ತೂಕವನ್ನು ಇಳಿಸಲು ಜೇನುತುಪ್ಪನೀರು ಅಥವಾ ನಿಂಬೆಯನೀರು ಎಷ್ಟು ಉಪಯುಕ್ತವಾಗಿದೆ ?

ಜೇನುತುಪ್ಪನೀರು ಅಥವಾ ನಿಂಬೆನೀರಿ ನಲ್ಲಿ ತಂಪುಪಾನೀಯ (ಕೋಲ್ಡ್ ಡ್ರಿಂಕ್ಸ್‌) ಅಥವಾ ಹಣ್ಣುಗಳ ರಸಕ್ಕಿಂತಲೂ ಕಡಿಮೆ ಕ್ಯಾಲೋರಿಸ್‌ ಇರುತ್ತವೆ. ಅರ್ಧ ನಿಂಬೆಯ ರಸವನ್ನು ನೀರಿನಲ್ಲಿ ಹಿಂಡಿ ಕುಡಿದರೆ, ಅದರಿಂದ ೯ ಕ್ಯಾಲೋರಿಸ್‌ ಸಿಗುತ್ತವೆ ಮತ್ತು ಒಂದು ಚಮಚ ಜೇನುತುಪ್ಪವನ್ನು ನೀರಿನಲ್ಲಿ ಹಾಕಿದರೆ, ೩೪ ಕ್ಯಾಲೋರಿಸ್‌ ಸಿಗುತ್ತದೆ. ಬಹಳಷ್ಟು ಜನರು ತೂಕ ಇಳಿಸಲು ಬೆಳಗ್ಗೆ ಎದ್ದ ನಂತರ ಜೇನುತುಪ್ಪ, ನಿಂಬೆರಸ ಮತ್ತು ನೀರು ಅಥವಾ ನಿಂಬೆರಸದ ನೀರನ್ನು ಕುಡಿಯುತ್ತಾರೆ. ಒಂದು ವೇಳೆ ಬೆಳಗ್ಗೆ ಎದ್ದ ನಂತರ ಕುಡಿದರೆ, ದೇಹವು ‘ಹೈಡ್ರೆಟ್’ ಆಗುತ್ತದೆ, ಅಂದರೆ ನೀರು ಸಿಗುತ್ತದೆ ಮತ್ತು ಚಯಾಪಚಯದ ಪ್ರಕ್ರಿಯೆ ಸುಧಾರಿಸಲು ಸಹಾಯವಾಗುತ್ತದೆ. ಈ ಪಾನೀಯ ದಲ್ಲಿ ಬಹಳ ಕಡಿಮೆ ‘ಫೈಬರ್ಸ್‌’(ತಂತು), ಜೀವಸತ್ತ್ವ ಮತ್ತು ‘ಮಿನರಲ್ಸ್‌’ (ಖನಿಜ ಪದಾರ್ಥ) ಸಿಗುತ್ತವೆ.

