ಆರೋಗ್ಯ!

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳ ಪಾಲನೆಯಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ; ಆದರೆ ಜೀವನದಾತನ ಜೀವನಶಕ್ತಿಯು ಸಹಕರಿಸಿದಾಗ ಮಾತ್ರ ವೈದ್ಯರ ಉಪಚಾರಗಳು ಯಶಸ್ವಿಯಾಗಿ ರೋಗಿ ಗುಣಮುಖನಾಗುತ್ತಾನೆ.

ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವೆಂದರೆ ಸುಖಸಂವೇದನೆಯನ್ನು ಅನುಭವಿಸುವ ಅವಸ್ಥೆ, ಅಂದರೆ ಆರೋಗ್ಯ. ಬಲಶಾಲಿ, ಬಲಿಷ್ಠ, ಒಳ್ಳೆಯ ಮೈಕಟ್ಟು ಹಾಗೂ ದಷ್ಟಪುಷ್ಟ ಶರೀರ, ತೇಜಸ್ವಿ ಕಣ್ಣುಗಳು, ಕಾಂತಿ ಯುಕ್ತ ತ್ವಚೆ, ಹೊಳೆಯುವ ಕೂದಲು, ಒಳ್ಳೆಯ ಹಸಿವು, ಶಾಂತ ನಿದ್ರೆ, ನಾಡಿ, ಶ್ವಾಸ, ಮಲ-ಮೂತ್ರ, ಕೀಲುಗಳ ಚಲನೆ, ಇತರ ಎಲ್ಲ ಅವಯವಗಳ ಹಾಗೂ ಎಲ್ಲ ಇಂದ್ರಿಯಗಳ ಕಾರ್ಯಗಳು ವ್ಯವಸ್ಥಿತ ಹಾಗೂ ಸಹಜವಾಗಿ ನಡೆಯುವುದು ಎಂದರೆ ಶಾರೀರಿಕ ಆರೋಗ್ಯದ ಲಕ್ಷಣಗಳಾಗಿವೆ. ಮನಸ್ಸಿನಲ್ಲಿ ಯಾವುದೇ ದುಃಖ ಅಥವಾ ಒತ್ತಡ ಇಲ್ಲದಿರುವುದು, ಕಾಮ-ಕ್ರೋಧಾದಿ ಷಡ್ರಿಪುಗಳು ಹತೋಟಿಯಲ್ಲಿರುವುದು, ಕರ್ತವ್ಯದಕ್ಷನಾಗಿರುವುದು, ಪ್ರತಿಯೊಂದು ಕೃತಿಯನ್ನು ಕೌಶಲ್ಯದಿಂದ ಹಾಗೂ ಉತ್ಸಾಹದಿಂದ ಮಾಡುವುದು, ಮಾನಸಿಕ ಆರೋಗ್ಯದ ಲಕ್ಷಣಗಳಾಗಿವೆ. ಸತತವಾಗಿ ಸಚ್ಚಿದಾನಂದ ಸ್ವರೂಪದಲ್ಲಿರುವುದು, ಅದಕ್ಕಾಗಿ ಸ್ವಾರ್ಥ ಹಾಗೂ ಆಸಕ್ತಿಯನ್ನು ತ್ಯಜಿಸಿ ನಿಷ್ಕಾಮ ಬುದ್ಧಿಯಿಂದ ಭಗವದ್ಭಕ್ತಿಯನ್ನು ಮಾಡುವುದು ಹಾಗೂ ಅದರಲ್ಲಿ ಸಮಾಧಾನದಲ್ಲಿರುವುದು ಅಂದರೆ ಆಧ್ಯಾತ್ಮಿಕ ಆರೋಗ್ಯವಾಗಿದೆ. ನಾವು ಸಮಾಜದ ಒಂದು ಘಟಕವಾಗಿದ್ದು ಸಮಾಜವು ಸುಖಿಯಾಗಿದ್ದರೆ ಮಾತ್ರ, ನಾವು ಸುಖಿಯಾಗಬಹುದು. ಅದಕ್ಕಾಗಿ ಇತರರಿಗಾಗಿ ಶ್ರಮಿಸುವ ಮನೋವೃತ್ತಿ, ಎಲ್ಲರ ಬಗ್ಗೆ ಪ್ರೀತಿ, ಕ್ಷಮಾಶೀಲತೆ, ಸಮಾಜ ಕಾರ್ಯಕ್ಕಾಗಿ ಸಮಯ ನೀಡುವುದು ಇತ್ಯಾದಿಗಳಿಂದ ಸಮಾಜದ ಆರೋಗ್ಯದ ರಕ್ಷಣೆಯಾಗಬಹುದು. ಕೇವಲ ರೋಗದಿಂದ ಮಾತ್ರವಲ್ಲ, ಭವರೋಗದಿಂದ ಅಂದರೆ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿ ಮಾನವನನ್ನು ದುಃಖದಿಂದ ಶಾಶ್ವತವಾಗಿ ಮುಕ್ತಗೊಳಿಸುವುದು ಹಾಗೂ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದೇ ಆಯುರ್ವೇದದ ಅಂತಿಮಧ್ಯೇಯವಾಗಿದೆ.