Statement by Supreme Court: ಯಾವುದೇ ಸರ್ಕಾರಿ ನೌಕರನು ಬಡ್ತಿಯನ್ನು ತನ್ನ ಹಕ್ಕು ಎಂದು ಪರಿಗಣಿಸುವಂತಿಲ್ಲ ! -ಸುಪ್ರೀಂ ಕೋರ್ಟ್

ನವ ದೆಹಲಿ – ಸರಕಾರಿ ನೌಕರರು ಹಕ್ಕು ಎಂದು ಬಡ್ತಿಯನ್ನು ಕೇಳುವಂತಿಲ್ಲ. ಸಂವಿಧಾನದ ಕಲಂ 16 ಅಡಿಯಲ್ಲಿ ಸಮಾನತೆಯ ತತ್ವದ ಉಲ್ಲಂಘನೆಯಾಗುತ್ತಿದ್ದರೆ, ಆಗ ಬಡ್ತಿಯ ನಿಲುವಿನಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಸೀಮಿತವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಂದು ಖಟ್ಲೆಯ ವಿಚಾರಣೆಯ ಸಂದರ್ಭದಲ್ಲಿ ತೀರ್ಪು ನೀಡಿದೆ.

2023ರಲ್ಲಿ ಅರ್ಹತೆ ಮತ್ತು ಹಿರಿತನದ ತತ್ವದ ಆಧಾರದ ಮೇಲೆ ಜಿಲ್ಲಾ ನ್ಯಾಯಾಧೀಶರ ಶೇಕಡಾ 65ರಷ್ಟು ಬಡ್ತಿ ಕೋಟಾಗೆ ಹಿರಿಯ ಸಿವಿಲ್ ನ್ಯಾಯಾಧೀಶರನ್ನು ಬಡ್ತಿ ನೀಡಲು ಗುಜರಾತ್ ಹೈಕೋರ್ಟ್ ಮಾಡಿದ ಶಿಫಾರಸುಗಳನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಈ ಬಗ್ಗೆ ತೀರ್ಪು ನೀಡುವಾಗ ನ್ಯಾಯಾಲಯವು, ಬಡ್ತಿಯ ಯಾವುದೇ ಮಾನದಂಡವನ್ನು ಸಂವಿಧಾನದಲ್ಲಿ ನಮೂದಿಸದೇ ಇರುವುದರಿಂದ ಸರಕಾರಿ ನೌಕರರು ಬಡ್ತಿಯನ್ನು ತಮ್ಮ ಮೂಲಭೂತ ಹಕ್ಕು ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದೆ. ಬಡ್ತಿಯ ನೀತಿಯು ಶಾಸಕಾಂಗ ಅಥವಾ ಕಾರ್ಯನಿರ್ವಾಹಕ ಮಂಡಳಿಯ ಮುಖ್ಯ ಕ್ಷೇತ್ರವಾಗಿದೆ. ಇದರಲ್ಲಿ ನ್ಯಾಯಾಂಗ ಪರಿಶೀಲನೆಗೆ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. ಆದರೂ ಭಾರತದಲ್ಲಿ ಯಾವುದೇ ಸರಕಾರಿ ನೌಕರನು ಬಡ್ತಿಯನ್ನು ಹಕ್ಕಿನ ವಿಷಯವಾಗಿ ತೆಗೆದುಕೊಳ್ಳುವಂತಿಲ್ಲ; ಏಕೆಂದರೆ ಬಡ್ತಿಗಾಗಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಸಂವಿಧಾನದಲ್ಲಿ ಯಾವುದೇ ಮಾನದಂಡವನ್ನು ತಿಳಿಸಿರುವುದಿಲ್ಲ. ಉದ್ಯೋಗದ ಸ್ವರೂಪ ಮತ್ತು ಅಗತ್ಯ ಕರ್ತವ್ಯಗಳ ಆಧಾರದ ಮೇಲೆ ಶಾಸಕಾಂಗ ಅಥವಾ ಕಾರ್ಯನಿರ್ವಾಹಕ ಬಡ್ತಿಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಧಾನವನ್ನು ನ್ಯಾಯಾಲಯಗಳು ಮರುಪರಿಶೀಲಿಸುವಂತಿಲ್ಲ.