ಅಮೇರಿಕಾದಿಂದ ವಿಶೇಷ ಅಧಿಕಾರದ ಬಳಕೆ !
ನ್ಯೂಯಾರ್ಕ್ – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇತ್ತೀಚೆಗೆ ರಂಜಾ಼ನ್ ಹಿನ್ನೆಲೆಯಲ್ಲಿ ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮದ ನಿರ್ಣಯವನ್ನು ಅಂಗೀಕರಿಸಿದೆ. ಸಭೆಯ 15 ಸದಸ್ಯರಲ್ಲಿ 14 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರು ಇದರಲ್ಲಿ ಅಮೇರಿಕಾ ಮತದಾನದಿಂದ ದೂರವಿತ್ತು. ಕಳೆದ ಐದೂವರೆ ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪದಿಂದ ಅಮೆರಿಕ ದೂರ ಸರಿದಿದೆ. ಇದಕ್ಕೂ ಮೊದಲು ಅಮೇರಿಕಾವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕದನ ವಿರಾಮ ನಿರ್ಣಯಗಳ ಕುರಿತು ಮೂರು ಬಾರಿ ‘ವೀಟೋ ಪವರ್’ ಅನ್ನು ಬಳಸಿತ್ತು.
ಇಸ್ರೇಲ್-ಹಮಾಸ್ ಯುದ್ಧವನ್ನು ತಡೆಗಟ್ಟುವ ಮೊದಲ ಪ್ರಸ್ತಾಪವನ್ನು ಮಾಲ್ಟಾ ನವೆಂಬರ್ 2023 ರಲ್ಲಿ ಮಾಡಿತು, ಎರಡನೆಯದು ಯುನೈಟೆಡ್ ಅರಬ್ ಎಮಿರೇಟ್ಸ್ ಡಿಸೆಂಬರ್ 2023 ರಲ್ಲಿ ಮತ್ತು ಮೂರನೆಯದು ಅಲ್ಜೀರಿಯಾ ಫೆಬ್ರವರಿ 2024 ರಲ್ಲಿ ಮಂಡಿಸಿತ್ತು. ಎಲ್ಲಾ ಮೂರು ಪ್ರಸ್ತಾಪಗಳನ್ನು ಅಮೇರಿಕಾವು ವಿಶೇಷಾಧಿಕಾರ ಬಳಸಿಕೊಂಡು ತಿರಸ್ಕರಿಸಿತ್ತು.
ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !
ಕದನವಿರಾಮ ನಿರ್ಣಯದ ಮೇಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮತದಾನದಲ್ಲಿ ಪಾಲ್ಗೊಳ್ಳದ ಅಮೇರಿಕಾದ ವಿರುದ್ಧ ಇಸ್ರೇಲ್ ಆಕ್ರೋಶ ವ್ಯಕ್ತಪಡಿಸಿದೆ. ಅಮೇರಿಕಾ ತನ್ನ ‘ವೀಟೋ’ ಅಧಿಕಾರವನ್ನು ಚಲಾಯಿಸದೇ ಇದ್ದದ್ದರಿಂದ ಇಸ್ರೇಲ್ ತನ್ನ ಉನ್ನತ ಮಟ್ಟದ ನಿಯೋಗದ ವಾಷಿಂಗ್‌ಟನ್ ಭೇಟಿಯನ್ನು ರದ್ದು ಮಾಡಿದೆ.
‘ವೀಟೋ ಪವರ್‘ ಎಂದರೇನು ?
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐದು ಖಾಯಂ ಸದಸ್ಯರನ್ನು ಹೊಂದಿದೆ. ಅಮೇರಿಕಾ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ. ಈ ದೇಶಗಳಿಗೆ ಮಾತ್ರ ವೀಟೋ ಅಧಿಕಾರ ಅಂದರೆ ವಿಶೇಷಾಧಿಕಾರವಿದೆ. ಐವರು ಸದಸ್ಯರಲ್ಲಿ ಒಬ್ಬರು ವೀಟೋ ಬಳಸಿದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ತಿರಸ್ಕರಿಸಲಾಗುತ್ತದೆ.