು ತಿರಸ್ಕರಿಸಿದ್ದರು. ನ್ಯಾಯಾಲಯವು ಈ ಬಗ್ಗೆ ಮಾತನಾಡಿ, ನಾಗಾ ಸಾಧುಗಳು ಶಿವನ ಭಕ್ತರಾಗಿರುತ್ತಾರೆ. ಅವರಿಗೆ ಸಾಂಸಾರಿಕ (ಲೌಕಿಕ) ಮೋಹಗಳಿಂದ ದೂರವಾಗಿ ಮುಕ್ತ ಜೀವನವನ್ನು ಜೀವಿಸಬೇಕಾಗುತ್ತದೆ. ಇದರಿಂದ ಅವರು ತಮ್ಮ ಹೆಸರಿನ ಮೇಲೆ ಆಸ್ತಿಯ ಮಾಲೀಕತ್ವವನ್ನು ಪಡೆದುಕೊಳ್ಳುವುದು ಅವರ ಶ್ರದ್ಧೆ ಮತ್ತು ನಡವಳಿಕೆಗೆ ವಿರುದ್ಧವಾಗಿದೆ ಎಂದು ಹೇಳಿದೆ.