Announcement by Allahabad HC : ಹಿಂದೂ ವಿವಾಹ ಸಿಂಧುತ್ವಕ್ಕೆ ‘ಕನ್ಯಾದಾನ’ ವಿಧಿ ಕಡ್ಡಾಯವಲ್ಲ ಸಪ್ತಪದಿಯಾಗಿದ್ದರೆ ಸಾಕು! – ಅಲಹಾಬಾದ್ ಉಚ್ಚ ನ್ಯಾಯಾಲಯ

ಪ್ರಯಾಗರಾಜ (ಉತ್ತರ ಪ್ರದೇಶ) – ಕನ್ಯಾದಾನವು ಹಿಂದೂ ವಿವಾಹದ ಅನಿವಾರ್ಯ ವಿಧಿ ಅಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ ಹೇಳಿದೆ. ನ್ಯಾಯಾಲಯವು, ‘ಹಿಂದೂ ವಿವಾಹ ಕಾಯ್ದೆ, 1955’ ರಲ್ಲಿ ಹಿಂದೂ ವಿವಾಹಕ್ಕೆ ಕೇವಲ ಸಪ್ತಪದಿ ಕಡ್ಡಾಯವೆಂದು ಪರಿಗಣಿಸಲಾಗಿದೆ ಎಂದು ಹೇಳಿದೆ. ಕಾನೂನಿನಲ್ಲಿ ಕನ್ಯಾದಾನದ ಉಲ್ಲೇಖವಿಲ್ಲ. ಕನ್ಯಾದಾನ ಹಿಂದೂ ವಿವಾಹಕ್ಕೆ ಅನಿವಾರ್ಯ ಷರತ್ತು ಆಗಿಲ್ಲ.

1. ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಇವರು, ಹಿಂದೂ ವಿವಾಹ ಕಾನೂನು, 1955 ರ ಪ್ರಕಾರ, `ಸಪ್ತಪದಿ’ ಮದುವೆಯ ಏಕೈಕ ಕಡ್ಡಾಯ ವಿಧಿಯೆಂದು ಪರಿಗಣಿಸಲಾಗುತ್ತದೆ, ‘ಕನ್ಯಾದಾನ’ವು ಒಂದು ಸಾಂಸ್ಕೃತಿಕ ವಿಧಿಯಾಗಿದೆ. ಇದರಲ್ಲಿ ತಂದೆ ತನ್ನ ಪುತ್ರಿಯನ್ನು ವರನಿಗೆ ಒಪ್ಪಿಸುತ್ತಾನೆ. ಈ ವಿಧಿ ಪಿತೃತ್ವದಿಂದ ಸ್ತ್ರೀತ್ವದ ಪ್ರವಾಸದ ಪ್ರತೀಕವಾಗಿದೆ, ‘ಕನ್ಯಾದಾನ’ ಒಂದು ಮಹತ್ವದ ವಿಧಿಯಾಗಿರಬಹುದು. ಆದರೆ ಮದುವೆಯ ಸಿಂಧುತ್ವಕ್ಕೆ ಇದು ಅಗತ್ಯವಿಲ್ಲ. ಈ ವಿಧಿಯ ಆಚರಣೆ ಮಹಿಳೆಯರ ಅಸಮಾನತೆಗೆ ಕಾರಣವಾಗಬಹುದು. ಹಿಂದೂ ವಿವಾಹ ಕಾಯಿದೆಯ ಕಲಂ 7 ರಲ್ಲಿ, ಹಿಂದೂ ವಿವಾಹವು ವಿವಾಹದ ಯಾವುದೇ ಪಕ್ಷದ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳ ಪ್ರಕಾರ ಶಾಸ್ತ್ರೋಕ್ತವಾಗಿ ನಡೆಸಬಹುದು. ಎಲ್ಲಿ ಇಂತಹ ವಿಧಿಗಳು ಮತ್ತು ಸಮಾರಂಭಗಳಲ್ಲಿ ಸಪ್ತಪದಿ (ವಧು ಮತ್ತು ವರರು ಪವಿತ್ರ ಅಗ್ನಿಯ ಮುಂದೆ ಒಟ್ಟಿಗೆ 7 ಹೆಜ್ಜೆಗಳನ್ನು ಹಾಕುವುದು) ಇರುತ್ತದೆಯೋ, ಆಗ ವಿವಾಹ ಪೂರ್ಣಗೊಳ್ಳುತ್ತದೆ ಮತ್ತು ಏಳು ಹೆಜ್ಜೆ ಒಟ್ಟಿಗೆ ಹಾಕುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