ಡಾ. ಪ್ರಣಿತಾ ಅಶೋಕ

ನಿಂಬೆಯನೀರಿಗಿಂತ ನಿಂಬೆಯ ರಸವನ್ನು ವಿವಿಧ ಪದಾರ್ಥಗಳಲ್ಲಿ ಸೇರಿಸಿ ಸೇವಿಸುವುದು ಮಹತ್ವದ್ದು

ಯಾರಿಗೆ ಕೇವಲ ಜೇನುತುಪ್ಪದ ನೀರು, ನಿಂಬೆ ನೀರನ್ನು ಕುಡಿದರೆ ಹೊಟ್ಟೆ ಸ್ವಚ್ಛವಾಗುತ್ತದೆ, ಹಸಿವೆ ಕಡಿಮೆಯಾಗುತ್ತದೆ, ಉತ್ಸಾಹವರ್ಧಕವೆನಿಸುತ್ತದೆ, ಹಾಗೆಯೇ ‘ತೂಕ ನಿಯಂತ್ರಣದಲ್ಲಿದೆ’, ಎಂದು ಅನಿಸುತ್ತದೆಯೋ, ಅವರು ಅದನ್ನು ಮುಂದುವರೆಸಬಹುದು. ನಿಂಬೆಹಣ್ಣಿನಲ್ಲಿ ‘ಜೀವಸತ್ತ್ವ ಸಿ’ (ವಿಟ್ಯಾಮಿನ್‌ ಸಿ) ಸಿಗುತ್ತದೆ; ಆದರೆ ಅದು ಇತರ ಪದಾರ್ಥಗಳಲ್ಲಿಯೂ ಸಿಗುತ್ತದೆ. ನಿಂಬೆಯ ರಸದಲ್ಲಿ ಸಿಗುವ ಆಮ್ಲದಿಂದಾಗಿ ಹಲ್ಲುಗಳ ಮೇಲಿನ ಮಿಂಚುವ ಗಟ್ಟಿಯಾದ ಕವಚದ ಮೇಲೆ ಪರಿಣಾಮವಾಗಿ ಹಲ್ಲುಗಳು ಹುಳಕಾಗಬಹುದು. ಪಿತ್ತದ (‘ಯಾಸಿಡಿಟಿ’ಯ) ತೊಂದರೆ ಇದ್ದರೆ, ಅದು ಇನ್ನಷ್ಟು ಹೆಚ್ಚಾಗಬಹುದು. ಖಾಲಿ ಹೊಟ್ಟೆಯಲ್ಲಿ ಯಾವುದೇ ಪದಾರ್ಥವನ್ನು ಸೇವಿಸಿದರೂ, ದೇಹದಲ್ಲಿ ಅದರ ಪರಿಣಾಮ ಬೇಗನೆ ಆಗುತ್ತದೆ. ನಿಂಬೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದಕ್ಕಿಂತ ಸಾಯಂಕಾಲ ಕುಡಿಯಬೇಕು. ನಿಂಬೆ ನೀರಿನ ಬದಲು ನಿಂಬೆರಸವನ್ನು ವಿವಿಧ ಪದಾರ್ಥಗಳಲ್ಲಿ ಸೇರಿಸಿ ಸೇವಿಸಬಹುದು. ಇದರಿಂದ ಕಬ್ಬಿಣಾಂಶವು ದೇಹದಲ್ಲಿ ಒಳ್ಳೆಯ ರೀತಿಯಲ್ಲಿ ಹೀರಲ್ಪಡುತ್ತದೆ ಮತ್ತು ನಿಂಬೆಯಲ್ಲಿ ‘ವಿಟ್ಯಾಮಿನ್‌ ಸಿ’ ಸಿಗುತ್ತದೆ. ನಿಂಬೆಯ ಸಿಪ್ಪೆಯಲ್ಲಿಯೂ ಜೀವಸತ್ತ್ವ ಮತ್ತು ಖನಿಜ ಪದಾರ್ಥಗಳಿರುತ್ತವೆ. ಆದುದರಿಂದ ನೀವು ನಿಂಬೆಯ ಉಪ್ಪಿನಕಾಯಿಯನ್ನು ತಿನ್ನಬಹುದು.

ಕೊಬ್ಬು ಕಡಿಮೆ ಮಾಡಲು ನಿಯಮಿತ ವ್ಯಾಯಾಮ ಮಾಡುವುದು ಮತ್ತು ಯೋಗ್ಯ ಆಹಾರ ಸೇವಿಸುವುದು ಆವಶ್ಯಕ !

ನಿಂಬೆಯ ನೀರು ಅಥವಾ ಜೇನುತುಪ್ಪದ ನೀರನ್ನು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗುವುದಿಲ್ಲ. ಕೊಬ್ಬು ಕಡಿಮೆ ಮಾಡಲು ನಿಯಮಿತ ವ್ಯಾಯಾಮ ಮಾಡುವುದು ಮತ್ತು ಯೋಗ್ಯ ಆಹಾರ ಸೇವಿಸುವುದು ಆವಶ್ಯಕವಾಗಿದೆ. ಒಂದು ವೇಳೆ ನಿಂಬೆಯ ನೀರಿನ ಸೇವನೆಯಿಂದ ತೂಕ ಕಡಿಮೆಯಾಗಿದ್ದರೆ, ಆ ವ್ಯಕ್ತಿಯು ಜೀವನಶೈಲಿಯಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದಾನೆಯೇ ಎಂದು ನೋಡಬೇಕು.

– ಡಾ. ಪ್ರಣಿತಾ ಅಶೋಕ, ಎಮ್‌.ಬಿ.ಬಿ.ಎಸ್‌., ಎಮ್‌.ಡಿ., ಪಿಎಚ್‌.ಡಿ. (ಆಹಾರಕ್ಕೆ ಸಂಬಂಧಿತ)