Moscow ISIS Attack : ರಷ್ಯಾದಲ್ಲಿ ಉಗ್ರರ ದಾಳಿ 60 ಸಾವು : 145 ಮಂದಿಗೆ ಗಾಯ

  • ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

  • ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಮಾಸ್ಕೋ (ರಷ್ಯಾ) – ರಷ್ಯಾದ ರಾಜಧಾನಿ ಮಾಸ್ಕೋದ ಹಾಲ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದರೆ 145 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ. ವಿಶೇಷವೆಂದರೆ ಈ ಹಿಂದೆಯೂ ಕೂಡ ರಷ್ಯಾದಲ್ಲಿ ಇಂತಹ ಭಯೋತ್ಪಾದಕ ದಾಳಿಗಳು ನಡೆದಿದ್ದವು.

(ಸೌಜನ್ಯ – The Telegraph)

1. ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 6 ಸಾವಿರ ಜನರು ಉಪಸ್ಥಿತರಿದ್ದರು. ಹಠಾತ್ ಆಗಿ ಸಭಾಂಗಣಕ್ಕೆ ನುಗ್ಗಿದ 6-7 ಉಗ್ರರು ರೈಫಲ್‌ ನಿಂದ ಮನಬಂದಂತೆ ಗುಂಡು ಹಾರಿಸಿದರು. ಸುಮಾರು 15 ರಿಂದ 20 ನಿಮಿಷಗಳ ಕಾಲ ಈ ಗುಂಡಿನ ದಾಳಿ ನಡೆದಿದ್ದು, ಅನೇಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಷ್ಟಕ್ಕೇ ನಿಲ್ಲದ ಈ ಭಯೋತ್ಪಾದಕರು ಸಭಾಂಗಣದಲ್ಲಿ ಬಾಂಬ್ ಸ್ಫೋಟಿಸಿ ನಂತರ ಬೆಂಕಿ ಹಚ್ಚಿದರು. ದಾಳಿ ನಡೆಸಿದ ಈ ಉಗ್ರರು ಸೈನಿಕರ ಸಮವಸ್ತ್ರದಲ್ಲಿ ಬಂದಿದ್ದರು.

2. ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ, ಭಯೋತ್ಪಾದಕರು ಮೊದಲು ಸಭಾಂಗಣದ ಹೊರಗೆ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು ಮತ್ತು ನಂತರ ಸಭಾಂಗಣಕ್ಕೆ ಪ್ರವೇಶಿಸಿದರು. ಈ ದಾಳಿಯ ಮಾಹಿತಿ ತಿಳಿದ ಕೂಡಲೇ ರಷ್ಯಾದ ಸೈನಿಕರು ಅಲ್ಲಿಗೆ ತಲುಪಿದರು. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಯೋತ್ಪಾದಕರಿಗೆ ರಷ್ಯಾ ಸೇನೆ ಪ್ರತ್ಯುತ್ತರ ನೀಡಿದೆ ಎಂದು ರಷ್ಯಾದ ರಕ್ಷಣಾ ಸಚಿವರು ತಿಳಿಸಿದ್ದಾರೆ.

3. ಈ ದಾಳಿಯನಂತರ ರಷ್ಯಾದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿವಿಧ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಾಸ್ಕೋದ ಮೇಯರ್ ನಗರದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಮತ್ತು ನಗರದಲ್ಲಿನ ಚಿತ್ರಮಂದಿರಗಳು ಮತ್ತು ವಸ್ತುಸಂಗ್ರಹಾಲಯಗಳನ್ನು 2 ದಿನಗಳವರೆಗೆ ಮುಚ್ಚಲಾಗಿದೆ.

ಅಮೇರಿಕಾದ ರಾಯಭಾರ ಕಚೇರಿಯು ದಾಳಿಯ ಬಗ್ಗೆ ಮುಂಚಿತವಾಗಿ ಸೂಚನೆ ನೀಡಿದ್ದರಿಂದ ಪುತಿನ್ ಅಮೇರಿಕಾವನ್ನು ಖಂಡಿಸಿದ್ದರು!

ರಷ್ಯಾದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿ ಇಂತಹ ದಾಳಿಯ ಸಾಧ್ಯತೆಯ ಬಗ್ಗೆ ಮುಂಚೆಯೇ ಸುಳಿವು ನೀಡಿತ್ತು. ರಷ್ಯಾದಲ್ಲಿರುವ ಅಮೇರಿಕಾದ ನಾಗರಿಕರಿಗೆ ಮುಂದಿನ 48 ಗಂಟೆಗಳ ಕಾಲ ಯಾವುದೇ ದೊಡ್ಡ ಕಾರ್ಯಕ್ರಮಕ್ಕೆ ಹಾಜರಾಗದಂತೆ ರಾಯಭಾರಿಯು ಎಚ್ಚರಿಕೆ ನೀಡಿತ್ತು. ಅಮೆರಿಕ ರಾಯಭಾರಿ ಕಚೇರಿ ನೀಡಿದ ಈ ಎಚ್ಚರಿಕೆಯನ್ನು ಪುತಿನ್ ಖಂಡಿಸಿದ್ದರು.

ಉಕ್ರೇನ್‌ನಿಂದ ಸ್ಪಷ್ಟೀಕರಣ

ರಷ್ಯಾದಲ್ಲಿ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದ್ದರೂ ಸಹ, ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಉಕ್ರೇನ್ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಉಕ್ರೇನ್ ಮಾನಹಾನಿ ಮಾಡುವ ಕುತಂತ್ರವಿದು ಎಂದು ಹೇಳಿದೆ. ಸದ್ಯ ಈ ದಾಳಿಯ ಬಗ್ಗೆ ಪುತಿನ್ ಯಾವುದೇ ಹೇಳಿಕೆ ನೀಡಿಲ್ಲ.

ಕ್ರೈಸ್ತರ ದೊಡ್ಡ ಕಾರ್ಯಕ್ರಮದ ಮೇಲೆ ದಾಳಿ ! – ಇಸ್ಲಾಮಿಕ್ ಸ್ಟೇಟ್

‘ಅಮಾಕ್’ ಈ ವಾರ್ತಾ ಸಂಸ್ಥೆಯ ಮೂಲಕ ಇಸ್ಲಾಮಿಕ್ ಸ್ಟೇಟ್ ಒಂದು ಬರಹವನ್ನು ಪ್ರಸಾರ ಮಾಡಿದೆ. ಅದರಲ್ಲಿ ಇಸ್ಲಾಮಿಕ್ ಸ್ಟೇಟ್ ನ ಸೈನಿಕರು ರಷ್ಯಾದ ರಾಜಧಾನಿ ಮಾಸ್ಕೋದ ಹೊರಗಿನ ಕ್ರಾಸ್ನೋಗೊರ್ಸ್ಕ್ ನಗರದಲ್ಲಿ ಕ್ರೈಸ್ತರ ದೊಡ್ಡ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ್ದಾರೆ. ಭಯೋತ್ಪಾದಕರು ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ಹಿಂದಿರುಗುವ ಮೊದಲು ಅವರನ್ನು ನೂರಾರು ಜನರು ದಾಳಿ ಮಾಡಿ ಸಾಯಿಸಿದರು ಎಂದು ಹೇಳಿದೆ.

ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ !

ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಈ ದುಃಖದ ಸಮಯದಲ್ಲಿ ರಷ್ಯಾ ಜನರೊಂದಿಗೆ ಭಾರತ ಸರಕಾರ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರು ಇಡೀ ಜಗತ್ತನ್ನು ತಮ್ಮ ಹಿಡಿತದಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಇಡೀ ಜಗತ್ತು ಅಂತರ್ಮುಖವಾಗಿ ಅವಲೋಕನ ಮಾಡಿಕೊಳ್ಳಬೇಕಾಗಿದೆ ! ಯಾವ ಕಾರಣಗಳಿಂದ, ಯಾವ ವಿಚಾರದಿಂದ ಈ ಜಿಹಾದಿ ಭಯೋತ್ಪಾದಕರು ತಯಾರಾಗುತ್ತಾರೆ ಎಂಬುದರ ಅಧ್ಯಯನ ಮಾಡಬೇಕು ಮತ್ತು ಅಂತಹ ವಿಚಾರಧಾರೆಯನ್ನು ನಿಷೇಧಿಸಬೇಕಾಗಿದೆ. ಇದಕ್ಕಾಗಿ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶಗಳು ಮುಂದಾಳತ್ವವಹಿಸಬೇಕಾಗಿದೆ !