S Jaishankar To UN : ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ!

ಭಾರತದ ಚುನಾವಣೆಯ ಬಗ್ಗೆ ಹೇಳಿಕೆ ನೀಡುವ ವಿಶ್ವಸಂಸ್ಥೆಗೆ ವಿದೇಶಾಂಗ ಸಚಿವರಿಂದ ಛೀಮಾರಿ!

ನವದೆಹಲಿ – ಭಾರತದಲ್ಲಿ ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ. ನನ್ನ ಜೊತೆ ಭಾರತದ ಜನತೆಯಿದೆ ಮತ್ತು ಭಾರತದ ಜನತೆಯು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುತ್ತದೆಯೆಂದು ಭರವಸೆ ನೀಡುತ್ತದೆ, ಆ ಬಗ್ಗೆ ನಮಗೆ ಚಿಂತೆಯಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಜೈಶಂಕರ್ ವಿಶ್ವಸಂಸ್ಥೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ದುಜಾರಿಕ್ ಅವರು ಮಾರ್ಚ್ 29 ರಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲಾಗುತ್ತದೆಯೆಂದು ನಾವು ಭಾವಿಸುತ್ತೇವೆ. ಸದ್ಯ ಭಾರತದಲ್ಲಿ ಚುನಾವಣಾ ಸಮಯವಾಗಿದೆ. ಆದ್ದರಿಂದ, ಎಲ್ಲ ನಾಗರಿಕರು ಸುರಕ್ಷಿತ ವಾತಾವರಣದಲ್ಲಿ ಮತದಾನ ಮಾಡುವ ಅವಕಾಶವನ್ನು ಪಡೆಯಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಭಾರತದಲ್ಲಿ ನಿರ್ಮಾಣವಾಗಿರುವ ರಾಜಕೀಯ ವಾತಾವರಣದ ಬಗ್ಗೆ ವಿಚಾರಿಸಿದಾಗ, ಇದಕ್ಕೆ ಪ್ರತಿಕ್ರಿಯಿಸುತ್ತಾ ಸ್ಟೀಫನ್ ಅವರು ಈ ಹೇಳಿಕೆ ನೀಡಿದ್ದರು.