2. ಅರ್ಜಿದಾರರು, 2015 ರಲ್ಲಿ ನಡೆದ ವಿವಾಹ ಸಮಾರಂಭವನ್ನು ಸಮರ್ಥಿಸಲು ಸಿದ್ಧಪಡಿಸಿದ್ದ ವಿವಾಹ ಪ್ರಮಾಣಪತ್ರಕ್ಕೆ ಸಾಕ್ಷಿಗಳ ಹಿಂದಿನ ನಿಬಂಧನೆಗಳಲ್ಲಿ ಕೆಲವು ವ್ಯತ್ಯಾಸಗಳಿವೆ ಎಂದು ಆರೋಪಿಸಿದ್ದರು. ಕನ್ಯಾದಾನವು ಹಿಂದೂ ವಿವಾಹದ ಅತ್ಯಾವಶ್ಯಕ ಭಾಗವಾಗಿರುವುದರಿಂದ ಮದುವೆಯ ಸಮಯದಲ್ಲಿ ಕನ್ಯಾದಾನವನ್ನು ಮಾಡಲಾಯಿತೋ ಅಥವಾ ಇಲ್ಲವೋ? ಎಂದು ಪರಿಶೀಲಿಸಲು, ಇಬ್ಬರು ಸಾಕ್ಷಿಗಳನ್ನು (ಒಬ್ಬ ಮಹಿಳೆ ಮತ್ತು ಆಕೆಯ ತಂದೆ) ಮರು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

3. ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ಅರ್ಜಿದಾರರು ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಉಚ್ಚನ್ಯಾಯಾಲಯವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿ, ಕನ್ಯಾದಾನ ಆಗಿದೆಯೇ ಅಥವಾ ಇಲ್ಲವೇ ಎನ್ನುವುದರ ಮೇಲೆ ಹಿಂದೂ ವಿವಾಹದ ಸಿಂಧುತ್ವವನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಕನ್ಯಾದಾನ ವಿಧಿಯನ್ನು ಮಾಡಲಾಗಿದೆಯೇ ಅಥವಾ ಇಲ್ಲವೇ, ಎನ್ನುವುದು ಪ್ರಕರಣದ ಸರಿಯಾದ ನ್ಯಾಯ ತೀರ್ಮಾನಕ್ಕೆ ಆವಶ್ಯಕವಿಲ್ಲ ಮತ್ತು ಆದರಿಂದಲೇ ಸತ್ಯವನ್ನು ಸಾಬೀತುಪಡಿಸಲು ಸಾಕ್ಷಿಗಳನ್ನು ಕರೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂ ಧರ್ಮದ ವಿಧಿ ಮತ್ತು ಭಾರತೀಯ ಕಾನೂನಿನ ಕಲಂ ನಡುವೆ ಅನೇಕ ವ್ಯತ್ಯಾಸಗಳಿವೆ. ಜಾತ್ಯತೀತ ದೇಶದ ಕಾನೂನುಗಳಲ್ಲಿ ಹಿಂದೂ ಧರ್ಮದ ವಿಧಿಗಳಿಗೆ ಅತಿ ಕಡಿಮೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಿಂದ ಇಂತಹ ತೀರ್ಪುಗಳು ಬರುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ !