ಅಫ್ಘಾನಿಸ್ತಾನದಲ್ಲಿ ಟಿಟಿಪಿಯ 5-6 ಸಾವಿರ ಭಯೋತ್ಪಾದಕರು ! – ಪಾಕಿಸ್ತಾನ

(ಟಿಟಿಪಿ ಎಂದರೆ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ’)

ಇಸ್ಲಾಮಾಬಾದ (ಪಾಕಿಸ್ತಾನ) – ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಈ ಭಯೋತ್ಪಾದಕ ಸಂಘಟನೆಯ 5-6 ಸಾವಿರ ಭಯೋತ್ಪಾದಕರು ಅಫಘಾನಿಸ್ತಾನದಲ್ಲಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ರಾಯಭಾರಿ ಆಸಿಫ ದುರ್ರಾನಿ ಹೇಳಿದ್ದಾರೆ. ಇಸ್ಲಾಮಾಬಾದನಲ್ಲಿರುವ `ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್’ ಈ ಸಂಸ್ಥೆಯು ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ದುರ್ರಾನಿಯವರು, ಒಂದು ವೇಳೆ ನಾವು ಭಯೋತ್ಪಾದಕರ ಕುಟುಂಬಗಳನ್ನು ಸೇರಿಸಿದರೆ, ಈ ಸಂಖ್ಯೆ 70 ಸಾವಿರಕ್ಕೂ ಅಧಿಕವಿದೆಯೆಂದು ಹೇಳಿದರು. 2 ದಿನಗಳ ಹಿಂದೆ ಟಿಟಿಪಿಯ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 2 ಅಧಿಕಾರಿಗಳು ಮತ್ತು 7 ಸೈನಿಕರು ಸಾವನ್ನಪ್ಪಿದ್ದರು.

ಆಸಿಫ್ ದುರ್ರಾನಿ ಮಾತು ಮುಂದುವರಿಸಿ, ಪಾಕಿಸ್ತಾನ ಮತ್ತು ಟಿಟಿಪಿ ನಡುವೆ ಶಾಂತಿ ಮಾತುಕತೆಗಾಗಿ ಹಲವು ಪ್ರಯತ್ನಗಳು ವಿಫಲವಾಗಿವೆ. ಟಿಟಿಪಿಯ ಭಯೋತ್ಪಾದಕರು ಶರಣಾಗಲು ಸಿದ್ಧರಿಲ್ಲ ಹಾಗೂ ಅವರು ಪಾಕಿಸ್ತಾನಿ ಸಂವಿಧಾನವನ್ನು ಕೂಡ ಸ್ವೀಕರಿಸಲು ಸಿದ್ಧರಿಲ್ಲ. ಅಫಫ್ಘಾನಿಸ್ತಾನದ ಹಂಗಾಮಿ ಸರಕಾರ ಇಷ್ಟು ದೊಡ್ಡ ಸಂಖ್ಯೆಯ ಜನರ ದೈನಂದಿನ ವೆಚ್ಚಗಳನ್ನು ಪೂರೈಸುವಷ್ಟು ಸಕ್ಷಮವಾಗಿಲ್ಲದ ಕಾರಣ, ಯಾರೋ ಅವರಿಗೆ ಹಣವನ್ನು ನೀಡುತ್ತಿರುವಂತೆ ತೋರುತ್ತದೆ. ಟಿಟಿಪಿಯ ಭಯೋತ್ಪಾದಕರು ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್ ಮೇಲಿನ ದಾಳಿ ಸೇರಿದಂತೆ ಅವರು ನಡೆಸಿರುವ ಇತರ ಅಪರಾಧಗಳಿಗೆ ಕಾನೂನನ್ನು ಎದುರಿಸಲು ಸಿದ್ಧರಿಲ್ಲ. ಟಿಟಿಪಿ ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿದೆ ಮತ್ತು ಪಾಕಿಸ್ತಾನ ಸರಕಾರವು, ಟಿಟಿಪಿಯ ಭಯೋತ್ಪಾದಕರು ಶರಣಾಗಬೇಕು ಮತ್ತು ಅವರು ಶಸ್ತ್ರಾಸ್ತ್ರಗಳನ್ನು ಕೆಳಗಿಡಬೇಕೆಂದು ತಾಲಿಬಾನ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನಕ್ಕೆ ಈಗ ಟಿಟಿಪಿ ಮೂಲಕ ತನ್ನ ಪಾಪದ ಫಲ ಸಿಗುತ್ತಿದೆಯೆಂದು ಯಾರಾದರೂ ಹೇಳಿದರೆ, ತಪ್ಪು ತಿಳಿಯಬಾರದು !